Advertisement

ಹಂಪಿಯಲ್ಲಿ ನಡೆಯಲಿದೆಯೇ ಜಿ20 ಶೃಂಗ? ವರ್ಷಪೂರ್ತಿ ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನ

07:57 PM Oct 17, 2022 | Team Udayavani |

ನವದೆಹಲಿ: ಮುಂದಿನ ಜಿ20 ಶೃಂಗ ಸಭೆಯ ಅಧ್ಯಕ್ಷತೆ ವಹಿಸುವ ಅವಕಾಶ ಭಾರತಕ್ಕೆ ದೊರೆತಿದ್ದು, ದೊಡ್ಡ ಮೆಟ್ರೋಗಳಿಂದ ಹಿಡಿದು ಸಣ್ಣ ನಗರದವರೆಗೆ, ಶ್ರೀಮಂತ ಇತಿಹಾಸವುಳ್ಳ ಪ್ರದೇಶದಿಂದ ಹಿಡಿದು ಕಣ್ಮನ ತಂಪಾಗಿಸುವ ಸುಂದರ ತಾಣದವರೆಗೆ ಒಟ್ಟು 55 ಸ್ಥಳಗಳಲ್ಲಿ ಸಭೆಯನ್ನು ಆಯೋಜಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.

Advertisement

ಪ್ರವಾಸೋದ್ಯಮ ಸಚಿವಾಲಯದ ಈ ಪ್ರಸ್ತಾವಿತ ಪಟ್ಟಿಯಲ್ಲಿ “ಕರ್ನಾಟಕದ ಹಂಪಿ’ಯೂ ಸೇರಿರುವುದು ವಿಶೇಷ.

ಹೌದು, “ದೇಶದ ಪಾರಂಪರಿಕ ತಾಣಗಳ’ ಮೇಲೆ ಗಮನ ಸೆಳೆಯುವ ನಿಟ್ಟಿನಲ್ಲಿ ಶೃಂಗಸಭೆ ಆಯೋಜಿಸಲು ಯೋಜಿಸಿರುವ ಪ್ರದೇಶಗಳ ಪಟ್ಟಿಗೆ ಹಂಪಿ, ಖಜುರಾಹೋ ದೇಗುಲಗಳಂಥ ತಾಣಗಳನ್ನೂ ಸೇರಿಸಲಾಗುತ್ತಿದೆ. ಮೆಟ್ರೋ ನಗರಗಳು, ರಾಜ್ಯಗಳ ರಾಜಧಾನಿಗಳು, ಪ್ರಮುಖ ಪ್ರವಾಸಿ ತಾಣಗಳು ಸೇರಿದಂತೆ ವಿವಿಧ ರಾಜ್ಯಗಳ ಒಟ್ಟಾರೆ 55 ಸ್ಥಳಗಳಲ್ಲಿ ಸಭೆ ನಡೆಸಲಾಗುತ್ತದೆ.

ಒಟ್ಟು 200 ಸಭೆಗಳು:
ಜಿ20 ರಾಷ್ಟ್ರಗಳ ಅಧ್ಯಕ್ಷತೆಯು ವರ್ಷಪೂರ್ತಿ ಭಾರತದ ಕೈಯ್ಯಲ್ಲಿರಲಿದ್ದು, ಸುಮಾರು 200ರಷ್ಟು ಸಭೆಗಳನ್ನು ಆಯೋಜಿಸಲು ಸರ್ಕಾರ ನಿರ್ಧರಿಸಿದೆ. ಮುಂದಿನ ವರ್ಷದ ಸೆಪ್ಟೆಂಬರ್‌ 9 ಮತ್ತು 10ರಂದು ನಡೆಯುವ ವಾರ್ಷಿಕ ಶೃಂಗಸಭೆಯ ಮೂಲಕ ಭಾರತದ ಅಧ್ಯಕ್ಷ ಸ್ಥಾನದ ಅವಧಿಯೂ ಸಮಾಪ್ತಿಯಾಗಲಿದೆ.

ಶೃಂಗ ಎಲ್ಲೆಲ್ಲಿ ನಡೆಯಬಹುದು?
ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಕರ್ನಾಟಕದ ಹಂಪಿ, ಮಧ್ಯಪ್ರದೇಶದ ಖಜುರಾಹೋದಲ್ಲಿನ ದೇವಾಲಯಗಳು, ಗುಜರಾತ್‌ನ ರಣ್‌, ಪಶ್ಚಿಮ ಬಂಗಾಳದ ಸಿಲಿಗುರಿ ಸೇರಿ ಒಟ್ಟು 55 ಕಡೆ ಸಭೆ ನಡೆಯಲಿದೆ. ಪಾರಂಪರಿಕ ತಾಣಗಳ ಸಮೀಪದಲ್ಲೇ ಇರುವಂಥ ಕನ್ವೆನ್ಶನ್‌ ಹಾಲ್‌ಗ‌ಳಲ್ಲಿ ಶೃಂಗವನ್ನು ಆಯೋಜಿಸಲಾಗುತ್ತದೆ. ನಂತರ, ಆ ತಾಣಗಳಿಗೆ ಭೇಟಿ ಅಥವಾ ಅಲ್ಲೇ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆ ಮೂಲಕ ಜಿ20 ಪ್ರತಿನಿಧಿಗಳಿಗೆ ದೇಶದ ಶ್ರೀಮಂತ ಪರಂಪರೆ, ಇತಿಹಾಸವನ್ನು ಮನದಟ್ಟು ಮಾಡಿಕೊಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement

ಭಾರತದ ಜಿ20 ಅಧ್ಯಕ್ಷತೆಯ ಅವಧಿ- 2022 ಡಿ.1ರಿಂದ 2023ರ ನ.30ರವರೆಗೆ.
ಒಟ್ಟು ಎಷ್ಟು ಪ್ರದೇಶಗಳಲ್ಲಿ ಸಭೆ? – 55
ವರ್ಷಪೂರ್ತಿ ನಡೆಯುವ ಸಭೆಗಳು- 200

Advertisement

Udayavani is now on Telegram. Click here to join our channel and stay updated with the latest news.

Next