Advertisement

ವಿಂಬಲ್ಡನ್‌ 2022: ನಿಕ್‌ ಕಿರ್ಗಿಯೋಸ್‌ –ನೊವಾಕ್‌ ಜೊಕೋವಿಕ್‌ ಫೈನಲ್‌

11:41 PM Jul 08, 2022 | Team Udayavani |

ಲಂಡನ್‌: ನಿರೀಕ್ಷೆಯಂತೆ ಸ್ಪೇನ್‌ ಟೆನಿಸ್‌ ಸ್ಟಾರ್‌ ರಫೆಲ್‌ ನಡಾಲ್‌ ವಿಂಬಲ್ಡನ್‌ ಸೆಮಿಫೈನಲ್‌ ಕದನದಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡರು.

Advertisement

ಹೀಗಾಗಿ ಇವರ ಎದುರಾಳಿ ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌ ವಾಕ್‌ ಓವರ್‌ ಪಡೆದು ಫೈನಲ್‌ ಪ್ರವೇಶಿಸಿದರು. ರವಿವಾರದ ಪ್ರಶಸ್ತಿ ಸೆಣಸಾಟದಲ್ಲಿ ನೊವಾಕ್‌ ಜೊಕೋವಿಕ್‌ ವಿರುದ್ಧ ಸೆಣಸಲಿದ್ದಾರೆ.

ಜೊಕೋವಿಕ್‌ 2-6, 6-3, 6-3, 6-4 ಅಂತರದಿಂದ ಬ್ರಿಟನ್‌ನ ಕ್ಯಾಮರಾನ್‌ ನೂರಿಗೆ ಸೋಲುಣಿಸಿದರು.

ಟೇಲರ್‌ ಫ್ರಿಟ್ಸ್‌ ಎದುರಿನ ಕ್ವಾರ್ಟರ್‌ ಫೈನಲ್‌ ಪಂದ್ಯದ ವೇಳೆ ತೀವ್ರ ಕಿಬ್ಬೊಟ್ಟೆ ನೋವಿಗೆ ಸಿಲುಕಿದ ರಫೆಲ್‌ ನಡಾಲ್‌, ಆಗಲೇ ಸೆಮಿಫೈನಲ್‌ನಿಂದ ಹಿಂದೆ ಸರಿಯುವ ಕುರಿತು ಪ್ರಸ್ತಾವಿಸಿದ್ದರು.

ಗುರುವಾರ ತಡರಾತ್ರಿ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದರು.

Advertisement

“ಇದು ಅತ್ಯಂತ ದುರದೃಷ್ಟಕರ ನಿರ್ಧಾರ. ನಿನ್ನೆ ನೀವೆಲ್ಲ ನನ್ನ ಪರಿಸ್ಥಿತಿಯನ್ನು ನೋಡಿದಿರಿ. ಪಂದ್ಯದ ನಡುವೆ ಹಿಂದೆ ಸರಿಯುವುದು ಬಹಳ ಕಷ್ಟದ ಕೆಲಸ. ಅದೆಷ್ಟೋ ಸಲ ಪಂದ್ಯ ತ್ಯಜಿಸಿದ್ದಿದೆ. ಇದನ್ನು ನಾನು ಸದಾ ದ್ವೇಷಿಸುತ್ತೇನೆ. ಹೀಗಾಗಿ ಕ್ವಾರ್ಟರ್‌ ಫೈನಲ್‌ ಪಂದ್ಯವನ್ನು ಕಷ್ಟಪಟ್ಟಾದರೂ ಆಡಿದೆ. ಆದರೆ ಇನ್ನು ಸಾಧ್ಯವಿಲ್ಲ ಎಂಬುದು ಅರಿವಾಗಿದೆ.

ಹೀಗಾಗಿ ಸೆಮಿಫೈನಲ್‌ ಪಂದ್ಯವನ್ನು ತ್ಯಜಿಸುವ ಅತ್ಯಂತ ಕಠಿನ ನಿರ್ಧಾರಕ್ಕೆ ಬಂದಿದ್ದೇನೆ’ ಎಂಬುದಾಗಿ ರಫೆಲ್‌ ನಡಾಲ್‌ ತೀವ್ರ ನೋವಿನಿಂದ ಹೇಳಿದರು.

ಇದರೊಂದಿಗೆ ನಿಕ್‌ ಕಿರ್ಗಿಯೋಸ್‌ ಮೊದಲ ಸಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಪ್ರವೇಶಿಸಿದಂತಾಗಿದೆ. 2015ರಲ್ಲಿ ಆಸ್ಟ್ರೇಲಿಯನ್‌ ಓಪನ್‌ ಕ್ವಾರ್ಟರ್‌ ಫೈನಲ್‌ ತಲುಪಿದ್ದೇ ಕಿರ್ಗಿಯೋಸ್‌ ಅವರ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ರಫೆಲ್‌ ನಡಾಲ್‌ ಶೀಘ್ರ ಗುಣಮುಖರಾಗಿ ಬರಲಿ ಎಂಬುದಾಗಿ ಕಿರ್ಗಿಯೋಸ್‌ ಹಾರೈಸಿದ್ದಾರೆ. “ಆಸ್ಟ್ರೇಲಿಯನ್‌ ಶೋಮ್ಯಾನ್‌’ ಎನಿಸಿರುವ ಕಿರ್ಗಿಯೋಸ್‌, ಫೈನಲ್‌ ಹಾದಿಯಲ್ಲಿ 4ನೇ ಶ್ರೇಯಾಂಕದ ಸ್ಟೆಫ‌ನಸ್‌ ಸಿಸಿಪಸ್‌, 26ನೇ ಶ್ರೇಯಾಂಕಿತ ಫಿಲಿಪ್‌ ಕ್ರಜಿನೋವಿಕ್‌, ಉತ್ತಮ ಪ್ರದರ್ಶನ ನೀಡುತ್ತಿದ್ದ ಕ್ರಿಸ್ಟಿಯನ್‌ ಗಾರಿನ್‌ ಅವರಿಗೆ ಸೋಲುಣಿಸಿದ್ದರು.

ಕ್ಯಾಲೆಂಡರ್‌ ಸ್ಲಾಮ್‌ ವಿಫ‌ಲ
ರಫೆಲ್‌ ನಡಾಲ್‌ ಈ ವರ್ಷದ ಮೊದಲೆರಡು ಗ್ರ್ಯಾನ್‌ಸ್ಲಾಮ್‌ ಕೂಟಗಳಾದ ಆಸ್ಟ್ರೇಲಿಯನ್‌ ಓಪನ್‌ ಮತ್ತು ಫ್ರೆಂಚ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದ್ದರು. 1969ರ ಬಳಿಕ ವರ್ಷದ ಎಲ್ಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನೆತ್ತಿ “ಕ್ಯಾಲೆಂಡರ್‌ ಸ್ಲಾಮ್‌’ ಗೆಲ್ಲುವ ಅವಕಾಶವೊಂದು ನಡಾಲ್‌ ಮುಂದಿತ್ತು. ಅಂದು ರಾಡ್‌ ಲೆವರ್‌ ಈ ಸಾಧನೆಗೈದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next