ಕಾರವಾರ: ಶಿಕ್ಷಕರಿಗೆ ಕಾಲ್ಪನಿಕ ವೇತನ ನೀಡುವ ಸಮಸ್ಯೆ ಬಹಳ ದಿನಗಳಿಂದ ಹಾಗೆ ಉಳಿದಿದೆ. 2006ರ ನಂತರ ನೇಮಕವಾದ ಶಿಕ್ಷಕರು ಪಿಂಚಣಿ ಸೌಲಭ್ಯ ಇಲ್ಲದೇ ಇರುವ ಸಮಸ್ಯೆ ಹಾಗೆ ಉಳಿದಿದೆ. ಪ್ರಸ್ತುತ ಸರ್ಕಾರದ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವೆ ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲ್ಪನಿಕ ವೇತನ, ಬಡ್ತಿ ಹಾಗೂ ನಿವೃತ್ತಿ ವೇತನ ನೀಡುವ ಸಮಸ್ಯೆಯನ್ನು ತ್ರಿಪುರಾ, ಪಶ್ಚಿಮ ಬಂಗಾಳ, ರಾಜಸ್ಥಾನ ಸರ್ಕಾರಗಳು ಬಗೆಹರಿಸಿವೆ. ಈ ವಿಷಯವನ್ನು ಈಗಾಗಲೇ ಮುಖ್ಯಮಂತ್ರಿ ಜತೆ ಚರ್ಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸುವೆ ಎಂದರು.
ಯಾವುದೇ ಕ್ಷೇತ್ರದಂತೆ ಶಿಕ್ಷಕರ ಕ್ಷೇತ್ರವಲ್ಲ. ವಿಜ್ಞಾನ, ಗಣಿತ, ಇಂಗ್ಲಿಷ್ ಶಿಕ್ಷಕರ ಕೊರತೆಯಾದರೆ ಶಿಕ್ಷಣಕ್ಕೆ ಪೆಟ್ಟು ಬೀಳುತ್ತದೆ. ಬಹಳ ದಿನಗಳಿಂದ ಶಿಕ್ಷಕರ ನೇಮಕಾತಿಯೇ ನಡೆದಿಲ್ಲ. ಈಗ 15 ಸಾವಿರ ಶಿಕ್ಷಕರ ಭರ್ತಿಗೆ ಹೆಜ್ಜೆ ಇಡಲಾಗಿದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರಬಾರದೆಂಬುದು ನನ್ನ ಸಿದ್ಧಾಂತ. ಅನ್ಯ ದೇಶಗಳಲ್ಲಿ ಸರ್ಕಾರಗಳು ಬದಲಾದರೂ ಶಿಕ್ಷಣದ ನೀತಿ, ಪಠ್ಯ ಪುಸ್ತಕ ನೀತಿ ಬದಲಾಗಲ್ಲ. ಆದರೆ ನಮ್ಮ ದೇಶದಲ್ಲಿ ಎಲ್ಲ ವಿಷಯಗಳಲ್ಲೂ ರಾಜಕೀಯ ತುಂಬಿಕೊಂಡಿದೆ. ಒಬ್ಬರನ್ನು ಮೀರಿಸಿ ಒಬ್ಬರು ರಾಜಕೀಯ ಮಾಡುತ್ತಾರೆಂದರು.
ಶಿಕ್ಷಣ ಸಚಿವರಾಗುವವರಿಗೆ ಅನುಭವ, ಆಳ ಜ್ಞಾನ ಇಲ್ಲದೇ ಹೋದರೆ ಅಧಿಕಾರಿಗಳು ಸಚಿವರನ್ನು ಹಾದಿ ತಪ್ಪಿಸುತ್ತಾರೆಂದು ಅಭಿಪ್ರಾಯಪಟ್ಟ ಅವರು, 42 ವರ್ಷಗಳ ಅನುಭವದಿಂದ ಈ ಮಾತು ಹೇಳುತ್ತಿದ್ದೇನೆ. ಖಾಸಗಿ ಶಾಲೆ ಮಕ್ಕಳಿಗೆ ನಾನು ಬಿಸಿಯೂಟ ನೀಡಬೇಕು, ಹೈಸ್ಕೂಲ್‌ನ ಎಲ್ಲ ಮಕ್ಕಳಿಗೂ ನೀಡಬೇಕು ಎಂದಾಗ, ಅಂದಿನ ಶಿಕ್ಷಣ ಸಚಿವ ಬಿ.ಕೆ. ಚಂದ್ರಶೇಖರ್ ಹಣ ಇಲ್ಲ ಎಂದಿದ್ದರು. ಅಬಕಾರಿ ಖಾತೆಯ ಹಣ ಬಳಸಿ ಎಂದರೂ ಒಪ್ಪಿರಲಿಲ್ಲ. ಮುಂದೆ ನಾನು ಶಿಕ್ಷಣ ಸಚಿವನಾದಾಗ ಹೈಸ್ಕೂಲ್ ಮಕ್ಕಳಿಗೆ ಹಾಗೂ ಖಾಸಗಿ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೂ ಬಿಸಿಯೂಟ ಸಿಗುವಂತೆ ಆದೇಶ ಹೊರಡಿಸಿದೆ. ಇದರಿಂದ ಸರ್ಕಾರಕ್ಕೆ 176 ಕೋಟಿ ರೂ. ಹೆಚ್ಚುವರಿ ಖರ್ಚು ಬಂತು. ಆದರೆ ಎಲ್ಲ ಮಕ್ಕಳಿಗೂ ಮಧ್ಯಾಹ್ನದ ಬಿಸಿಯೂಟ ದೊರೆಯಿತು ಎಂದರು.