Advertisement

ತಂಬಾಕು ನಾಡಿನಲ್ಲಿ ಗೆಲುವಿನ ಗುಂಗು

02:40 PM May 02, 2019 | pallavi |

ಚಿಕ್ಕೋಡಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದ ತಂಬಾಕು ನಾಡಿನ ನಿಪ್ಪಾಣಿ ವಿಧಾನಸಭೆ ಕ್ಷೇತ್ರದಲ್ಲಿ ಬೇರು ಮಟ್ಟದಿಂದ ನೆಲೆಯೂರಿದ ಬಿಜೆಪಿ ಭದ್ರಕೋಟೆಯನ್ನು ಕಾಂಗ್ರೆಸ್‌ ಭೇದಿಸಿ ಪ್ರಕಾಶ ಹುಕ್ಕೇರಿಗೆ ಮುನ್ನಡೆ ತಂದು ಕೊಡಬಹುದು ಎಂದು ಗಡಿ ಭಾಗದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

Advertisement

ಕ್ಷೇತ್ರದಲ್ಲಿ ಎರಡು ಬಾರಿ ಗೆಲುವಿನ ನಗೆ ಬೀರಿರುವ ಬಿಜೆಪಿ. ಮೋದಿ ಅಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಅಭಿವೃದ್ಧಿ ಕಾರ್ಯಗಳಿಂದ ಬಿಜೆಪಿ ಮತಗಳಿಕೆಯಲ್ಲಿ ಮುನ್ನಡೆ ಪಡೆದೇ ಪಡೆಯುವುದೆಂದು ಪಕ್ಷದ ವಲಯದಲ್ಲಿ ವಿಶ್ವಾಸ ಇದೆ. ಹೀಗಾಗಿ ಕ್ಷೇತ್ರ ಅಷ್ಟೇ ಅಲ್ಲದೇ ನೆರೆಯ ಮಹಾರಾಷ್ಟ್ರದಲ್ಲೂ ಹುಕ್ಕೇರಿ-ಜೊಲ್ಲೆ ಕುಟುಂಬದ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.

ಫಲಿತಾಂಶದ ಬಗ್ಗೆ ಕುತೂಹಲ ಹೊಂದಿರುವ ಮತದಾರರು ಮತ ಎಣಿಕೆಗೆ ಎದುರು ನೋಡುತ್ತಿದ್ದಾರೆ. ನಿಪ್ಪಾಣಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಶಶಿಕಲಾ ಜೊಲ್ಲೆ ನಿಪ್ಪಾಣಿ ಕ್ಷೇತ್ರದ ಶಾಸಕಿ ಆಗಿದ್ದರಿಂದ ಪತಿ ಅಣ್ಣಾಸಾಹೇಬ ಜೊಲ್ಲೆ ಲೋಕಸಭೆ ಬಿಜೆಪಿ ಅಭ್ಯರ್ಥಿಯಾಗಿರುವುದು ಬಿಜೆಪಿಗೆ ಆನೆ ಬಲ ತಂದು ಕೊಟ್ಟಿದೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಹಿಡಿತ ಸಾಧಿಸಿದೆ. ಬಿಜೆಪಿ ನಿಪ್ಪಾಣಿ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡರೆ ಮಾತ್ರ ಉಳಿದ ಕ್ಷೇತ್ರಗಳಲ್ಲಿ ಮುನ್ನಡೆ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಜೊಲ್ಲೆ ಕುಟುಂಬ ನಿಪ್ಪಾಣಿ ಭಾಗದಲ್ಲಿ ವಿವಿಧ ರಾಜಕೀಯ ತಂತ್ರ ಹೆಣೆದಿದೆ. ಇದರಿಂದ ಮತದಾರರು ಬಿಜೆಪಿ ಕಡೆ ವಾಲಿದ್ದಾರೆ ಎಂಬುದು ಬಿಜೆಪಿ ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಇನ್ನು ಬಿಜೆಪಿಗಿಂತ ನಾವೇನು ಕಡಿಮೆಯಿಲ್ಲ ಎಂಬ ಕಾಂಗ್ರೆಸ್‌ ಮುಖಂಡರ ಲೆಕ್ಕಾಚಾರ ಹಾಕಿಕೊಂಡು ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಸುಭಾಷ ಜೋಶಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ವಿಧಾನ ಪರಿಷತ್‌ ಸದಸ್ಯ ವೀರಕುಮಾರ ಪಾಟೀಲ ಮತ್ತು ನಗರಸಭೆ ಮಾಜಿ ನಗರಾಧ್ಯಕ್ಷ ವಿಲಾಸ ಗಾಡಿವಡ್ಡರ ಒಳಗೊಂಡ ತಂಡ ಇಡೀ ನಿಪ್ಪಾಣಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕೈಗೊಂಡು ಅಸ್ತಿತ್ವ ಉಳಿಸಿಕೊಳ್ಳುವ ಮೂಲಕ ಕಾಂಗ್ರೆಸ್‌ಗೆ ಮುನ್ನಡೆ ಕೊಡಬೇಕು ಇಲ್ಲವಾದರೆ ಬಿಜೆಪಿ ಸರಿಸಮನಾಗಿ ಮತಗಳನ್ನು ತಂದುಕೊಡುವ ನಿಟ್ಟಿನಲ್ಲಿ ಚುನಾವಣೆ ಸಂದರ್ಭದಲ್ಲಿ ಹಗಲಿರುಳು ಕೆಲಸ ಮಾಡಿದ್ದಾರೆ. ಬಿಜೆಪಿಗೆ ಬರುವ ಹೆಚ್ಚಿನ ಮತಗಳ ಅಂತರವನ್ನು ಈ ಬಾರಿ ಕಾಂಗ್ರೆಸ್‌ ತಡೆಹಿಡಿದಿದೆ ಎಂಬುದು ಕಾಂಗ್ರೆಸ್‌ ಮುಖಂಡರ ಲೆಕ್ಕಾಚಾರವಾಗಿದೆ.

ನಿಪ್ಪಾಣಿ ಮತಕ್ಷೇತ್ರದ ಮತದಾರರು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಬಲಾಡ್ಯರಾಗಿ ರುವುದರಿಂದ ಪ್ರತಿ ಚುನಾವಣೆ ಪ್ರತಿಷ್ಠೆ ಕಣವಾಗುತ್ತದೆ. ಈಗ ಲೋಕಸಭೆ ಚುನಾವಣೆಯಲ್ಲಿ ಹುಕ್ಕೇರಿ ಮತ್ತು ಜೊಲ್ಲೆ ಕುಟುಂಬದ ನಡುವೆ ನಡೆದಿರುವ ಕಾರಣದಿಂದ ನಿಪ್ಪಾಣಿ ಭಾಗದಲ್ಲಿ ಲೋಕಸಭೆ ಚುನಾವಣೆ ಭಾರಿ ತುರುಸಿನಿಂದ ಕೂಡಿದೆ. ಹೀಗಾಗಿ ಆಯಾ ಪಕ್ಷದ ಅಭ್ಯರ್ಥಿ ಹೆಚ್ಚಿನ ಮತ ಪಡೆದು ಗೆಲ್ಲುತ್ತಾರೆಂಬ ಚರ್ಚೆಗಳು ನಿಪ್ಪಾಣಿ ಭಾಗದಲ್ಲಿ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರದ ಕೊಲ್ಲಾಪುರ, ಇಚಲಕರಂಜಿ, ಕಾಗಲ ನಗರಗಳಲ್ಲಿ ಸಹ ಚರ್ಚೆ ಹುಟ್ಟು ಹಾಕಿದೆ.

Advertisement

ನಿಪ್ಪಾಣಿ ಕ್ಷೇತ್ರದಲ್ಲಿ ಈ ಚುನಾವಣೆಯಲ್ಲಿ ಶೇ 77.71 ಮತದಾನವಾಗಿದೆ. ಎರಡು ಪಕ್ಷದಿಂದ ಭರ್ಜರಿ ಪ್ರಚಾರ ಮಾಡಿದ್ದಾರೆ. ಮೋದಿ ಮತ್ತೂಮ್ಮೆ ಪ್ರಧಾನಿಯಾಗಲು ಯುವಕರ ಪಡೆ ಬಿಜೆಪಿ ಬೆಂಬಲಿಸಿದೆ. ಮರಾಠಾ ಸಮುದಾಯ ಹೆಚ್ಚಿರುವ ಈ ಕ್ಷೇತ್ರದಲ್ಲಿ ಬಿಜೆಪಿಗೆ ಅನುಕೂಲವಾಗುತ್ತದೆ ಎಂಬುದು ಕ್ಷೇತ್ರದ ಜನರ ಲೆಕ್ಕಾಚಾರವಾಗಿದೆ.

13 ಹಳ್ಳಿಯಲ್ಲಿ ಪ್ರಕಾಶ ಹುಕ್ಕೇರಿ ಕಿಂಗ್‌: ಈಗಿನ ನಿಪ್ಪಾಣಿ ಕ್ಷೇತ್ರ ಅಂದಿನ ಸದಲಗಾ ಕ್ಷೇತ್ರದಲ್ಲಿ ಬರುವ ಬೋರಗಾಂವ, ಭೋಜ, ಕಾರದಗಾ, ಮಾಂಗೂರ, ಬೇಡಕಿಹಾಳ, ಗಳತಗಾ ಮುಂತಾದ 13 ಹಳ್ಳಿಗಳಲ್ಲಿ ಪ್ರಕಾಶ ಹುಕ್ಕೇರಿ ಪ್ರಭಾವ ಪ್ರಬಲವಾಗಿದೆ. ಇಲ್ಲಿಯ ಮತದಾರರು ಪ್ರಕಾಶ ಹುಕ್ಕೇರಿಗೆ ಬೆಂಬಲ ಕೊಡುತ್ತ ಬಂದಿದ್ದಾರೆ. ಈ ಚುನಾವಣೆಯಲ್ಲಿಯೂ ಪ್ರಕಾಶ ಹುಕ್ಕೇರಿಗೆ ಭಾರಿ ಪ್ರಮಾಣದಲ್ಲಿ ಬೆಂಬಲ ನೀಡಿರುವ ಕಾರಣದಿಂದ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಚರ್ಚೆಯಾಗುತ್ತಿದೆ.

ನಿಪ್ಪಾಣಿ ಕ್ಷೇತ್ರದಲ್ಲಿ ಬಿಜೆಪಿಗೆ ಭಾರಿ ಮುನ್ನಡೆ ದೊರೆಯಲಿದೆ. ಕಾರದಗಾ, ಭೋಜ, ಅಕ್ಕೋಳ, ಕೊಗನ್ನೊಳ್ಳಿ ಜಿಪಂ ವ್ಯಾಪ್ತಿಯಲ್ಲಿ ಬಿಜೆಪಿಗೆ ಬೆಂಬಲ ಸಿಕ್ಕಿದೆ. ಕ್ಷೇತ್ರದಲ್ಲಿ ಅಣ್ಣಾಸಾಹೇಬ ಜೊಲ್ಲೆ 20 ಸಾವಿರ ಅಧಿಕ ಮತಗಳ ಮುನ್ನಡೆ ಸಿಗುತ್ತದೆ. ಶಾಸಕಿ ಶಶಿಕಲಾ ಜೊಲ್ಲೆ ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದ ಇಡೀ ನಿಪ್ಪಾಣಿ ಕ್ಷೇತ್ರ ಬಿಜೆಪಿಮಯವಾಗಿದೆ. ಮೋದಿ ಅಲೆ ನಮಗೆ ಶ್ರೀರಕ್ಷೆಯಾಗಿದೆ.

• ಸಂಜಯ ಶಿಂತ್ರೆ, ನಿಪ್ಪಾಣಿ ಗ್ರಾಮೀಣ ಬಿಜೆಪಿ ಅಧ್ಯಕ್ಷ

ನಿಪ್ಪಾಣಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ನಡೆದಿಲ್ಲ, ಹೀಗಾಗಿ ಮತದಾರರು ಕಾಂಗ್ರೆಸ್‌ ಬೆಂಬಲಿಸಿದ್ದಾರೆ. ಸಂಸದ ಪ್ರಕಾಶ ಹುಕ್ಕೇರಿ ಗಡಿ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ನಿಪ್ಪಾಣಿ ಭಾಗದ ಕಾಂಗ್ರೆಸ್‌ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಿರುವುದರಿಂದ ಕಾಂಗ್ರೆಸ್‌ ಪಕ್ಷಕ್ಕೆ ಮತಗಳ ಮುನ್ನಡೆ ಬರುವ ವಿಶ್ವಾಸವಿದೆ. ಪ್ರಕಾಶ ಹುಕ್ಕೇರಿ ಗೆಲುವು ನಿಶ್ಚಿತ.

• ರಾಜೇಶ ಕದಮ್‌, ನಿಪ್ಪಾಣಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next