Advertisement

ವಿಂಬಲ್ಡನ್‌ ಟೆನಿಸ್‌: ಮರ್ರೆ,ವೀನಸ್‌ ದ್ವಿತೀಯ ಸುತ್ತಿಗೆ

03:50 AM Jul 04, 2017 | |

ಲಂಡನ್‌: ಹಾಲಿ ಚಾಂಪಿಯನ್‌ ಬ್ರಿಟನ್‌ನ ಆ್ಯಂಡಿ ಮರ್ರೆ, ಅಮೆರಿಕದ ವೀನಸ್‌ ವಿಲಿಯಮ್ಸ್‌ ಅವರು ವಿಂಬಲ್ಡನ್‌ ಟೆನಿಸ್‌ ಕೂಟದ ಮೊದಲ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿ ಮುನ್ನಡೆದಿದ್ದಾರೆ.

Advertisement

ಅಗ್ರ ಶ್ರೇಯಾಂಕದ ಮತ್ತು ವಿಶ್ವದ ನಂಬರ್‌ ವನ್‌ ಮರ್ರೆ ಅವರು ಕಝಾಕ್‌ನ ಅಲೆಕ್ಸಾಂಡರ್‌ ಬುಬ್ಲಿಕ್‌ ಅವರನ್ನು 6-1, 6-4, 6-2 ಸೆಟ್‌ಗಳಿಂದ ಕೆಡಹಿದರು. ಈ ಪಂದ್ಯದ ನಡುವೆ ಮಳೆಯಿಂದಾಗಿ ಕೆಲಹೊತ್ತು ಆಟ ಸ್ಥಗಿತಗೊಂಡಿತ್ತು. ಮರ್ರೆ ದ್ವಿತೀಯ ಸುತ್ತಿನಲ್ಲಿ ಡಾಸ್ಟಿನ್‌ ಬ್ರೌನ್‌ ಅವರನ್ನು ಎದುರಿಸಲಿದ್ದಾರೆ. ಬ್ರೌನ್‌ ಇನ್ನೊಂದು ಪಂದ್ಯದಲ್ಲಿ ಪೋರ್ಚುಗಲ್‌ನ ಜೊವೊ ಸೌಸ ಅವರನ್ನು 3-6, 7-6 (7-5, 6-4, 6-4 ಸೆಟ್‌ಗಳಿಂದ ಸೋಲಿಸಿದ್ದರು.

ವನಿತೆಯರ ಸಿಂಗಲ್ಸ್‌ನಲ್ಲಿ ವೀನಸ್‌ ವಿಲಿಯಮ್ಸ್‌ ಅವರು ಎಲಿಸ್‌ ಮಾರ್ಟೆನ್ಸ್‌ ಅವರನ್ನು 7-6 (9-7), 6-4 ಸೆಟ್‌ಗಳಿಂದ ಸೋಲಿಸಿ ದ್ವಿತೀಯ ಸುತ್ತಿಗೇರಿದರು. ಎರಡನೇ ಶ್ರೇಯಾಂಕದ ಸಿಮೋನಾ ಹಾಲೆಪ್‌ ಅವರು ನ್ಯೂಜಿಲ್ಯಾಂಡಿನ ಮರಿನಾ ಎರಕೋವಿಕ್‌ ಅವರನ್ನು 6-4, 6-1 ಸೆಟ್‌ಗಳಿಂದ ಪರಾಭವಗೊಳಿಸಿ ಮುನ್ನಡೆದರು. ಉಕ್ರೈನಿನ ನಾಲ್ಕನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ ಇನ್ನೊಂದು ಪಂದ್ಯದಲ್ಲಿ  ಆ್ಯಶ್ಲೇಗ್‌ ಬಾರ್ಟಿ ಅವರ ವಿರುದ್ಧ 7-5, 7-6 (10-8) ಸೆಟ್‌ಗಳಿಂದ ಗೆದ್ದು ಬಂದರು.

ಪುರುಷರ ಇನ್ನೊಂದು ಪಂದ್ಯದಲ್ಲಿ ಜೋ ವಿಲ್ಫೆಡ್‌ ಸೋಂಗ ಅವರು ಬ್ರಿಟನ್‌ನ ಕ್ಯಾಮರೂನ್‌ ನೂರಿ ಅವರನ್ನು 6-3, 6-2, 6-2 ನೇರ ಸೆಟ್‌ಗಳಲ್ಲಿ ಉರುಳಿಸಿ ದ್ವಿತೀಯ ಸುತ್ತಿಗೇರಿದರು. ಜಪಾನಿನ ಕೆಯಿ ನಿಶಿಕೋರಿ ಇಟಲಿಯ ಮಾರ್ಕೊ ಸೆಚಿನಾಟೊ ಅವರನ್ನು 6-2, 6-2, 6-0 ಸೆಟ್‌ಗಳಿಂದ ಸೋಲಿಸಿದರು. ಸೆಚಿನಾಟೊ ಸೀನಿಯರ್‌ ಮಟ್ಟದಲ್ಲಿ ಹುಲ್ಲುಹಾಸಿನ ಅಂಗಣದಲ್ಲಿ ಆಡಿದ ಮೊದಲ ಪಂದ್ಯ ಇದಾಗಿದೆ.

ಗಾಯದ ಸಮಸ್ಯೆಯಿಂದಾಗಿ ನಿಕ್‌ ಕಿರ್ಗಿಯೋಸ್‌ ಅವರು ಮೊದಲ ಸುತ್ತಿನ ಪಂದ್ಯದ ನಡುವೆ ಹೊರನಡೆದರು. ಅವರ ಎದುರಾಳಿ ಪಿಯರ್‌ ಹ್ಯೂಗ್ಸ್‌ ಹೆರ್ಬೆಟ್‌ 6-3, 6-4 ಸೆಟ್‌ಗಳಿಂದ ಮುನ್ನಡೆಯಲ್ಲಿರುವಾಗ ಕಿರ್ಗಿಯೋಸ್‌ ಪಂದ್ಯ ತ್ಯಜಿಸುವ ನಿರ್ಧಾರ ಪ್ರಕಟಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next