Advertisement

ಕಳಂಕಿತ ಯಡಿಯೂರಪ್ಪರನ್ನುಮತ್ತೆ ಅಧಿಕಾರಕ್ಕೆ ತರುತ್ತೀರೇನು?

02:48 PM Feb 26, 2018 | |

ವಿಜಯಪುರ: ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬಂದಿರುವ ರಾಜ್ಯದ ಏಕೈಕ ಸಿಎಂ ಎಂಬ ಕಳಂಕ ಹೊತ್ತಿರುವ ಬಿ.ಎಸ್‌. ಯಡಿಯೂರಪ್ಪ ಅವರನ್ನೇ ಬಿಜೆಪಿ ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಇಂಥವರನ್ನು ಮತ್ತೆ ಗೆಲ್ಲಿಸಿ ಅಧಿಕಾರಕ್ಕೆ ತರುತ್ತೀರೇನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. 

Advertisement

ಜಿಲ್ಲೆಯ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದ ಮುಳವಾಡ ಗ್ರಾಮದಲ್ಲಿ ಕಾಂಗ್ರೆಸ್‌ನ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿದ್ದ ಸಿಎಂ ಎಂಬ ಕಳಂಕ ಹೊತ್ತಿದ್ದು, ಅವರ ಮಂತ್ರಿ ಮಂಡಲದ ಕೆಲ ಸಚಿವರು, ಅವರ ಪಕ್ಷದ ಅನೇಕ ಶಾಸಕರು ಜೈಲಿನ ದರ್ಶನ ಪಡೆದಿದ್ದಾರೆ ಎಂದರು. 

ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಕಾಂಗ್ರೆಸ್‌ ವಿರುದ್ಧ ಟೀಕೆ ಮಾಡಿದ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ರಾಜ್ಯದ ಜನರು ತಮಗೆ ಅಧಿಕಾರ ನೀಡಿದಾಗ ಮಾಡಿದ ಕೆಲಸಗಳೇನು ಎಂಬುದನ್ನು ಜನತೆ ಮುಂದೆ ಇಡಲೇ ಇಲ್ಲ ಎಂದು ಕುಟುಕಿದರು.

ಮೋದಿ ಅವರು ದಲಿತರ ಪರ ಎಂದು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ದಲಿತರ ಮನೆಗೆ ಹೋಗಿ ಹೋಟೆಲ್‌ ತಿಂಡಿ-ಸೇವಿಸಿದ್ದನ್ನೇ ಸಾಧನೆ ಎಂದು ಬಿಂಬಿಸಿಕೊಳ್ಳುವ ಮೂಲಕ ರಾಜ್ಯದ ಬಿಜೆಪಿ ನಾಯಕರು ದಲಿತರಿಗೆ ಅವಮಾನ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ದಲಿತೋದ್ಧಾರಕ್ಕೆ ಹಲವು ಕಾರ್ಯಕ್ರಮ ರೂಪಿಸಿ, ಅಗತ್ಯ ಅನುದಾನ ನೀಡಿದೆ. ಜೊತೆಗೆ ಯೋಜನೆ ಜಾರಿಗೆ ಕಡ್ಡಾಯ ಕಾನೂನು ಜಾರಿಗೆ ತಂದು ದಲಿತರ ಪರ ಕಾಂಗ್ರೆಸ್‌ ಬದ್ಧತೆ ಪ್ರದರ್ಶಿಸಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಲೇ ಹಸಿವು ಮುಕ್ತ ಕರ್ನಾಟಕಕ್ಕಾಗಿ ಅನ್ನಭಾಗ್ಯ ಜಾರಿಗೆ ತಂದು, ಕಡು ಬಡವರಿಗೆ ಏಳು ಕೆ.ಜಿ. ಅಕ್ಕಿ ಉಚಿತವಾಗಿ ಹಂಚುತ್ತಿದ್ದೇವೆ. ನಮ್ಮ ಸಾಧನೆಯನ್ನು ಕೇಂದ್ರದ ನೆರವಿನ ಯೋಜನೆಯ ನಮ್ಮ ಅಕ್ಕಿ ಎಂದು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ತಮ್ಮದೇ ಅಕ್ಕಿ ಎಂದಾದರೆ ತಮ್ಮ ಪಕ್ಷದ ಸರ್ಕಾರಗಳಿರುವ ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನ, ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ಏಕೆ ಬಡವರಿಗೆ ಉಚಿತ ಅಕ್ಕಿ ಹಂಚುವ ಯೋಜನೆ ಅನುಷ್ಠಾನಕ್ಕೆ ತಂದಿಲ್ಲ. ದೇಶದಲ್ಲಿ ಆಹಾರ ಭಧ್ರತಾ ಕಾಯ್ದೆ ತಂದಿರುವುದು ಯುಪಿಎ ಸರ್ಕಾರದಲ್ಲಿ ಎಂಬುದನ್ನು ಇವರು ಮರೆತಿದ್ದಾರೆ ಎಂದು ತಿರುಗೇಟು ನೀಡಿದರು.

Advertisement

ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಅದರಲ್ಲೂ ಕೃಷ್ಣಾ ಮೇಲ್ದಂಡೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ನಮ್ಮ ಸರ್ಕಾರ ಕಳೆದ ಐದು ವರ್ಷದಲ್ಲಿ ಅಗತ್ಯ ಅನುದಾನ ನೀಡಿದೆ. ಇದರಿಂದ ವಿಜಯಪುರ ಜಿಲ್ಲೆ ಇದೀಗ ಸಮ್ರಗ ನೀರಾವರಿ ಅನುಷ್ಠಾನ ಭಾಗ್ಯ ಕಾಣುತ್ತಿದೆ. ಇದಷ್ಟೇ ಅಲ್ಲ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ನೀಡಿದ್ದ ಪ್ರಣಾಳಿಕೆಯಲ್ಲಿನ ಬಹುತೇಕ ಭರವಸೆಗಳನ್ನು ಈಡೇರಿಸಿದ್ದೇವೆ. ಹೀಗಾಗಿ ಬರುವ ವಿಧಾನಸಭೆ ಚುನವಣೆಯಲ್ಲಿ ನಮ್ಮ ಕೆಲಸಕ್ಕೆ ಮತಗಳ ಮೂಲಕ ಕೂಲಿ ಕೊಡಿ. ಬಸವನಬಾಗೇವಾಡಿ ಕ್ಷೇತ್ರದಲ್ಲಿ ಶಿವಾನಂದ ಪಾಟೀಲರನ್ನು ಮತ್ತೂಮ್ಮೆ ಗೆಲ್ಲಿಸಿ ಎಂದು ಮನವಿ ಮಾಡಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸಮಾವೇಶಕ್ಕೆ ಚಾಲನೆ ನೀಡಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ. ಹರಿಪ್ರಸಾದ, ಕೆ.ಸಿ. ವೇಣುಗೋಪಾಲ, ಮಾಜಿ ರಾಜ್ಯಪಾಲೆ ಮಾರ್ಗರೇಟ್‌ ಆಳ್ವಾ, ಲೋಕಸಭೆ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಡಾ|ಎಂ.ಬಿ. ಪಾಟೀಲ, ಮಾಜಿ ಸಚಿವರಾದ ಕೆ.ಎಚ್‌.ಮುನಿಯಪ್ಪ, ರೆಹಮಾನ್‌ ಖಾನ್‌, ಸಿ.ಎಂ. ಇಬ್ರಾಹಿಂ, ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ, ಶಾಸಕರಾದ ಸಿ.ಎಸ್‌. ನಾಡಗೌಡ, ಯಶವಂತರಾಯಗೌಡ ಪಾಟೀಲ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಇತರರು ಉಪಸ್ಥಿತರಿದ್ದರು. ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next