ಕುಂದಾಪುರ: ನಗರ ಇಬ್ಭಾಗ ಆಗದಂತೆ ಫ್ಲೈ ಓವರ್ ಮಾಡಿಕೊಡಲಾಗಿದೆ. ಅಂತೆಯೇ ಸೀವಾಕ್ ಮೊದಲಾದ ರಚನೆಗಳಾಗಿವೆ. ಕುಂದಾಪುರ ಪ್ರವಾಸೋದ್ಯಮವಾಗಿ ಅಭಿವೃದ್ಧಿ ಆಗಲು ನನಗೆ ಮತ ನೀಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಬುಧವಾರ ಅಪರಾಹ್ನ ಇಲ್ಲಿನ ಶಾಸ್ತ್ರಿ ಸರ್ಕಲ್‌ನಲ್ಲಿ ಹೊಸ ಬಸ್‌ನಿಲ್ದಾಣವರೆಗೆ ನಡೆದ ಪಾದಯಾತ್ರೆ ಸಂದರ್ಭ ಮಾತನಾಡಿದರು.
ನಾನು ಯಾವುದೇ ವ್ಯಕ್ತಿಯ ಹೆಸರಿನಲ್ಲಿ ಮತ ಕೇಳುವುದಿಲ್ಲ. ಈ ಹಿಂದೆ ಸಂಸದನಾಗಿ ಕೆಲಸ ಮಾಡಲು ಕಡಿಮೆ ಸಮಯದ ಅವಕಾಶ ದೊರೆತಿತ್ತು. ಹೆಚ್ಚು ಸಮಯ ಅವಕಾಶ ದೊರೆತವರು ಏನು ಮಾಡಿದ್ದಾರೆ ಎಂದು ನಿಮಗೆಲ್ಲ ಗೊತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಲು, ಜನರ ನಡುವೆ ಇದ್ದು ಕೆಲಸ ಮಾಡಲು ಅವಕಾಶ ಕೊಡಿ. ಅಭಿವೃದ್ಧಿ ಎಂದರೆ ಏನೆಂದು ಮಾಡಿ ತೋರಿಸುತ್ತೇನೆ. ಪಾದಯಾತ್ರೆ ಮೂಲಕ ನಗರದ ಜನತೆಯಲ್ಲಿ ಅಭಿವೃದ್ಧಿಗಾಗಿ ನನ್ನನ್ನು ಗೆಲ್ಲಿಸಿ ಎನ್ನುವ ಮನವಿ ಮಾಡುತ್ತಿದ್ದೇನೆ ಎಂದರು.
ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ ಶೆಟ್ಟಿ, ಮುಖಂಡರಾದ ಎಂ.ಎ. ಗಫೂರ್, ಜಿ.ಎ.ಬಾವ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಎಸ್. ರಾಜು ಪೂಜಾರಿ, ದೇವಾನಂದ ಶೆಟ್ಟಿ ಹಳ್ನಾಡು, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ಹೆರಿಯಣ್ಣ , ಅಶೋಕ್ ಪೂಜಾರಿ ಬೀಜಾಡಿ ಮೊದಲಾದವರು ಇದ್ದರು. ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು, ಜನಪ್ರತಿನಿಧಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.