Advertisement
– ಅಜೇಯ್ ರಾವ್ ಚಿತ್ರರಂಗಕ್ಕೆ ಬಂದು 14 ವರ್ಷ ಆಗಿದೆ. ಈ ಹದಿನಾಲ್ಕು ವರ್ಷಗಳಲ್ಲಿ ಅವರಿಗೆ ಚಿತ್ರರಂಗ ಚೆನ್ನಾಗಿ ಅರ್ಥವಾಗಿದೆ. ಇಲ್ಲಿ ಗೆಲ್ಲುವುದಕ್ಕಿಂತ ಹೆಚ್ಚಾಗಿ, ಗಟ್ಟಿಯಾಗಿ ನೆಲೆನಿಲ್ಲೋದು ಮುಖ್ಯ ಎಂಬ ಸತ್ಯ ಗೊತ್ತಾಗಿದೆ. “ಆರಂಭದಲ್ಲಿ ಗೆದ್ದು ಬಿಟ್ಟರೆ ಸಾಕು ಹಾಗೂ ಗೆದ್ದು ಬಿಟ್ಟೆವು ಎಂಬ ಸಂತಸ ಇರುತ್ತದೆ. ಆದರೆ, ಆ ನಂತರದ ದಿನಗಳಲ್ಲಿ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳೋದು ದೊಡ್ಡ ಸವಾಲಿನ ಕೆಲಸ. ಅದರಲ್ಲೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾಂಪಿಟೇಶನ್ ನಡುವೆ ನಮ್ಮ ಮಾರುಕಟ್ಟೆ ಉಳಿಸಿಕೊಂಡು, ಪ್ರೇಕ್ಷಕ ವರ್ಗವನ್ನು ಸೆಳೆಯೋದು ದೊಡ್ಡ ಸವಾಲು’ ಎನ್ನುವುದು ಅಜೇಯ್ ರಾವ್ ಮಾತು. ಆ ಸವಾಲನ್ನು ಇಷ್ಟು ದಿನ ಯಶಸ್ವಿಯಾಗಿ ಎದುರಿಸಿಕೊಂಡು, ಅದರಲ್ಲಿ ಗೆಲುವು ಕಂಡ ಖುಷಿ ಕೂಡಾ ಅಜೇಯ್‌ಗಿದೆ.
ಆ ಬಗ್ಗೆ ಅವರಿಗೆ ಖುಷಿ ಇದೆ. “ನಾನು ಚಿತ್ರರಂಗಕ್ಕೆ ಜೂನಿಯರ್ ಆರ್ಟಿಸ್ಟ್ ಆಗಿ ಬಂದವನು. ಆ ನಂತರ
ಹೀರೋ ಆಗಿ ಮತ್ತೆ ಕ್ಯಾರೆಕ್ಟರ್ ಮಾಡುತ್ತಾ ಈಗ ಹೀರೋ ಆಗಿ ನಿಂತಿದ್ದೇನೆ. ನನಗೆ ನನ್ನ ಜರ್ನಿ ಬಗ್ಗೆ ಹೆಮ್ಮೆ ಇದೆ. ಸಾಕಷ್ಟು ಕಷ್ಟ, ಅವಮಾನಗಳನ್ನು ನೋಡಿದ್ದೇನೆ’ ಎನ್ನುವುದು ಅಜೇಯ್ ಮಾತು. ಅಜೇಯ್ ರಾವ್ ಅವರ 14 ವರ್ಷದ ಕೆರಿಯರ್‌ನಲ್ಲಿ ತುಂಬಾ ಖುಷಿ ಕೊಟ್ಟ ಸಿನಿಮಾ ಯಾವುದೆಂದರೆ ಅದು “ಕೃಷ್ಣ ಲೀಲಾ’ ಎಂಬ ಉತ್ತರ ಬರುತ್ತದೆ. ಕಥೆಯ ಜೊತೆಗೆ ಆ ಸಿನಿಮಾ ಅವರದ್ದೇ ನಿರ್ಮಾಣದ್ದು ಎಂಬುದು ಮತ್ತೂಂದು ವಿಚಾರ. “ಕೃಷ್ಣ ಲೀಲಾ ಚಿತ್ರ ನನಗೆ ತುಂಬಾ ಖುಷಿಕೊಟ್ಟ ಚಿತ್ರ. ಕಥೆಯೂ ಚೆನ್ನಾಗಿತ್ತು ಜೊತೆಗೆ ನಾನು ನಿರ್ಮಾಣ ಮಾಡಿದ ಮೊದಲ ಚಿತ್ರ ಎಂಬುದು ಮತ್ತೂಂದು ವಿಚಾರ.ಆ ಸಿನಿಮಾಕ್ಕೆ ಒಂದೊಂದು ರೂಪಾಯಿ ಕೊಡುವಾಗಲೂ ಆ ದುಡ್ಡನ್ನು ನಾನು ಎಷ್ಟು ಕಷ್ಟಪಟ್ಟು ಸಂಪಾದಿಸಿದ್ದೇನೆ ಎಂಬುದು ನನ್ನ ಕಣ್ಣಮುಂದೆ ಬರುತ್ತಿತ್ತು. ಸಿನಿಮಾ ಫಸ್ಟ್ ಕಾಪಿ ನೋಡಿದಾಗ ಖುಷಿಯಾಯಿತು. ಸಿನಿಮಾ ಗೆದ್ದರೂ, ಸೋತರೂ ತಲೆಕೆಡಿಸಿಕೊಳ್ಳಬಾರದೆಂದು ಅವತ್ತೇ ನಿರ್ಧರಿಸಿದೆ. ಯಾಕೆಂದರೆ ಏನೂ ಇಲ್ಲದೇ ಬಂದ ನನಗೆ ಈಗ ನನ್ನನ್ನು ಪ್ರೀತಿಸುವ ಬೆಂಬಲಿಸುವ ಸಾಕಷ್ಟು ಮಂದಿ ಇದ್ದಾರೆ. ಆದರೆ, ಆ ಸಿನಿಮಾ ಚೆನ್ನಾಗಿ ಹೋಯಿತು’ ಎನ್ನುತ್ತಾರೆ ಅಜೇಯ್.
Related Articles
Advertisement
ಸದ್ಯ ಅಜೇಯ್ ರಾವ್ “ಧೈಯಂ’ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಆ ಚಿತ್ರ ಇಂದು ತೆರೆಕಾಣುತ್ತಿದೆ. ಈ ಚಿತ್ರದ ಒಂದು ವಿಶೇಷವೆಂದರೆ ಅಜೇಯ್ ರಾವ್ ಮೊದಲ ಬಾರಿಗೆ ಈ ಚಿತ್ರದಲ್ಲಿ ಆ್ಯಕ್ಷನ್ ಇಮೇಜ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಜೇಯ್ ರಾವ್ ಚಿತ್ರರಂಗಕ್ಕೆ ಬಂದು 14 ವರ್ಷ ಆಯಿತು. ಈ 14 ವರ್ಷದಲ್ಲಿ ಅವರು ಲವರ್ ಬಾಯ್ ಆಗಿಯೇ ಕಾಣಿಸಿಕೊಂಡಿದ್ದಾರೆ.
ಆದರೆ, ಈಗ ಮೊದಲ ಬಾರಿಗೆ ಅಜೇಯ್ ಆ್ಯಕ್ಷನ್ ಇಮೇಜ್‌ಗೆ ಬಂದಿದ್ದಾರೆ. ಈಗಾಗಲೇ “ಧೈರ್ಯಂ’ ಚಿತ್ರದ ಟ್ರೇಲರ್ ನೋಡಿದವರು ಅಜೇಯ್ ಗೆಟಪ್ ಹಾಗೂ ಪವರ್‌ಫುಲ್ ಡೈಲಾಗ್ ಕೇಳಿ ಖುಷಿಯಾಗಿದ್ದಾರೆ. ಅಜೇಯ್‌ಗೆ ಆ್ಯಕ್ಷನ್ ಸಿನಿಮಾವೊಂದರಲ್ಲಿ ನಟಿಸಬೇಕೆಂಬ ಆಸೆ ತುಂಬಾ ದಿನಗಳಿಂದ ಇತ್ತಂತೆ. ಆದರೆ, ಬಹುತೇಕ ನಿರ್ದೇಶಕರು ಅವರನ್ನು ಮತ್ತೆ ಮತ್ತೆ ಲವರ್‌ಬಾಯ್ ಪಾತ್ರದಲ್ಲೇ ತೋರಿಸಲು ಇಷ್ಟಪಟ್ಟಿದ್ದರಿಂದ ಅವರ ಆ್ಯಕ್ಷನ್ ಡ್ರೀಮ್ ಕೈ ಗೂಡಿರಲಿಲ್ಲ. ಆದರೆ, ನಿರ್ದೇಶಕ ಶಿವತೇಜಸ್ ಮಾತ್ರ ಅಜೇಯ್ ಅವರನ್ನು ಆ್ಯಕ್ಷನ್ ಇಮೇಜ್‌ನಲ್ಲಿ ನೋಡಿದಪರಿಣಾಮ ಈಗ “ಧೈರ್ಯಂ’ ರೆಡಿಯಾಗಿದೆ. “ನನಗೆ ಅಮಿತಾಬ್ ಬಚ್ಚನ್ ತರಹದ ಆ್ಯಂಗ್ರಿಮ್ಯಾನ್ ಪಾತ್ರ ಮಾಡೋದೆಂದರೆ ಇಷ್ಟ. ಯಾವತ್ತೂ ಒಂದೇ ಇಮೇಜ್‌ಗೆ ಅಂಟಿಕೊಳ್ಳಲು ಇಷ್ಟವಿಲ್ಲ. ಆದರೆ, ಆರಂಭದಲ್ಲಿ ಲವರ್ ಬಾಯ್, ಅಮಾಯಕನ ತರಹದ ಪಾತ್ರ ಮಾಡಿದ್ದರಿಂದ ಮತ್ತೆ ಮತ್ತೆ ಅಂತಹ ಪಾತ್ರಗಳೇ ಹುಡುಕಿಕೊಂಡು ಬಂದುವು. ಆದರೆ, ನಿರ್ದೇಶಕ ಶಿವತೇಜಸ್ ಹಲವು ವರ್ಷಗಳಿಂದ ಪರಿಚಯ. ಅವರು ನನ್ನಲ್ಲಿ ಆ್ಯಕ್ಷನ್ ಇಮೇಜ್ ಕಂಡರು. ನನ್ನನ್ನು ಬೇರೆ ತರಹ ತೋರಿಸಲು ಪ್ರಯತ್ನಿಸಿದ್ದಾರೆ’
ಎನ್ನುತ್ತಾರೆ. ಚಿತ್ರದಲ್ಲಿ ಅಜೇಯ್ ಎದುರು ರವಿಶಂಕರ್ ವಿಲನ್ ಆಗಿ ನಟಿಸಿದ್ದಾರೆ. ಇದು ಕೂಡಾ ಎಕ್ಸೆ„ಟಿಂಗ್ ಪಾಯಿಂಟ್ ಅಂತಾರೆ ಅಜೇಯ್ “ಚಿತ್ರದಲ್ಲಿ ನನ್ನ ಹಾಗೂ ರವಿಶಂಕರ್ ಅವರ ಕಾಂಬಿನೇಶನ್ ಖಂಡಿತಾ ಇಷ್ಟವಾಗುತ್ತದೆ. ನಮ್ಮಿಬ್ಬರ ನಡುವಿನ ಜಿದ್ದಾಜಿದ್ದಿ ಮಜಾ ಕೊಡುತ್ತದೆ’ ಎನ್ನಲು ಅಜೇಯ್ ಮರೆಯುವುದಿಲ್ಲ. ಮಧ್ಯಮ ವರ್ಗದ ಯುವಕನೊಬ್ಬ ಧೈರ್ಯದಿಂದ ಎಲ್ಲವನ್ನು ಹೇಗೆ ಎದುರಿಸುತ್ತಾನೆಂಬ ಅಂಶದೊಂದಿಗೆ ಸಿನಿಮಾ ಸಾಗಲಿದ್ದು, ಸಿನಿಮಾ ಗೆಲ್ಲುವ ವಿಶ್ವಾಸ ಅಜೇಯ್‌ಗಿದೆ. – ರವಿಪ್ರಕಾಶ್ ರೈ