ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ನಮ್ಮ ದೇಶದ ಯೋಧರು ಮತ್ತು ನಾಗರಿಕರನ್ನು ಉಗ್ರರು ಹತ್ಯೆಗೈಯುತ್ತಿದ್ದಾರೆ. ಮತ್ತೊಂದೆಡೆ ಭಾರತ ಪಾಕಿಸ್ತಾನದ ಜತೆ ಟಿ 20 ವಿಶ್ವಕಪ್ ಕ್ರಿಕೆಟ್ ಪಂದ್ಯಾಟವಾಡಲು ಸಿದ್ಧತೆ ನಡೆಸುತ್ತಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ, ದಾಳಿ: ದೇಶಾದ್ಯಂತ ವಿಎಚ್ ಪಿ ಪ್ರತಿಭಟನೆ
ಪಾಕಿಸ್ತಾನ ಕಾಶ್ಮೀರದಲ್ಲಿ ಪ್ರತಿದಿನ ಟಿ 20 ಆಟವಾಡುತ್ತಿದ್ದು, ದೇಶದ ಜನರ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ ಎಂದು ಒವೈಸಿ ಹೇಳಿದ್ದು, ಒಂಬತ್ತು ಮಂದಿ ನಮ್ಮ ಯೋಧರು ಜಮ್ಮು-ಕಾಶ್ಮೀರದಲ್ಲಿ ಹುತಾತ್ಮರಾಗಿದ್ದಾರೆ. ಆದರೂ ಅಕ್ಟೋಬರ್ 24ರಂದು ಪಾಕಿಸ್ತಾನದ ಜತೆ ಟಿ-20 ಕ್ರಿಕೆಟ್ ಪಂದ್ಯ ಆಡುತ್ತೀರಾ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಅಕ್ಟೋಬರ್ 24ರಂದು ದುಬೈನಲ್ಲಿ ಟಿ-20 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕ್ ನಡುವೆ ಪಂದ್ಯ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಒವೈಸಿ ಕೇಂದ್ರ ಸರ್ಕಾರವನ್ನು ಟೀಕಿಸಿರುವುದಾಗಿ ವರದಿ ಹೇಳಿದೆ. ಕಾಶ್ಮೀರ ಕಣಿವೆಯಲ್ಲಿ ನಾಗರಿಕರ ಸರಣಿ ಹತ್ಯೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಒವೈಸಿ ಆರೋಪಿಸಿದರು.
ಬಿಹಾರದ ಬಡ ಕಾರ್ಮಿಕನನ್ನು ಉಗ್ರರು ಹತ್ಯೆಗೈದಿದ್ದಾರೆ. ಗುಪ್ತಚರ ಇಲಾಖೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದಾರೆ. ಇದು ಕೇಂದ್ರ ಸರ್ಕಾರದ ವೈಫಲ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ವಿಚಾರದ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಒಂದು ಪೆಟ್ರೋಲ್, ಸೆಲ್ ಬೆಲೆ ಏರಿಕೆ ಹಾಗೂ ಇನ್ನೊಂದು ಲಡಾಖ್ ಪ್ರದೇಶದಲ್ಲಿ ಚೀನಾ ಠಿಕಾಣಿ ಹೂಡಿರುವ ಕುರಿತು ಎಂದು ಎಂಬುದಾಗಿ ಒವೈಸಿ ದೂರಿದರು.