ಬೆಂಗಳೂರು : ಯಡಿಯೂರಪ್ಪ ಯಾವ ಪಕ್ಷದವರು ? ಅವರು ಕಾಂಗ್ರೆಸ್ ಪರವಾಗಿ ಮಾತನಾಡುತ್ತಾರಾ? ವಿರುದ್ಧವೇ ಮಾತಾಡಬೇಕಲ್ಲವೇ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಕಿಡಿಕಾರಿದ್ದಾರೆ.
‘ಕಾಂಗ್ರೆಸ್ ತಿರುಕನ ಕನಸು ಕಾಣುತ್ತಿದೆ’ ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಅದು ಯಡಿಯೂರಪ್ಪರ ಅಂತರಾಳದಿಂದ ಹೇಳುವ ಮಾತಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಅದರ ಅರ್ಥ ಎಂದರು.
‘ಕಾಂಗ್ರೆಸ್ ನಾಯಕರು ಬಿಜೆಪಿಯನ್ನ ನೋಡಿ ಶಿಸ್ತು ಕಲಿಯಲಿ’ ಎಂಬ ಹೇಳಿಕೆ ವಿಚಾರಕ್ಕೆ ಕಿಡಿ ಕಾರಿ, ಬಸನಗೌಡ ಪಾಟೀಲ್ ಯತ್ನಾಳ್ ಎರಡೂವರೆ ಸಾವಿರ ಕೋಟಿ ಕೊಟ್ಟರೆ ಸಿಎಂ ಮಾಡುತ್ತಾರೆ ಅಂದರು ಅದು ಶಿಸ್ತಾ? ಯಡಿಯೂರಪ್ಪ ಮನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಅಂದವರು ಯಾರು? ಯತ್ನಾಳ್ ಅವರೇ ಹೇಳಿದ್ದಾರೆ ಎಂದರು.
ಪಿಎಸ್‌ಐ ಅಕ್ರಮ ನೇಮಕಾತಿ ವಿಚಾರದಲ್ಲಿ ವಿಜಯೇಂದ್ರ ಹೆಸರು ಪ್ರಸ್ತಾಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಶೋಕ್, ಆರಗ ಜ್ಞಾನೇಂದ್ರ, ವಿಜಯೇಂದ್ರ ಹೆಸರು ಕೇಳಿ ಬರುತ್ತಿದೆ. ತನಿಖೆಯಾಗಲಿ ಅಂತಾ ಹೇಳಿದ್ದೇನೆ ಅಷ್ಟೇ, ಈಶ್ವರಪ್ಪ ಕೇಸ್ ಏನಾಯಿತು? ಕ್ಲೀನ್ ಚಿಟ್ ಅಂದರೆ ಏನು ? ಕೇಸ್ ಮುಚ್ಚಿ ಹಾಕಿದರು ಅಂತ ತಾನೆ ? ಬಿ ರಿಪೋರ್ಟ್ ಹಾಕಿರುವುದು ದು ಪೋಲಿಸರು ಹೊರತು ಕೋರ್ಟ್ ನೀಡಿರೋದಲ್ಲ. ಸ್ವತಃ ಸಂತೋಷ್ ಪಾಟೀಲ್ ಪತ್ನಿಯೇ ಆರೋಪ ಮಾಡಿದ್ದಾರೆ. ತನಿಖೆಯ ದಿಕ್ಕು ತಪ್ಪುತ್ತಿದೆ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ, ಏನಾಯಿತು? ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಹಿಂದ ಮರೆತರು ಎಂಬ ಸಿಟಿ ರವಿ ಆರೋಪಕ್ಕೆ ಕಿಡಿ ಕಾರಿ,ಸಿ ಟಿ ರವಿಗೆ ಅಹಿಂದ, ಅಂದರೇನು ಅಂತನೂ ಗೊತ್ತಿಲ್ಲ.ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವುದು ಬಿಜೆಪಿಯವರು. ಮಂಡಲ್ ಕಮಿಷನ್ ವರದಿ ವಿರೋಧ ಮಾಡಿದ್ದು ಯಾರು? ರಾಮ ಜೋಯಿಸ್ ಯಾಕೆ ಸುಪ್ರೀಂಕೋರ್ಟ್ ಗೆ ಹೋಗಿದ್ದರು? ಯಾವ ಪಕ್ಷದವರು ವಿರೋಧ ಮಾಡಿದ್ದು? ಎಂದು ಹಲವು ಪ್ರಶ್ನೆಗಳ ಮೂಲಕ ತಿರುಗೇಟು ನೀಡಿದರು.