ಲಂಡನ್: ಈ ಬಾರಿಯ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಕೂಟದ ಪ್ರಶಸ್ತಿ ಮೊತ್ತದಲ್ಲಿ ಶೇ.11ರಷ್ಟು ಹೆಚ್ಚಳವಾಗಿದೆ.
ಆದರೆ ಪುರುಷ ಮತ್ತು ಮಹಿಳಾ ಸಿಂಗಲ್ಸ್ ಪ್ರಶಸ್ತಿ ವಿಜೇತರರಿಗೆ ಇದು ಅನ್ವಯಿಸದು. ಅವರು ಮಾತ್ರ ಕಡಿಮೆ ಮೊತ್ತ ಪಡೆಯಲಿದ್ದಾರೆ!
ಈ ಬಾರಿಯ ಬಹುಮಾನದ ಒಟ್ಟು ಮೊತ್ತ 50.5 ಮಿಲಿಯನ್ ಡಾಲರ್. ಪುರುಷರ ಹಾಗೂ ವನಿತಾ ಸಿಂಗಲ್ಸ್ ವಿಜೇತರಿಗೆ ಸಿಗುವುದು ತಲಾ 2.5 ಮಿಲಿಯನ್ ಡಾಲರ್.
ಇದು 2019ರ ಪ್ರಶಸ್ತಿ ಮೊತ್ತಕ್ಕೆ ಹೋಲಿಸಿದರೆ ಶೇ. 14.9ರಷ್ಟು ಕಡಿಮೆ.
ಒಟ್ಟಾರೆ ಪ್ರಶಸ್ತಿ ಮೊತ್ತ ಏರಿದ್ದರೂ ವಿಜೇತರ ಬಹುಮಾನ ಮೊತ್ತವನ್ನು ಏಕೆ ಕಡಿಮೆ ಮಾಡಲಾಗಿದೆ ಎಂಬ ಕುತೂಹಲ ಸಹಜ. ಆರಂಭಿಕ ಸುತ್ತುಗಳಲ್ಲಿ ಸೋತ ಆಟಗಾರರಿಗೆ ನೀಡುವ ಬಹುಮಾನವನ್ನು ಇನ್ನಷ್ಟು ಹೆಚ್ಚಿಸಿರುವುದೇ ಇದಕ್ಕೆ ಕಾರಣ.
ಮೂರು ವರ್ಷಗಳ ಅನಂತರ ವಿಂಬಲ್ಡನ್ ಕೂಟ ಪೂರ್ಣಪ್ರಮಾಣದ ಪ್ರೇಕ್ಷಕರ ಸಮ್ಮುಖದಲ್ಲಿ ನಡೆಯಲು ಸಜ್ಜಾಗಿದೆ. 2021ರಲ್ಲಿ ಅರ್ಧದಷ್ಟು ಪ್ರೇಕ್ಷಕರಿಗೆ ಪ್ರವೇಶ ನೀಡಲಾಗಿತ್ತು. 2020ರ ಕೂಟವೇ ರದ್ದಾಗಿತ್ತು.