Advertisement

ವಿಂಬಲ್ಡನ್‌-2022: ಸೆರೆನಾ ವಿಲಿಯಮ್ಸ್‌ ಆಕರ್ಷಣೆ: ಸೆರೆನಾ ಮೊದಲ ಎದುರಾಳಿ ಹಾರ್ಮನಿ ಟಾನ್‌

11:08 PM Jun 24, 2022 | Team Udayavani |

ಲಂಡನ್‌: ವರ್ಷದ 3ನೇ ಗ್ರ್ಯಾನ್‌ಸ್ಲಾಮ್‌ ಕೂಟವಾದ ವಿಂಬಲ್ಡನ್‌ ಪಂದ್ಯಾವಳಿಯ ಕ್ಷಣಗಣನೆ ಮೊದಲ್ಗೊಂಡಿದೆ.

Advertisement

ಒಂದು ವರ್ಷದ ಬ್ರೇಕ್‌ ಬಳಿಕ ಸೆರೆನಾ ವಿಲಿಯಮ್ಸ್‌ ಆಡುತ್ತಿರುವುದು ಈ ಕೂಟದ ಆಕರ್ಷಣೆ.

ಸೋಮವಾರದಿಂದ ಮೊದಲ್ಗೊಳ್ಳಲಿರುವ ವಿಂಬಲ್ಡನ್‌ ಕೂಟದ ಡ್ರಾ ಪ್ರಕಟಗೊಂಡಿದ್ದು, ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ದಕ್ಷಿಣ ಕೊರಿಯಾದ ಸೂನ್‌ ವೂ ವಿರುದ್ಧ ಮೊದಲ ಸುತ್ತಿನ ಪಂದ್ಯವನ್ನು ಆಡಲಿದ್ದಾರೆ. ಸೂನ್‌ ವೂ ವಿಶ್ವ ರ್‍ಯಾಂಕಿಂಗ್‌ನಲ್ಲಿ 75ನೇ ಸ್ಥಾನದಲ್ಲಿದ್ದಾರೆ.

ದ್ವಿತೀಯ ಶ್ರೇಯಾಂಕದ ರಫೆಲ್‌ ನಡಾಲ್‌ ಆರ್ಜೆಂಟೀನಾದ ಫ್ರಾನ್ಸೆಸ್ಕೊ ಸೆರುಂಡೊಲೊ ಸವಾಲನ್ನು ಎದುರಿಸಲಿದ್ದಾರೆ. ಮುಂದುವರಿದು ಕ್ವಾರ್ಟರ್‌ ಫೈನಲ್‌ನಲ್ಲಿ ಜೊಕೋ ಮತ್ತು ನಡಾಲ್‌ಗೆ ಕ್ರಮವಾಗಿ ಕಾರ್ಲೋಸ್‌ ಅಲ್ಕರಾಝ್ ಮತ್ತು ಫೆಲಿಕ್ಸ್‌ ಔಗರ್‌ ಅಲಿಯಾಸಿಮ್‌ ಎದುರಾಗುವ ಸಾಧ್ಯತೆ ಇದೆ.

ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌ ಬ್ರಿಟನ್‌ನ ವೈಲ್ಡ್‌ ಕಾರ್ಡ್‌ ಆಟಗಾರ ಪೌಲ್‌ ಜಬ್‌ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. 2013 ಮತ್ತು 2016ರ ಚಾಂಪಿಯನ್‌ ಆ್ಯಂಡಿ ಮರ್ರೆಗೆ ಆಸ್ಟ್ರೇಲಿಯದ ಜೇಮ್ಸ್‌ ಡಕ್‌ವರ್ತ್‌ ಸವಾಲು ಎದುರಾಗಲಿದೆ.

Advertisement

3 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡೆಯ ಸ್ಟಾನಿಸ್ಲಾಸ್‌ ವಾವ್ರಿಂಕ ಇಟಲಿಯ ಉದಯೋನ್ಮುಖ ಆಟಗಾರ ಜಾನಿಕ್‌ ಸಿನ್ನರ್‌ ಅವರೆದುರು ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.

ವನಿತಾ ವಿಭಾಗ
ಸೆರೆನಾ ವಿಲಿಯಮ್ಸ್‌ ಅವರ ಮೊದಲ ಸುತ್ತಿನ ಎದುರಾಳಿ ಹಾರ್ಮನಿ ಟಾನ್‌. 113ನೇ ರ್‍ಯಾಂಕಿಂಗ್‌ನ ಫ್ರಾನ್ಸ್‌ ಆಟಗಾರ್ತಿಗೆ ಇದು ಮೊದಲ ವಿಂಬಲ್ಡನ್‌. ಇನ್ನೊಂದೆಡೆ 40 ವರ್ಷದ ಸೆರೆನಾ 7 ವಿಂಬಲ್ಡನ್‌ ಹಾಗೂ 23 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡತಿಯಾಗಿದ್ದಾರೆ.

ಸೆರೆನಾಗೆ ದ್ವಿತೀಯ ಸುತ್ತಿನಲ್ಲಿ 32ನೇ ಶ್ರೇಯಾಂಕಿತೆ ಸಾರಾ ಸೊರಿಬೆಸ್‌ ಟೊರ್ಮೊ ಎದುರಾಗುವ ಸಾಧ್ಯತೆ ಇದೆ. ಬಳಿಕ 6ನೇ ಶ್ರೇಯಾಂಕದ ಕ್ಯಾರೋಲಿನಾ ಪ್ಲಿಸ್ಕೋವಾ ಅವರ ಕಠಿನ ಸವಾಲು ಎದುರಾಗಬಹುದು. ಪ್ಲಿಸ್ಕೋವಾ ಕಳೆದ ವರ್ಷದ ವಿಂಬಲ್ಡನ್‌ ಸಿಂಗಲ್ಸ್‌ ರನ್ನರ್ ಅಪ್‌ ಆಗಿದ್ದಾರೆ. ಫೈನಲ್‌ನಲ್ಲಿ ಅವರು ಆ್ಯಶ್ಲಿ ಬಾರ್ಟಿಗೆ ಶರಣಾಗಿದ್ದರು. ಕಳೆದ ಮಾರ್ಚ್‌ನಲ್ಲಿ ಬಾರ್ಟಿ ನಿವೃತ್ತಿ ಘೋಷಿಸಿದ್ದರಿಂದ ಈ ಬಾರಿಯ ವನಿತಾ ಪ್ರಶಸ್ತಿ ಯಾರಿಗೆ ಒಲಿಯಲಿದೆ ಎಂಬುದೊಂದು ಕುತೂಹಲ.

ಫ್ರೆಂಚ್‌ ಓಪನ್‌ ಚಾಂಪಿಯನ್‌, ಪೋಲೆಂಡ್‌ನ‌ ಅಗ್ರ ಶ್ರೇಯಾಂಕಿತೆ ಐಗಾ ಸ್ವಿಯಾಟೆಕ್‌ ಕ್ರೊವೇಶಿಯಾದ ಅರ್ಹತಾ ಆಟಗಾರ್ತಿ ಜಾನಾ ಫೆಟ್‌ ವಿರುದ್ಧ ಮೊದಲ ಸುತ್ತಿನ ಸ್ಪರ್ಧೆಗೆ ಇಳಿಯಲಿದ್ದಾರೆ. ಸತತ 35 ಪಂದ್ಯಗಳ ಗೆಲುವಿನ ಸಾಧನೆಯೊಂದಿಗೆ ಸ್ವಿಯಾಟೆಕ್‌ ವಿಂಬಲ್ಡನ್‌ಗೆ ಆಗಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next