ವಾಡಿ: ನಾನು, ನನ್ನ ಹೆಂಡತಿ ಮಕ್ಕಳು ಸತ್ತಮೇಲೆ ಸೌಲಭ್ಯ ಕೊಡ್ತೀರಾ? ನಾನೇನು ಪಾಪ ಮಾಡಿದ್ದೇನೆ. ನನಗೇಕೆ ಮೋಸ ಮಾಡ್ತಿದ್ದೀರಿ. ನಾನು ಬದುಕಬಾರದಾ? ಮನೆ ಬಿದ್ದಿದೆ. ಸಂಸಾರ ದಿಕ್ಕಾಪಾಲಾಗಿದೆ. ಇದ್ದ ಕೂಲಿ ಕೆಲಸ ಕೈತಪ್ಪಿದೆ. ಬದುಕು ಬೀದಿಗೆ ಬಿದ್ದಿದೆ. ನನಗೇಕೆ ಸರ್ಕಾರ ಸಹಾಯ ಮಾಡಲ್ಲ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಗದ್ಗದಿತನಾದ ಅಂಗವಿಕಲ ಧರ್ಮಸಿಂಗ್ ರಾಠೊಡ ಪುರಸಭೆ ಅಧಿಕಾರಿಗಳು ಮತ್ತು ವಾರ್ಡ್ ಸದಸ್ಯರನ್ನು ಕ್ಷಣಕಾಲ ಕಂಗಾಲಾಗುವಂತೆ ಮಾಡಿದ ಪ್ರಸಂಗ ಪಟ್ಟಣದಲ್ಲಿ ನಡೆದಿದೆ.
ತ್ರಿಚಕ್ರ ವಾಹ, ವಸತಿ ಸೌಲಭ್ಯ, ಧನ ಸಹಾಯ ಹಾಗೂ ವಿವಿಧ ಸರಕಾರಿ ಸೌಲಭ್ಯಗಳಿಂದ ವಂಚಿತ ನಾದ ಪಟ್ಟಣದ ಅಂಗವಿಕಲ ಧರ್ಮಸಿಂಗ್ ರಾಠೊಡ, ಗುರುವಾರ ಪುರಸಭೆ ಕಚೇರಿಗೆ ಆಗಮಿಸಿ ಮುಖ್ಯಾ ಧಿಕಾರಿ ಚಿದಾನಂದ ಸ್ವಾಮಿ ಅವರೆದುರು ಕಣ್ಣೀರು ಹಾಕಿ ಗೋಳಾಡಿದ್ದಾನೆ.
ಪುರಸಭೆ ಅನುದಾನದಡಿ ಇತ್ತೀಚೆಗೆ ಶಾಸಕ ಪ್ರಿಯಾಂಕ್ ಖರ್ಗೆ ಅವರಿಂದ ಕೆಲ ಅಂಗವಿಕಲರಿಗೆ ತ್ರಿಚಕ್ರ ಬೈಕ್ ನೀಡಲಾಗಿತ್ತು. ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಗಿತ್ತು. ಕೋಲಿನ ಸಹಾಯವಿಲ್ಲದೆ ನನಗೂ ನಡೆಯಲು ಬರುವುದಿಲ್ಲ. ನನಗೇಕೆ ತ್ರಿಚಕ್ರ ವಾಹನದ ಫಲಾನುಭವಿಯಾಗಿ ಆಯ್ಕೆ ಮಾಡಿಲ್ಲ? ಕೊರೊನಾ ಕಾರಣದಿಂದ ರೈಲು ನಿಲ್ದಾಣದಲ್ಲಿನ ವಾಹನ ಪಾರ್ಕಿಂಗ್ ನಿರ್ವಹಣೆ ಕೆಲಸವೂ ಕೈತಪ್ಪಿ ವರ್ಷವಾಯಿತು.
ಮನೆ ಕಟ್ಟಿಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಧನಸಹಾಯ ಮಂಜೂರಾಗಿದೆ ಎಂದಿದ್ದಕ್ಕೆ ಇದ್ದ ಗುಡಿಸಲು ಮನೆ ಉರುಳಿಸಿದ್ದೇನೆ. ಈಗ ಧನಸಹಾಯ ವಾಪಸ್ ಹೋಗಿದೆ ಎನ್ನುತ್ತಿದ್ದೀರಿ. ನಾನೆಲ್ಲಿ ಬದುಕಲಿ ಹೇಳಿ? ಹೆಂಡರು ಮಕ್ಕಳನ್ನು ತವರಿಗೆ ಕಳಿಸಿ ನಾನೀಗ ಬೀದಿಗೆ ಬಿದ್ದಿದ್ದೇನೆ. ಸರ್ಕಾರದಿಂದಾಗಲಿ ಅಥವಾ ಪುರಸಭೆಯಿಂದಾಗಲಿ ನನಗೆ ಯಾವ ಸೌಲಭ್ಯವೂ ಸಿಕ್ಕಿಲ್ಲ. ಪುರಸಭೆ ಕಚೇರಿಯಲ್ಲಿ ನಾನೊಬ್ಬ ಅಂಗವಿಕಲ ಎಂದು ಹೆಸರು ದಾಖಲಾಗಿಲ್ಲ ಎಂದು ಆರೋಪಗಳ ಸುರಿಮಳೆಯನ್ನೇ ಸುರಿಸಿದ ಧರ್ಮಸಿಂಗ್ ರಾಠೊಡ.
ನನಗೆ ಬದುಕಲು ವಸತಿ ಸಹಿತ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಿ. ತ್ರಿಚಕ್ರ ವಾಹನ ನೀಡಿ ನೆರವಾಗಿರಿ. ಉಪಜೀವನಕ್ಕೆ ದಾರಿ ತೋರಿಸಿ ಎಂದು ಗೋಳಿಟ್ಟ ಪ್ರಸಂಗ ನಡೆಯಿತು. ಫಲಾನುಭವಿಯ ಅಳಲು ಕಂಡು ಸಮಾಧಾನಪಡಿಸಿದ ಮುಖ್ಯಾಧಿಕಾರಿ ಚಿದಾನಂದ ಸ್ವಾಮಿ, ನಾನು ಕೆಲವೇ ದಿನಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದೇನೆ. ಹಿಂದೆ ಏನಾಗಿದೆಯೋ ನನಗೆ ಗೊತ್ತಿಲ್ಲ. ಇನ್ನುಮುಂದೆ ನಿಮಗೆ ಪುರಸಭೆಯಿಂದ ಮಂಜೂರಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುತ್ತೇವೆ ಎಂದು ಭರವಸೆ ನೀಡಿದರು.