Advertisement

ಹಣದುಬ್ಬರದ ಸಮಸ್ಯೆ ಮರುಕಳಿಸಲಿದೆಯೇ?

10:08 AM Jan 24, 2020 | mahesh |

ಅಭಿವೃದ್ಧಿಶೀಲ ದೇಶಗಳ ಪರಿಸ್ಥಿತಿಯೇ ಬೇರೆ. ಕಾರಣ ಅಂತಹ ದೇಶಗಳಲ್ಲಿ ಜನಸಂಖ್ಯೆ ಬೆಳೆದ ಹಾಗೆ ಉತ್ಪಾದನೆ ಮತ್ತು ಪೂರೈಕೆಗಳು ಬೇಡಿಕೆಗೆ ಅನುಗುಣವಾಗಿ ಹೆಚ್ಚಳವಾಗುವುದಿಲ್ಲ.

Advertisement

ಹಣದುಬ್ಬರವು ಒಂದು ದೇಶದಲ್ಲಿ ಬೇಡಿಕೆ ಹಾಗೂ ಪೂರೈಕೆಯ ವ್ಯತ್ಯಯದಿಂದ ಉಂಟಾಗುವ ಪ್ರಕ್ರಿಯೆ. ಅದರಲ್ಲೂ ಅಭಿವೃದ್ಧಿಶೀಲ ದೇಶಗಳಲ್ಲಿ ಇದು ಸರ್ವೇ ಸಾಮಾನ್ಯ. ಕಾರಣ ಅಂತಹ ದೇಶಗಳಲ್ಲಿ ಜನಸಂಖ್ಯೆ ಏರಿದ ಹಾಗೆ ಸರಕು ಹಾಗೂ ಸೇವೆಗಳ ಬೇಡಿಕೆ ಹೆಚ್ಚುತ್ತದೆ. ಆದರೆ ಏಕಾ ಏ ಕಿ ಸರಕು ಹಾಗೂ ಸೇವೆಗಳ ಪೂರೈಕೆ ಹೆಚ್ಚಾಗದೇ ಇರುವುದರಿಂದ ಬೆಲೆಗಳು ಮಾತ್ರ ಏರುತ್ತವೆ. ಕೆಲವೊಮ್ಮೆ ಎಲ್ಲಾ ವಸ್ತುಗಳ ಬೆಲೆ ಏರಿದರೆ ಇನ್ನು ಕೆಲವು ಸಮಯ ಕೆಲವೇ ವಸ್ತು ಹಾಗೂ ಸೇವೆಗಳ ಬೆಲೆ ಏರುತ್ತವೆ. ಇತ್ತೀಚೆಗಷ್ಟೆ ನಮ್ಮ ದೇಶದಲ್ಲಿ ಈರುಳ್ಳಿಯ ಬೆಲೆ ಗಗನಕ್ಕೇರಿದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಹಣದುಬ್ಬರವೆಂದರೆ ಕೇವಲ ಬೆಲೆ ಏರಿಕೆಯ ಪ್ರಕ್ರಿಯೆ ಎಂಬ ಭಾವನೆ ಸರಿಯಲ್ಲ. ಕೇವಲ ಬೆಲೆ ಏರಿಕೆ ಅಥವಾ ಕೆಲವೇ ವಸ್ತುಗಳ ಬೆಲೆ ಏರಿಕೆಯನ್ನು ಅರ್ಥಶಾಸ್ತ್ರದಲ್ಲಿ ಹಣದುಬ್ಬರವೆಂದು ಕರೆಯ ಲಾಗದು. ಹಣದುಬ್ಬರವೆಂದರೆ ನಿರಂತರ ಬೆಲೆ ಏರಿಕೆಯ ಒಂದು ಪ್ರಕ್ರಿಯೆ. ನಾವು ಈ ನಿಟ್ಟಿನಲ್ಲಿ ಹೇಳುವುದಾದರೆ ಹಣದುಬ್ಬರದಲ್ಲಿ ಎರಡು ವಿಧ. ಒಂದು ನೈಜ ಹಣದುಬ್ಬರ, ಇನ್ನೊಂದು ಕೃತ್ರಿಮ ಹಣದುಬ್ಬರ. ಅರ್ಥಶಾಸ್ತ್ರದ ಪಿತಾಮಹನೆನಿಸಿಕೊಂಡ ಕೀನ್ಸ್‌ರವರ ಪ್ರಕಾರ ನೈಜ ಹಣದುಬ್ಬರ ಒಂದು ದೇಶ ಪೂರ್ಣವಾಗಿ ಅಭಿವೃದ್ಧಿಗೊಂಡ ನಂತರ ಉಂಟಾಗುತ್ತದೆ. ಆದರೆ ಕೃತ್ರಿಮ ಹಣದುಬ್ಬರ ಒಂದು ದೇಶ ಅಭಿವೃದ್ಧಿ ಪಥದಲ್ಲಿದ್ದಾಗ ಉಂಟಾಗುತ್ತದೆ..ಆ ನಿಟ್ಟಿನಲ್ಲಿ ಅವರು ಹೇಳುವಂತೆ ನೈಜ ಹಣದುಬ್ಬರವು ಪೂರ್ಣ ಪ್ರಮಾಣದ ಉದ್ಯೋಗಾವಕಾಶಗಳು ನಿರ್ಮಾಣವಾದ ನಂತರ ಉಂಟಾಗುತ್ತದೆ. ಅದನ್ನು ಅವರು ಪೂರ್ಣ ಪ್ರಮಾಣದ ಉದ್ಯೋಗದ ನಂತರದ ಪ್ರಕ್ರಿಯೆ ಅಂತ ಹೇಳಿದ್ದಾರೆ. ಮುಂದುವರಿದು, ಒಂದು ದೇಶ ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದೆ ಅಂತ ಹೇಳಿದರೆ ಅಲ್ಲಿ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳ ಬಳ ಕೆ ಸರಕು ಹಾಗೂ ಸೇವೆಗಳ ಉತ್ಪಾದನೆಗೆ ಪೂರ್ಣ ಪ್ರಮಾಣದಲ್ಲಿ ಆಗುತ್ತದೆ. ಅದರಿಂದಾಗಿ ಆ ದೇಶದಲ್ಲಿ ಶ್ರಮ, ಬಂಡವಾಳ, ಭೂಮಿ ಮತ್ತು ಇನ್ನುಳಿದ ನೈಸರ್ಗಿಕ ಸಂಪತ್ತುಗಳು ಪರಿಪೂರ್ಣ ವಾಗಿ ಉಪಯೋಗಿಸಲ್ಪಡುವುದರಿಂದ ಬೇಡಿಕೆ ಏರಿದರೂ ಹಠಾ ತ್ತ ನೆ ಹೆಚ್ಚಿನ ಪೂರೈಕೆಯಾಗದಿರುವುದರಿಂದ ಕೇವಲ ಬೆಲೆಗಳು ಒಂದೇ ಸಮನೆ ಏರಹತ್ತುವವು. ಅದಕ್ಕೆ ಪೂರ್ಣ ವಿರಾಮ ಇರುವುದಿಲ್ಲ. ಅದನ್ನು ನೈಜ ಹಣದುಬ್ಬರವೆನ್ನುವರು.

ಆದರೆ ಅಭಿವೃದ್ಧಿಶೀಲ ದೇಶಗಳ ಪರಿಸ್ಥಿತಿಯೇ ಬೇರೆ. ಕಾರಣ ಅಂತಹ ದೇಶಗಳಲ್ಲಿ ಜನಸಂಖ್ಯೆ ಬೆಳೆದ ಹಾಗೆ ಉತ್ಪಾದನೆ ಮತ್ತು ಪೂರೈಕೆಗಳು ಬೇಡಿಕೆಗೆ ಅನುಗುಣವಾಗಿ ಹೆಚ್ಚಳವಾಗುವುದಿಲ್ಲ. ಆಗ ಕೆಲವು ಅಥವಾ ಎಲ್ಲಾ ವಸ್ತುಗಳ ಬೆಲೆಗಳು ಏರಹತ್ತುವವು. ಅದನ್ನು ಕೇವಲ ಬೆಲೆ ಏರಿಕೆ ಅನ್ನುವರೆ ಹೊರತು ನಿಜ ಹಣದುಬ್ಬರವಲ್ಲ. ಇನ್ನೊಂದು ರೀತಿಯಲ್ಲಿ ಅದನ್ನು ಸ್ಟ್ಯಾಗ್‌ಫ್ಲೇಷನ್‌ (stagflation) ಅಂತ ಕರೆಯುವುದು ವಾಡಿಕೆ. ಅದರರ್ಥ ಸ್ಥಗಿತತೆಯ-ಹಣದುಬ್ಬರ. ಅದರಿಂದ ವಿದಿತವಾಗುವುದೆಂದರೆ ನಮ್ಮ ದೇಶದಲ್ಲಿಯ ಹಣದುಬ್ಬರ ಕೇವಲ ಹಣದ ಹರಿವಿನ ಹೆಚ್ಚಳದಿಂದ ಮಾತ್ರವಲ್ಲ, ಅಂತ ನಾವು ತಿಳಿದುಕೊಳ್ಳಬೇಕು. ಬದಲಾಗಿ ಅದು ಅನೇಕ ಗೊಂದಲಗಳ ಗೂಡು. ಉದಾ: ಈಗಾಗಲೇ ಹೇಳಿದ ಹಾಗೆ ಏರುತ್ತಿರುವ ಜನಸಂಖ್ಯೆಯಿಂದಾಗಿ ಬೇಡಿಕೆ ಹಾಗೂ ಪೂರೈಕೆಗಳ ನಡುವೆ ಮುಚ್ಚಲಾಗದ ಕಂದಕ, ಎಲ್ಲಿ ನೋಡಿದರಲ್ಲಿ ವಸ್ತು ಹಾಗೂ ಸೇವೆಗಳ ಲಭ್ಯತೆಯ ಸಮಸ್ಯೆ ಒಂದು ಕಡೆಯಾದರೆ, ಸರಕು ಹಾಗೂ ಸೇವೆಗಳಲ್ಲಿಯ ಮಂದಗತಿಯ ಏರಿಕೆ ಇನ್ನೊಂದೆಡೆ.

ಮುಂದುವರಿದು ಹೇಳುವುದಾದರೆ ತೈಲ ಬಿಕ್ಕಟ್ಟು ಕೂಡ ನಮ್ಮಲ್ಲಿ ಬೆಲೆ ಏರಿಕೆಯೆಂಬ ಬೆಂಕಿಗೆ ಮತ್ತಷ್ಟು ತೈಲ ಸುರಿಯುತ್ತಿದೆ. ಕಾರಣ ಅದರಿಂದಾಗಿ ಸರಕುಗಳ ಸಾಗಾಣಿಕೆಯ ವೆಚ್ಚ ಹೆಚ್ಚಿ ಬೆಲೆಗಳು ಏರುತ್ತಿವೆ. ಅದರಂತೆ ಅಗ್ಗದ ಹೆಗ್ಗಳಿಕೆಯ ಕಾರ್ಯಕ್ರಮಗಳು ಅನುತ್ಪಾದಕ ವೆಚ್ಚವನ್ನು ವೃದ್ಧಿಸುತ್ತಿರುವುದರಿಂದ ಸರಕಾರ ಬಜೆಟ್‌ನಲ್ಲಿ ಹೆಚ್ಚಿನ ಅನುದಾನವನ್ನು ತೆಗೆದಿರಿಸಬೇಕಾಗುತ್ತದೆ. ಆಗ ಕೊರತೆಯ ಬಜೆಟ್‌ ನಿರ್ಮಾಣವಾಗುತ್ತದೆ. ಅದನ್ನು ಭರಿಸಲು ಸರಕಾರ ಹೊಸ ಹೊಸ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರುವುದರಿಂದ ವಸ್ತು ಹಾಗೂ ಸೇವೆಗಳ ಬೇಡಿಕೆ ಮತ್ತಷ್ಟು ಏರಿ ಬೆಲೆ ಏರಿಕೆ ಇನ್ನಷ್ಟು ಹೆಚ್ಚಾಗುತ್ತದೆ. ಅಷ್ಟೆ ಅಲ್ಲ, ಇತ್ತೀಚೆಗಂತೂ ಅನಾವೃಷ್ಟಿ ಮತ್ತು ಅತಿವೃಷ್ಟಿಗಳೆಂಬ ರಾಹು-ಕೇತುಗಳು ಸದಾ ನಮ್ಮ ಕೃಷಿರಂಗದ ಮೇಲೆ ಎರಗಿ ತೊಂದರೆ ನೀಡುತ್ತಲೇ ಇವೆ.

Advertisement

ಉದಾ: ಗ್ರಾಹಕರ ಸಗಟು ಬೆಲೆ ಸೂಚ್ಯಂಕ ಕಳೆದ ಐದು ವರುಷ ಗಳಿಗೆ ಹೋಲಿಸಿದಲ್ಲಿ ಶೇ.7.35 ರಷ್ಟು ಹೆಚ್ಚಾಗಿದೆ. ಅದಕ್ಕೆ ಮೂಲ ಕಾರಣ ಆಹಾರ ಧಾನ್ಯಗಳ ಬೆಲೆಯಲ್ಲಿ ಉಂಟಾದ ಹೆಚ್ಚಳ. ಅಷ್ಟೆ ಅಲ್ಲ, ತಜ್ಞರ ಅಭಿಪ್ರಾಯದಂತೆ ಅದು ಬರುವ ತಿಂಗಳಲ್ಲಿ ಶೇ.8ರಷ್ಟು ಆಗುವ ಸಂಭವವಿದೆ. ಕಾರಣ ಆಹಾರ ಧಾನ್ಯಗಳ ಬೆಲೆ, ಅದರಲ್ಲೂ ತರಕಾರಿಯ ಬೆಲೆ ಏರಿಕೆ. ಹಾಗೇನೇ ಡಿಸೆಂಬರ್‌ 2019ರಲ್ಲಿ ಆಹಾರ ಧಾನ್ಯಗಳ ಬೆಲೆಯಲ್ಲಿ ಶೇ.13.12ರಷ್ಟು ಹೆಚ್ಚಳವಾಗಿದೆ. ಅದು ನವೆಂಬರ್‌ನಲ್ಲಿ ಶೇ.11ರಷ್ಟಿತ್ತು. ಆಹಾರೇತರ ವಸ್ತುಗಳ ಬೆಲೆಯಲ್ಲೂ ಸುಮಾರು ನಾಲ್ಕುಪಟ್ಟಿನಷ್ಟು ಹೆಚ್ಚಳವಾಗಿದೆ.

ಅದು ನವೆಂಬರ್‌ 2019ರಲ್ಲಿ ಶೇ 1.93 ಇದ್ದಿತ್ತು. ಆದರೆ ಡಿಸೆಂಬರ್‌ ನಲ್ಲಿ ಶೇ.7.72ಕ್ಕೆ ತಲುಪಿದೆ. ಆಹಾರ ಧಾನ್ಯಗಳ ಬೆಲೆಯಲ್ಲಿ ಶೇ.69.9 ರಷ್ಟು (ಅದರಲ್ಲೂ ಈರುಳ್ಳಿ ಬೆಲೆಯಲ್ಲಿ ಶೇ. 455.83ರಷ್ಟು ಮತ್ತು ಬಟಾಟಿಯಲ್ಲಿ ಶೇ.44.97 ರಷ್ಟು) ಏರಿಕೆ ಕಂಡಿದೆ.

ಇವೆಲ್ಲ ಕಾರಣಗಳಿಂದಾಗಿ 2016ರಿಂದ ಈಚಿನವರೆಗೆ 3.3ರಿಂದ 4.09ರ ಮಧ್ಯೆ ಓಲಾಡುತ್ತಿದ್ದ ಹಣದುಬ್ಬರ ಈಗ ಶೇ.7.35ರಷ್ಟಾಗಿದೆ. ಬಹಳಷ್ಟು ಪ್ರದೇಶಗಳಲ್ಲಿ ಹಿಂಗಾರು ಬೆಳೆಗಳಾದ ಗೋಧಿ, ಜೋಳ, ರಾಗಿ, ನವಣೆ ಮುಂತಾದವುಗಳು ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆ ಆಗಿಲ್ಲ. ಅದರಂತೆಯೆ ವಿವಿಧ ಆಘಾತಗಳಾದ ತೈಲ ಬೆಲೆ ಏರಿಕೆ, ಉತ್ಪಾದನ ವೆಚ್ಚ ಏರಿಕೆ, ಅತಿವೃಷ್ಟಿಯಿಂದ ಕೃಷಿ ಹುಟ್ಟುವಳಿಯ ಇಳಿಕೆ ಮತ್ತು ಬೆಲೆ ಏರಿಕೆ, ಆಯಾತ ಬೆಲೆ ಏರಿಕೆ ಮುಂತಾದವುಗಳು ಇಲ್ಲಿ ಕೈ ಜೋಡಿಸಿರುವುದರಿಂದ ಮುಂಬರುವ ದಿನಗಳಲ್ಲಿ ಅದು ಇನ್ನೂ ಹೆಚ್ಚಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಆದರೆ ಒಂದು ವಿಷಯವನ್ನು ನಾವು ಮರೆಯುವ ಹಾಗಿಲ್ಲ. ಅದೇನೆಂದರೆ ಆರ್ಥಿಕ ಹಿಂಜರಿತದ ಸಮಯದಲ್ಲಿ ಒಮ್ಮೆಲೇ ಬೆಲೆ ಏರಿಕೆ ಉಂಟಾಗಬಾರದು. ಇದ ರಿಂದಾಗಿ ಅದು ಸರಕು ಮತ್ತು ಸೇವೆಗಳ ಉತ್ಪಾದನೆಗಿಂತ ಹೆಚ್ಚಿನ ಸಂಗ್ರಹ ಮತ್ತು ಕಾಳಸಂತೆಗೆ ಆಸ್ಪದ ಒದಗಿಸುತ್ತದೆ. ಅದರಿಂದಾಗಿ ಹಿಂಜರಿತದಿಂದಾಗಿ ಕುಸಿದಿರುವ ಜಿ.ಡಿ.ಪಿ,, ಮೂಲ ಬೆಲೆಯ ಲೆಕ್ಕಾಚಾರದಂತೆ ಇನ್ನೂ ಕಡಿಮೆಯಾಗುತ್ತದೆ. ಆದರೆ ಹಣದುಬ್ಬರದ ಇನ್ನೊಂದು ಸಂದೇಶವೇನೆಂದರೆ ನಮ್ಮ ಆರ್ಥಿಕತೆಯ ಪುನರ್‌ ಉದಯದ ಕಾಲ ಶುರವಾಗಿದೆ ಎಂದು. ಅಂದರೆ ನಮ್ಮ ಆರ್ಥಿಕತೆಗೆ ಹಿಡಿದ ಗ್ರಹಣ ಬಿಡುವ ಹಂತ ತಲುಪಿದೆ ಅಂತ. ಆ ತರಹದ ಬೆಲೆ ಏರಿಕೆ ವಾರ್ಷಿಕ ಶೇ.3ರೊಳಗೆ ಇರಬೇಕು. ಆಗ ಅದು ಹೆಚ್ಚಿನ ಹೂಡಿಕೆ ಮತ್ತು ಉತ್ಪಾದನೆಗೆ ಉತ್ತೇಜಕವಾಗುತ್ತದೆ. ಇಲ್ಲವಾದಲ್ಲಿ ಹಣದುಬ್ಬರಕ್ಕೆ ಆಸ್ಪದ ಅಂತ ಅರ್ಥ.

ಡಾ| ಎಸ್‌.ಡಿ.ನಾಯ್ಕ, ಆರ್ಥಿಕತಜ್ಞ

Advertisement

Udayavani is now on Telegram. Click here to join our channel and stay updated with the latest news.

Next