ಶಿವಮೊಗ್ಗ: “ತಮಗೆ ರಾಜಕೀಯ ಶಕ್ತಿ ನೀಡಿರುವ ಶಿಕಾರಿಪುರ ಕ್ಷೇತ್ರದಿಂದಲೇ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಪೇಕ್ಷೆ ಇದೆ’ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, “ತೇರದಾಳ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆಂಬುದು ಸತ್ಯವಲ್ಲ’ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುವೆ. “ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲುವು ನಿಮ್ಮದೇ. ಆದರೆ ಶಿಕಾರಿಪುರ ಕ್ಷೇತ್ರ ಬಿಟ್ಟು ಬೇರೆಡೆ ಸ್ಪರ್ಧಿಸಬಾರದು’ ಎಂದು ಕ್ಷೇತ್ರದ ಅಭಿಮಾನಿಗಳು ಹಾಗೂ ಮತದಾರರು ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಪಕ್ಷದ ವರಿಷ್ಠರ ಮನವೊಲಿಸಿ ಶಿಕಾರಿಪುರದಿಂದಲೇ ಸ್ಪರ್ಧಿಸಲು ಪ್ರಯತ್ನ ನಡೆಸುತ್ತೇನೆ ಎಂದರು.
ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಕಲಬುರಗಿ, ಬೆಳಗಾವಿ, ಬೀದರ್ ಹೀಗೆ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಒತ್ತಾಯ ಕೇಳಿ ಬರುತ್ತಿದೆ ಎಂದು ತಿಳಿಸಿದರು.
ಬ್ರಾಹ್ಮಣರು ಗೋ ಮಾಂಸ ತಿನ್ನುತ್ತಾರೆ ಎಂದು ಸಚಿವ ಕಾಗೋಡು ತಿಮ್ಮಪ್ಪ ಹೇಳಿರುವುದು ಅಕ್ಷಮ್ಯ ಅಪರಾಧ.
ಒಂದು ಸಮುದಾಯವನ್ನು ಟೀಕಿಸಿ ಹೇಳಿಕೆ ನೀಡುವುದು ಸರಿಯಲ್ಲ. ಕೂಡಲೇ ಅವರು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು.
ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ.