Advertisement
“ಕೊಂಡಲಲೋ ನೆಲಕೊನ್ನ ಕೊನೇಟಿ ರಾಯಡು ವಾಡು,ಕೊಂಡಲಂತ ವರಮುಲು ಗುಪ್ಪೆಡು ವಾಡು’
ಬೆಟ್ಟಗಳಲ್ಲಿ (ಏಳು ಬೆಟ್ಟಗಳ ಒಡೆಯ ವೆಂಕಟೇಶ್ವರ) ನೆಲೆಗೊಂಡಿರುವ ಸ್ವಾಮಿಯು ಬೆಟ್ಟದಷ್ಟು ವರಗಳನ್ನು ಭಕ್ತರಿಗೆ ಕರುಣಿಸುತ್ತಾನೆ ಎಂಬ ಅರ್ಥಪೂರ್ಣವಾದ ಭಾವಹಿನ್ನೆಲೆಯನ್ನು ಅನ್ನಮಾಚಾರ್ಯರ ಈ ತೆಲುಗು ಕೀರ್ತನೆ ಅರ್ಥೈಸುತ್ತದೆ. ಕಲಿ ಯುಗದಲ್ಲಿ ಭೂದೇವಿ-ಶ್ರೀದೇವಿಯೊಂದಿಗೆ ನೆಲೆಗೊಂಡಿರುವ ಗೋವಿಂದನ ಸನ್ನಿಧಾನ ಸಮಸ್ತ ಹಿಂದೂಗಳ ಪಾಲಿಗೆ ಶ್ರೀಮನ್ನಾರಾಯಣನ ಕರಕಮಲಗಳ, ಅಭಯಹಸ್ತಗಳ, ನಯನ ಮನೋಹರ ರೂಪದ ಕ್ಷಣ ಮಾತ್ರದ ದರ್ಶನದಿಂದ ಜೀವನವನ್ನೇ ಪಾವನವಾಗಿಸಿಕೊಳ್ಳುವ ಪವಿತ್ರ ಸ್ಥಳ.
Related Articles
Advertisement
ಇನ್ನು ದೇವಾಲಯದ ಅಭಿವೃದ್ಧಿ-ಇಲ್ಲಿರುವ ಬೆಲೆಬಾಳುವ ಆಭರಣಗಳು, ಬಂಗಾರದ ಒಡವೆಗಳ ಬಗ್ಗೆ ಬೆಳಕು ಚೆಲ್ಲುವು ದಾದರೆ… ಈ ದೇವಾಲಯಕ್ಕೆ ರಾಜ ತೊಂಡಮಾನ, ಪಲ್ಲವರು, ಪಾಂಡ್ಯರು, ಚೋಳರು ಸ್ವಾಮಿಗೆ ಅಪಾರ ಪ್ರಮಾಣದ ಕಾಣಿಕೆ ಗಳನ್ನು ಅರ್ಪಿಸಿದ್ದಾರೆ. ವಿಶೇಷವಾಗಿ ಶ್ರೀಕೃಷ್ಣದೇವರಾಯರು ವಿಮಾನಗೋಪುರ ನಿರ್ಮಾಣ ಮಾಡಿಸಿದರು. ಮರಾಠ ಪೇಶ್ವರು ಕೂಡ ಸ್ವಾಮಿಗೆ ಅಪಾರ ಪ್ರಮಾಣದಲ್ಲಿ ಕಾಣಿಕೆಗಳನ್ನು ಸಮರ್ಪಿಸಿ ದ್ದಾರೆ. ಇನ್ನು ಮೈಸೂರು ಮಹಾರಾಜರು ಗೋವಿಂದನ ಪರ ಮಭಕ್ತರು. ಹೀಗಾಗಿ 1945ರಲ್ಲಿ ಗೋಲ್ಕೊಂಡ ಗಣಿಗಳಲ್ಲಿ ದೊರೆತ ಅತ್ಯಂತ ಬೆಲೆ ಬಾಳುವ, ಈಗ ವಿವಾದದ ಕೇಂದ್ರ ಂದುವಾಗಿರುವ ಪಿಂಕ್ ಡೈಮಂಡನ್ನು ಸ್ವಾಮಿಗೆ ಸಮರ್ಪಿಸಿದ್ದರು. ಹೀಗಾಗಿ ರಾಜ-ಮಹಾರಾಜ-ಚಕ್ರವರ್ತಿಗಳು ಅಪಾರ ಪ್ರಮಾಣದಲ್ಲಿ ಧನ ಹಾಗೂ ಬಂಗಾರದ ಕಾಣಿಕೆಗಳನ್ನು ಸ್ವಾಮಿಗೆ ಸಮರ್ಪಿಸಿದ್ದಾರೆ. 1843ರಲ್ಲಿ ಈ ದೇವಸ್ಥಾನದ ನಿರ್ವಹಣೆಯನ್ನು ಹಾಥಿರಾಮ್‌ಜೀ ಮಠಕ್ಕೆ ವರ್ಗಾಯಿಸಲಾ ಯಿತು. ಮುಂದೆ 1932ರಲ್ಲಿ ತಿರುಪತಿ ತಿರುಮಲ ದೇವಸ್ಥಾನಂ ಬೋರ್ಡ್ ಅಸ್ತಿತ್ವಕ್ಕೆ ಬಂತು. ಬ್ರಿಟಿಷರು ಕೂಡ ಆ ದೇವಾಲಯದ ಆಡಳಿತದಲ್ಲಿ ಎಂದೂ ಮೂಗು ತೂರಿಸಲಿಲ್ಲ.
1956ರಲ್ಲಿ ಆಂಧ್ರ ಪ್ರದೇಶ ರಾಜ್ಯ ಸ್ಥಾಪನೆಗೊಂಡ ಬಳಿಕ ಈ ಪ್ರದೇಶ ಆಂಧ್ರದ ಪಾಲಾಯಿತು. ಆಂಧ್ರ ಪ್ರದೇಶ ಸರ್ಕಾರವೇ ಅಲ್ಲಿಂದ ಟಿಟಿಡಿ ಬೋರ್ಡಿಗೆ ಸದಸ್ಯರ ನೇಮಕ ಮಾಡುತ್ತದೆ, ಜೊತೆಗೆ ಆಡಳಿತ ನಿರ್ವಹಣೆಗಾಗಿ ಒಬ್ಬ ಹಿರಿಯ ಐಎಎಸ್ ಅಧಿಕಾರಿಯನ್ನು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸುತ್ತದೆ. ಆದರೆ ದೇವಸ್ಥಾನದ ಆಡಳಿತ, ವ್ಯವಹಾರವು ಆರ್‌ಟಿಐ ವ್ಯಾಪ್ತಿಯಿಂದ ಹೊರಗಿರುವ ಕಾರಣಕ್ಕೆ ಇಲ್ಲಿ ಏನು ನಡೆಯುತ್ತಿದೆ, ಚಿನ್ನಾಭರಣಗಳು, ಹಣಕಾಸಿನ ವ್ಯವಹಾರಗಳು ಹೊರಜಗತ್ತಿಗೆ ಸರಿಯಾಗಿ ತಿಳಿಯದಾಗಿದೆ. ಹಿಂದೆ ಅವ್ಯವಹಾರ ಗಳ ಬಗ್ಗೆ ತನಿಖೆಗಾಗಿ ನ್ಯಾ. ಜಗನ್ನಾಥ ಆಯೋಗವನ್ನು ನೇಮಿಸ ಲಾಯಿತು. ಇದರಿಂದ ಹೆಚ್ಚಿನ ಪ್ರಯೋಜನವೇನೂ ಆಗಲಿಲ್ಲ.
ವೆಂಕಟೇಶ್ವರ ಸ್ವಾಮಿಗೆ ಭಕ್ತರು ಸಮರ್ಪಿಸುವ ಒಟ್ಟು ಕಾಣಿಕೆಗಳ ಬಗ್ಗೆಯೇ ಟಿಟಿಡಿಯಲ್ಲಿ ಗೊಂದಲಗಳಿವೆ. ಕೆಲವು ದಾಖಲೆ ಗಳಲ್ಲಿ ಇದ್ದರೆ, ಇನ್ನುಳಿದವು ದಾಖಲೆಗಳಿಂದ ಮರೆಯಾಗಿವೆ ಎನ್ನಲಾಗುತ್ತಿದೆ. 1996ರಿಂದ ಅನೇಕ ಬೆಲೆಬಾಳುವ ಆಭರಣಗಳು ಕಾಣೆಯಾಗಿವೆ, ಈ ವಿಷಯದಲ್ಲಿ ತನಿಖೆಯಾಗಬೇಕು ಎಂದು ರಮಣ ದೀಕ್ಷಿತುಲು ಆಗ್ರಹಿಸಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ದೇವರೆಂದು ಜಗತøಸಿದ್ಧವಾಗಿದ್ದೇ ತಡ, ಎಲ್ಲರ ಕಣ್ಣು ಗೋವಿಂದನ ಮೇಲೆ ಬಿತ್ತು. ಗೋವಿಂದ ಸನ್ನಿಧಿಯೂ ಇಲ್ಲಿಂದಲೇ ವಿವಾದಗಳಿಗೆ ತುತ್ತಾಗುತ್ತಾ ಹೋದದ್ದು. ಬಹುಮುಖ್ಯವಾಗಿ ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಏಳುಬೆಟ್ಟಗಳ ಒಡೆಯನನ್ನು ಕೇವಲ ಎರಡು ಬೆಟ್ಟಗಳಿಗೆ ಸೀಮಿತಗೊಳಿಸಲು ಮುಂದಾಗಿದ್ದರು! ಕೊನೆಗೆ ರಾಷ್ಟ್ರೀಯ ಮಟ್ಟ ದಲ್ಲಿ ದೊಡ್ಡ ಹೋರಾಟ ನಡೆದ ಪರಿಣಾಮ ಏಳುಬೆಟ್ಟಗಳೂ ತಿಮ್ಮಪ್ಪನಿಗೇ ಸೇರಿದ್ದು ಅಂತ ಘೋಷಣೆ ಮಾಡಲಾಯಿತು.
ಈಗ ಮತ್ತೆ ತಿಮ್ಮಪ್ಪನ ಸನ್ನಿಧಿಯಲ್ಲಿ ವಿವಾದಗಳು ಸದ್ದು ಮಾಡುತ್ತಿವೆ. ಆದರೂ ರಮಣದೀಕ್ಷಿತುಲು ಹೊರಗಿಟ್ಟ ಅನೇಕ ಸಂಗತಿಗಳಿಂದಾಗಿ ದೇವಸ್ಥಾನದಲ್ಲಿ ಏನು ನಡೆಯುತ್ತಿದೆ ಎಂದು ಭಕ್ತರು ಕಳವಳಕ್ಕೆ ಈಡಾಗುತ್ತಿದ್ದಾರೆ. ಮೊದಲನೆಯದಾಗಿ ದೇವರಿಗೆ ಸಮಯಕ್ಕೆ ಸರಿಯಾಗಿ ನಡೆಯ ಬೇಕಾದ ಸುಪ್ರಭಾತ ಸೇವೆ, ತೋಮಲ ಸೇವೆ, ಅಷ್ಟದಳ, ಪೂರ್ವಾ ಭಿಷೇಕ ಸೇರಿದಂತೆ ಯಾವುದೇ ಸೇವೆಗಳೂ ಸರಿಯಾದ ಕ್ರಮದಲ್ಲಿ ನಡೆಯುತ್ತಿಲ್ಲವಂತೆ. ಅಧಿಕಾರ ವರ್ಗದಿಂದ ಎಲ್ಲಾ ಸೇವೆಗಳನ್ನು ಹತ್ತು ನಿಮಿಷಗಳಲ್ಲಿ ಮುಗಿಸುವಂತೆ ಒತ್ತಡ ಹೆಚ್ಚುತ್ತಿದೆಯಂತೆ. ರಾಜಕಾರಣಿಗಳು, ಉದ್ಯಮಿಗಳು, ಸಿನಿ ತಾರೆ ಯರು, ನ್ಯಾಯ ಮೂರ್ತಿಗಳು ಇವರ ಸೇವೆಯಲ್ಲಿಯೇ ಅಧಿ ಕಾರಿವರ್ಗ ಧನ್ಯವಾಗುತ್ತಿದೆ. ಸಾಮಾನ್ಯ ಭಕ್ತರನ್ನು ಕಡೆಗಣಿ ಸುತ್ತಿದೆ. ದೇವರಿಗೆ ಸಮಯಕ್ಕೆ ಸರಿಯಾಗಿ ನೈವೇದ್ಯವನ್ನೂ ನೀಡುತ್ತಿಲ್ಲ. ಪ್ರಸಾದವನ್ನು ಸಹ ಕಡಿತಗೊಳಿಸುವಂತೆ ನಿರಂತರ ಒತ್ತಡ ತರಲಾಗುತ್ತಿದೆಯಂತೆ. (ಈಗ ನಾವು ಸ್ವೀಕರಿಸುತ್ತಿರುವ ಪುಳಿಯೋಗರೆ, ಪೊಂಗಲ್, ಮೊಸರನ್ನದಲ್ಲಿನ ಹಿಂದಿನ ರುಚಿ ಯಾಕೆ ಮಾಯವಾಗಿದೆ ಎಂದು ಅರ್ಥವಾಗಿರಬಹುದು). “ರಿಪೇರಿಯ ಹೆಸರಲ್ಲಿ 25 ದಿನ ಪಾಕ ಶಾಲೆಯನ್ನು ಮುಚ್ಚಿ ಉತನನ ಮಾಡಲಾಗಿದೆ, ಗೋಡೆಯಿಂದ ಬೆಲೆಬಾಳುವ ಹರಳುಗಳನ್ನು ತೆಗೆಯಲಾಗಿದೆ’ ಎಂಬ ಗಂಭೀರ ಆರೋಪವಷ್ಟೇ ಅಲ್ಲದೇ, ಈಗ ಬಹುಮುಖ್ಯವಾಗಿ ಜಿನೀವಾದಲ್ಲಿ ಹರಾಜಿಗೆ ಬಂದಿರುವ ಪಿಂಕ್ ಡೈಮಂಡ್ ವೆಂಕಟರಮಣ ಸ್ವಾಮಿಯ ವಜ್ರ ಆಗಿರ ಬಹುದೆಂದು ದೀಕ್ಷಿತುಲು ಅನುಮಾನ ವ್ಯಕ್ತಪಡಿಸಿದ್ದಾರೆ.
ಒಟ್ಟಲ್ಲಿ ಅವರ ಆರೋಪಗಳು ನಿಜವೆಂದಾದರೆ ಹೀಗೆ ಮಾಡುತ್ತಿರುವವರು ಒಂದು ಕಡೆ ಆ ಸಾಕ್ಷಾತ್ ದೈವಕ್ಕೆ ವಂಚನೆ ಮಾಡಿದವರಷ್ಟೇ ಅಲ್ಲದೇ ಅವನ ಭಕ್ತಸಮೂಹಕ್ಕೂ ಅವಮಾನ ಮಾಡುತ್ತಾ ತಮ್ಮ ಹಿತಾಸಕ್ತಿಗಾಗಿ ಜನರ ನಂಬಿಕೆಗೆ, ಭಕ್ತಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದರ್ಥ. ಏನೇ ಆದರೂ ಸತ್ಯಾಸತ್ಯತೆ ಶೀಘ್ರವೇ ಹೊರಬರುವಂತಾಗಲಿ.
ರವೀಂದ್ರ ಕೊಟಕಿ