ಬಸವಕಲ್ಯಾಣ: ಕಲ್ಯಾಣ ಕರ್ನಾಟಕ ವಿಮೋಚನೆಗಾಗಿ ಹೋರಾಡಿದ ನೂರಾರು ಜನರ ಸಾಮೂಹಿಕ ಹತ್ಯಾಕಾಂಡ ನಡೆದ ಗೋರ್ಟಾ (ಬಿ) ಗ್ರಾಮದಲ್ಲಿ ಬಿಜೆಪಿ ಯುವ ಮೋರ್ಚಾ ಕೈಗೊಂಡಿರುವ ಹುತಾತ್ಮರ ಸ್ಮಾರಕ ನಿರ್ಮಾಣ ಕಾರ್ಯ ಜನಪ್ರತಿನಿಧಿಗಳ ನಿರ್ಲಕ್ಷ್ಯತನದಿಂದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಗ್ರಾಮಸ್ಥರು ಹಾಗೂ ಜಿಲ್ಲೆಯ ಜನರಿಗೆ ಬೇಸರ ತರಿಸಿದೆ.
ಗೋರ್ಟಾ(ಬಿ), ಹಾಳಗೋರ್ಟಾ ಮತ್ತು ಮುಚಳಂಬ ಗ್ರಾಮಸ್ಥರು ಏಕತೆಯಿಂದ ನಿಜಾಮನ ಆಡಳಿತದ ವಿರುದ್ಧ ಹೋರಾಟ ನಡೆಸಿದ್ದರು. ಗ್ರಾಮದಲ್ಲಿ ಹೈದರಾಬಾದ್ ನಿಜಾಮ ವಂದೇ ಮಾತರಂ ಗೀತೆ ಹಾಡುವುದನ್ನು ನಿಷೇಧಿಸಿದ್ದ. ಇದನ್ನು ಪ್ರತಿಭಟಿಸಿ ಚಳವಳಿಗಾರರು ‘ವಂದೇ ಮಾತರಂ’ ಹಾಡಲು ಮುಂದಾದಾಗ ಅವರನ್ನು ಬಂಧಿಸಿದ ನಂತರ ಕ್ರಾಂತಿ ಆರಂಭಗೊಂಡಿತು. ರಜಾಕಾರರ ಗುಂಪು ಗ್ರಾಮದ ಮೇಲೆ ದಾಳಿ ನಡೆಸಿ ಅನೇಕ ದೌರ್ಜನ್ಯ ನಡೆಸಿತು. ಇದರಿಂದ ಗ್ರಾಮದಲ್ಲಿ 200ಕ್ಕೂ ಹೆಚ್ಚು ಜನರ ಸಾಮೂಹಿಕ ಹತ್ಯೆ ನಡೆದಿದ್ದನ್ನು ಗ್ರಾಮಸ್ಥರು ಹಾಗೂ ಹಿರಿಯರು ಇಂದಿಗೂ ಮರೆತಿಲ್ಲ.
ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿದ ಗ್ರಾಮದಲ್ಲಿ ಅಂದಿನ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಮುನಿರಾಜು ಗೌಡ ಅವರ ನೇತೃತ್ವದಲ್ಲಿ ಗೋರ್ಟಾ(ಬಿ) ಗ್ರಾಮದ ಹೊರವಲಯದಲ್ಲಿ ಹುತಾತ್ಮರ ಸ್ಮಾರಕ, ಸರ್ದಾರ್ ವಲ್ಲಭಭಾಯಿ ಪಟೇಲ ಅವರ ಮೂರ್ತಿ ಮತ್ತು ಧ್ವಜ ಸ್ತಂಭ ನಿರ್ಮಾಣಕ್ಕೆ 2014ರ ಸೆ.17ರಂದು ಅಂದಿನ ರಾಜ್ಯದ ಬಿಜೆಬಿ ನಾಯಕರ ಸಮ್ಮುಖದಲ್ಲಿ ಇಂದಿನ ಕೇಂದ್ರದ ಗೃಹ ಸಚಿವ ಅಮಿತ್ ಷಾ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.
ಕೇವಲ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯವಲ್ಲ. ಮುಂದಿನ ಪೀಳಿಗೆಗೆ ಇತಿಹಾಸ ತಿಳಿಸುವ ಕಾರ್ಯವನ್ನು ಬಿಜೆಪಿ ಯುವ ಮೋರ್ಚಾ ಮಾಡುತ್ತಿದೆ ಎಂದು ಭಾಷಣ ಮಾಡಿ ಹೋಗಿದ್ದರು. ಆದರೆ ಐದು ವರ್ಷಗಳಲ್ಲಿ ಸ್ಮಾರಕ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿದೆ. ಇದರು ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ನಿದರ್ಶನವಾಗಿದೆ.
ಹುತಾತ್ಮರ ಸ್ಮಾರಕ ಹಾಗೂ ಸರದಾರ ವಲ್ಲಭಭಾಯಿ ಪಟೇಲ ಅವರ ಮೂರ್ತಿ ತಲೆ ಎತ್ತಬೇಕಾದ ಸ್ಥಳದಲ್ಲಿ ಈಗ ಮುಳ್ಳಿನ ಗಿಡ-ಗಂಟಿಗಳು ಬೆಳೆದು ನಿಂತಿವೆ. ಕಂಪೌಂಡ್ ಕಾಮಗಾರಿಗಾಗಿ ಹಾಕಲಾದ ಕಬ್ಬಿಣದ ಸರಳುಗಳು ತುಕ್ಕು ಹಿಡಿಯುತ್ತಿವೆ. ಮೂರ್ತಿ ಪ್ರತಿಷ್ಠಾಪನೆಗಾಗಿ ಸ್ಥಾಪಿಸಲಾದ ಪಿಲ್ಲರ್‌ಗಳ ಸುತ್ತಮುತ್ತ ಮುಳ್ಳಿನ ಮರಗಳು ಬೆಳೆದಿವೆ. ಆದರೂ ಇಂದಿಗೂ ಹುತಾತ್ಮರ ಸ್ಮಾರಕ ಕಾಮಗಾರಿ ಏನಾಯ್ತು ಎಂದು ಸಂಬಂಧ ಪಟ್ಟವರು ಹಾಗೂ ಜಿಲ್ಲೆಯ ಬಿಜೆಪಿ ನಾಯಕರು ಈ ಕಡೆ ತಿರುಗಿ ನೋಡುವುದಾಗಲಿ, ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಗ್ರಾಮಸ್ಥರು ಮತ್ತು ಸಾರ್ವಜನಿಕರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಇಂದು ಹುತಾತ್ಮರ ಸ್ಮಾರಕ ಕಾಮಗಾರಿ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿರುವುದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ.
•ವೀರಾರೆಡ್ಡಿ ಆರ್.ಎಸ್.