ಬೆಂಗಳೂರು: ಲೋಕಸಭಾ ಚುನಾವಣೆ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆಯಿದ್ದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಪರಿಷ್ಕೃತ ದರ ವಿವರ ಸಂಬಂಧ ಆದೇಶ ಹೊರಡಿಸುವ ನಿರೀಕ್ಷೆ ಇದೆ.
ಪರಿಷ್ಕೃತ ದರಗಳು ಕಳೆದ ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವ ಸಂಭವವಿದೆ. ಎಲ್ಲ ಐದು ಎಸ್ಕಾಂಗಳು 2019-2020ನೇ ಸಾಲಿನಲ್ಲಿ ವಿದ್ಯುತ್ ದರ ಏರಿಕೆಗೆ ಕಳೆದ ಡಿಸೆಂಬರ್‌ನಲ್ಲಿ ಪ್ರಸ್ತಾವ ಸಲ್ಲಿಸಿದ್ದು, ಪ್ರತಿ ಯೂನಿಟ್‌ಗೆ ಕನಿಷ್ಠ 1 ರೂ.ನಿಂದ ಗರಿಷ್ಠ 1.65 ರೂ.ವರೆಗೆ ಏರಿಕೆಗೆ ಮನವಿ ಮಾಡಿವೆ.
ಪ್ರತಿ ಎಸ್ಕಾಂಗಳು ವಿಭಿನ್ನ ಮೊತ್ತದ ದರ ಏರಿಕೆಗೆ ಕೋರಿಕೆ ಸಲ್ಲಿಸಿವೆ. ಈಗಾಗಲೇ ಕೆಇಆರ್‌ಸಿ ಎಲ್ಲ ಎಸ್ಕಾಂ, ಕೆಪಿಟಿಸಿಎಲ್ ಸೇರಿದಂತೆ ದರ ಪರಿಷ್ಕರಣೆಗೆ ಸಂಬಂಧಪಟ್ಟಂತೆ 9 ವಿಚಾರಣೆ ನಡೆಸಿದೆ. ದರ ಏರಿಕೆ ಪ್ರಸ್ತಾವಕ್ಕೆ ಎಸ್ಕಾಂಗಳು, ಕೆಪಿಟಿಸಿಎಲ್ ಸೇರಿದಂತೆ ಇತರ ಸಂಸ್ಥೆಗಳು ನೀಡಿರುವ ಸಮಜಾಯಿಷಿ, ಸಮರ್ಥನೀಯ ಅಂಶಗಳು, ಹಣಕಾಸು ಸ್ಥಿತಿಗತಿ, ವಿದ್ಯುತ್ ಪ್ರಸರಣ ಹಾಗೂ ವಿತರಣೆ ಪ್ರಕ್ರಿಯೆಯಲ್ಲಿನ ನಷ್ಟ ಸೇರಿದಂತೆ ಇತರ ಅಂಶಗಳ ಜತೆಗೆ ಸಾರ್ವಜನಿಕ ಅಭಿಪ್ರಾಯವನ್ನು ಆಯೋಗ ಆಲಿಸಿತ್ತು.
ಸಾಮಾನ್ಯವಾಗಿ ಹಣಕಾಸು ವರ್ಷ ಆರಂಭವಾಗುವ ಏ.1ರಿಂದ ಪರಿಷ್ಕೃತ ದರ ಜಾರಿಯಾಗಲಿದ್ದು, ಆ ನಿಟ್ಟಿನಲ್ಲಿ ಆಯೋಗ ವಿಚಾರಣೆ ನಡೆಸಿ ಆದೇಶ ನೀಡುತ್ತದೆ. ಆದರೆ ಈ ಬಾರಿ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಆದೇಶ ಹೊರಡಿಸಿಲ್ಲ. ನೀತಿ ಸಂಹಿತೆ ಅವಧಿ ಮುಕ್ತಾಯವಾಗುತ್ತಿದ್ದಂತೆ ಆಯೋಗ ಪರಿಷ್ಕೃತ ದರ ವಿವರ ಸಂಬಂಧ ಆದೇಶ ಹೊರಡಿಸಲಿದ್ದು, ಏ.1ರಿಂದಲೇ ಪೂರ್ವಾನ್ವಯವಾಗುವ ಸಾಧ್ಯತೆ ಹೆಚ್ಚು ಎಂದು ಮೂಲಗಳು ಹೇಳಿವೆ.