Advertisement

ಉಯಿಲು ಬರೆಸುತ್ತಿದ್ದೀರಾ?

08:34 PM Sep 29, 2019 | Lakshmi GovindaRaju |

ಉಯಿಲು ಬರೆಯಲೇಬೇಕೆಂದು ಕಾನೂನಿನಲ್ಲಿ ಒತ್ತಾಯವೇನಿಲ್ಲ, ಒಬ್ಬ ವ್ಯಕ್ತಿ ಉಯಿಲನ್ನು ಬರೆಯದೇ ಮೃತನಾದರೆ ಅವನ ಆಸ್ತಿ ಹೇಗೆ, ಯಾರಿಗೆ ಹಂಚಿಕೆಯಾಗಬೇಕೆಂಬುದಕ್ಕೆ ವಾರಸಾ ಎಂಬ ಕಾಯಿದೆಯೇ ಇದೆ. ಉಯಿಲನ್ನು ಬರೆದರೂ, ವ್ಯಕ್ತಿಯ ಎಲ್ಲಾ ಆಸ್ತಿಗೆ ಸಂಬಂಧಪಟ್ಟ ಹಾಗೆ ಉಯಿಲನ್ನು ಬರೆಯಬೇಕೆಂಬ ಕಡ್ಡಾಯವೇನಿಲ್ಲ. ಬೇಕಾದರೆ ಉಯಿಲು ಬರೆಯಬಹುದು, ಬೇಡವಾದರೆ ಬಿಡಬಹುದು.

Advertisement

ಉಯಿಲನ್ನು ಬರೆಯುವ ವ್ಯಕ್ತಿ ಪ್ರಾಪ್ತ ವಯಸ್ಕನಾಗಿದ್ದು, ಬುದ್ದಿ ಸ್ಥಿಮಿತದಲ್ಲಿ ಇರಬೇಕು. ನಾಮ ನಿರ್ದೇಶನ ಮಾಡುವ ಸಂದರ್ಭಗಳು ಯಾವುದು ಎಂದರೆ, ಇವೆರಡೂ ಅರ್ಹತೆಗಳು ಇರದಿದ್ದರೆ ನಾಮನಿರ್ದೇಶನ ಮಾಡುವ ಅವಶ್ಯಕತೆಯೇ ಬೀಳುವುದಿಲ್ಲ. ಉಯಿಲನ್ನು ಬರೆದಾತನ ಸಹಿಯನ್ನು ಇಬ್ಬರು ಸಾಕ್ಷಿಗಳು ತಮ್ಮ ಸಹಿಯನ್ನು ಹಾಕಿ ದೃಢೀಕರಿಸಲೇಬೇಕು. ನಾಮನಿರ್ದೇಶನದ ಸಹಿಗೆ ಒಬ್ಬ ಸಾಕ್ಷಿಯ ದೃಢೀಕರಣ ಮಾತ್ರ ಸಾಕು.

ಕೆಲವೊಮ್ಮೆ ಉಯಿಲನ್ನು ಪ್ರೊಬೇಟ್‌ ಮಾಡಿಸಬೇಕಾಗುತ್ತದೆ. ಉಯಿಲು ಖೊಟ್ಟಿಯಲ್ಲ, ಸಾಚಾ ಎಂದು ಸಾಬೀತು ಮಾಡುವುದಕ್ಕೆ ಪ್ರೊಬೇಟ್‌ ಎನ್ನುತ್ತಾರೆ. ನಾಮ ನಿರ್ದೇಶನದಲ್ಲಿ ಪ್ರೊಬೇಟ್‌ನ ಮಾತೇ ಇಲ್ಲ. ಸಾಚಾ ಎಂದು ಸಾಬೀತು ಮಾಡುವ ಸಂದರ್ಭ ಇಲ್ಲವೇ ಇಲ್ಲ.ಇದ್ದರೂ ಅತಿ ವಿರಳ. ಉಯಿಲಿನ ಮೂಲಕ ಆಸ್ತಿ ಪಡೆದವನು ಪರಿಪೂರ್ಣ ಹಕ್ಕುದಾರನಾಗಬಹುದು. ಆದರೆ, ನಾಮನಿರ್ದೇಶನ ಎಂಬುದು ಹಣ ಪಡೆದುಕೊಳ್ಳಲು ಇರುವ ಅಧಿಕಾರ ಮಾತ್ರ, ಮಾಲ್ಕಿ ಹಕ್ಕನ್ನು ಕೊಡುವುದಿಲ್ಲ.

ಉಯಿಲನ್ನು ಎಷ್ಟು ಸಾರಿ ಬೇಕಾದರೂ ಬರೆಯಬಹುದು.ಬದಲಾಯಿಸಬಹುದು. ನಾಮನಿರ್ದೇಶನವನ್ನೂ ಸಹ ಹಾಗೆಯೇ ಬದಲಾಯಿಸಬಹುದು. ಉಯಿಲು ಮತ್ತು ನಾಮನಿರ್ದೇಶನ ಎರಡೂ, ವ್ಯಕ್ತಿಯ ಮರಣಾನಂತರ ಮಾತ್ರ ಜಾರಿಗೆ ಬರುತ್ತವೆ. ಇಲ್ಲಿ ಒಂದು ಮಾತು ಬ್ಯಾಂಕಿಂಗ್‌ ವಿನಿಮಯ ಕಾಯಿದೆ ಪ್ರಕಾರ, ಈಗ ಬ್ಯಾಂಕ್‌ ಠೇವಣಿಗಳಿಗೆ, ಉಳಿತಾಯ ಖಾತೆಗಳಿಗೆ, ಲಾಕರ್‌ಗಳಿಗೆ, ನಾಮನಿರ್ದೇಶನ ಮಾಡಬಹುದು. ಆದರೆ ನಾಮನಿರ್ದೇಶನ ಮಾಡಲೇಬೇಕೆಂಬ ಕಡ್ಡಾಯವಿಲ್ಲ.

ಕಡ್ಡಾಯವಿಲ್ಲದಿದ್ದರೂ ನಾಮನಿರ್ದೇಶನ ಮಾಡುವುದು ಜಾಣತನ. ನಾಮನಿರ್ದೇಶನವಿಲ್ಲದೆ, ನಿಮ್ಮ ವಾರಸುದಾರರಿಗೆ ಹಣ ಪಡೆಯಲು ಕಷ್ಟವಾಗಬಹುದು, ವಿಳಂಬವಾಗಬಹುದು. ಅದರ ಜೊತೆಗೆ, ವಾರಸಾ ಸಮರ್ಥನ ಪತ್ರ (ಅಥವಾ ಉತ್ತರಾಧಿಕಾರ ಪತ್ರ ಅಥವಾ succession certificate) ಹಾಜರುಪಡಿಸಬೇಕೆಂದು ಬ್ಯಾಂಕಿನವರು ಒತ್ತಾಯ ಮಾಡಬಹುದು. ಹಾಗೆ ಅವರು ಒತ್ತಾಯ ಮಾಡಿದರೆ, ನಿಮ್ಮ ವಾರಸುದಾರರು ಮುಖ್ಯ ಸಿವಿಲ್‌ ನ್ಯಾಯಾಲಯಕ್ಕೆ ಅರ್ಜಿ ಹಾಕಿದ ಸಂಗತಿಯನ್ನು ರಾಜ್ಯ ಪತ್ರದಲ್ಲೋ ಅಥವಾ ವರ್ತಮಾನ ಪತ್ರದಲ್ಲೋ ಜಾಹೀರು ಮಾಡಬೇಕು.

Advertisement

ಆಮೇಲೆ ಯಾವ ತಕರಾರುಗಳೂ ಬರದೇ ಇದ್ದರೆ, ವಾರಸುದಾರರ ವಿಚಾರಣೆಯ ನಂತರ, ವಾರಸ ಸಮರ್ಥನ ಪತ್ರ ಕೊಡಬಹುದೆಂದು ನ್ಯಾಯಾಲಯ ಆಜ್ಞೆ ಮಾಡುತ್ತದೆ.ಅದಕ್ಕೆ ಕೊಡಬೇಕಾದ ಶುಲ್ಕ ರೂ. ಮೂರು ಲಕ್ಷದವರೆಗೆ ಶೇಕಡಾ 5; ಮೂರು ಲಕ್ಷಕ್ಕೆ ಮೇಲ್ಪಟ್ಟು ಶೇಕಡಾ 10; ಆಮೇಲೆ ಲಾಯರ್‌ ಫೀ; ಕೋರ್ಟ್‌ ಖರ್ಚು ಎಲ್ಲವೂ ಇರುತ್ತದೆ. ಉಯಿಲಿದ್ದರೆ ಅದನ್ನು ಪ್ರೊಬೇಟ್‌ ಮಾಡಿಸಲು ಇದೇ ಕ್ರಮ, ಇಷ್ಟೇ ಖರ್ಚು

* ಎಸ್‌.ಆರ್‌. ಗೌತಮ್‌ (ಕೃಪೆ: ನವ ಕರ್ನಾಟಕ ಪ್ರಕಾಶನ)

Advertisement

Udayavani is now on Telegram. Click here to join our channel and stay updated with the latest news.

Next