ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರ ಪುನರ್‌ವಿಂಗಡಣೆಗೆ ಮುನ್ನ 1999ರಿಂದ ಬಿಜೆಪಿಯ ಕೋಟೆಯಾಗಿದ್ದು, ಬಳಿಕವೂ 2008ರಲ್ಲಿ ಪಕ್ಷದ ಅಲೆ ಮಧ್ಯೆ ಗೆದ್ದು ಬಂದಿದ್ದ ಪಕ್ಷ 2013ರಲ್ಲಿ ಈ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿತ್ತು. ಈ ಬಾರಿ ಮತ್ತೆ ಅದನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆಯಾದರೂ ಆಂತರಿಕ ಭಿನ್ನಮತ ಅಡ್ಡಿಯಾಗಿದೆ. ಇದರ ಪರಿಣಾಮ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದು ಕಷ್ಟ ಎನ್ನುವಂತಾಗಿದೆ.
2008ರಲ್ಲಿ ಸೋತರೂ 2013ರ ಚುನಾವಣೆಯಲ್ಲಿ 13 ಸಾವಿರಕ್ಕೂ ಹೆಚ್ಚು ಅಂತರದಲ್ಲಿ ಕ್ಷೇತ್ರವನ್ನು ಬಿಜೆಪಿಯಿಂದ ಕಸಿದುಕೊಂಡಿದ್ದ ಕಾಂಗ್ರೆಸ್‌ನ ಆರ್.ವಿ.ದೇವರಾಜ್ ಮತ್ತೆ ಕಣದಲ್ಲಿದ್ದಾರೆ. ಬಿಜೆಪಿ 2008ರಲ್ಲಿ ದೇವರಾಜ್ ವಿರುದ್ಧ ಗೆದ್ದಿದ್ದ ಡಾ.ಡಿ.ಹೇಮಚಂದ್ರ ಸಾಗರ್ ಅವರನ್ನು ಬದಿಗಿಟ್ಟು ಕಳೆದ ಬಾರಿ ಸೋತಿದ್ದ ಉದಯ್ ಬಿ. ಗರುಡಾಚಾರ್‌ಗೆ ಮಣೆ ಹಾಕಿದೆ. ಇದರಿಂದ ಬೇಸತ್ತ ಹೇಮಚಂದ್ರ ಸಾಗರ್ ಜೆಡಿಎಸ್ ಸೇರಿ ಆ ಪಕ್ಷದಿಂದ ಕಣಕ್ಕಿಳಿದಿದ್ದಾರೆ.
ಇದಲ್ಲದೆ, ಎಸ್‌ಡಿಪಿಐ, ಆರ್‌ಪಿಐ, ರಿಪಬ್ಲಿಕನ್ ಸೇನಾ, ಅಖೀಲ ಭಾರತ ಹಿಂದೂ ಮಹಾಸಭಾ , ಎಐಎಂಇಪಿ, ಪಕ್ಷೇತರ ಅಭ್ಯರ್ಥಿಗಳೂ ಸ್ಪರ್ದೆಯಲ್ಲಿದ್ದಾರೆ. ಈ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆಯೇ ತೀವ್ರ ಪೈಪೋಟಿ ಇರುತ್ತಿದ್ದ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವುದು ಖಚಿತ. ಜೆಡಿಎಸ್ ಅಭ್ಯರ್ಥಿ ಹೇಮಚಂದ್ರ ಸಾಗರ್ 2008ರಲ್ಲಿ ಬಿಜೆಪಿಯಿಂದ ಗೆದ್ದವರಾಗಿದ್ದು, ವೈಯಕ್ತಿಕವಾಗಿ ಸಾಕಷ್ಟು ಬೆಂಬಲಿಗರನ್ನು ಹೊಂದಿರುವುದು ಇದಕ್ಕೆ ಕಾರಣ. ತ್ರಿಕೋನ ಸ್ಪರ್ಧೆ ಎದುರಾದರೆ ಅದರ ಲಾಭ ಕಾಂಗ್ರೆಸ್‌ಗೆ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ.
ಆಕಾಂಕ್ಷಿಗಳ ಸಂಖ್ಯೆಯೇ ಬಿಜೆಪಿಗೆ ಹಿನ್ನಡೆ: ಚಿಕ್ಕಪೇಟೆಯ ಸ್ವಲ್ಪ ಭಾಗ, ಕಲಾಸಿಪಾಳ್ಯ ಮಾರುಕಟ್ಟೆ, ಸಿದ್ದಾಪುರ, ಗಾಂಧಿ ಬಜಾರ್, ವಿ.ವಿ.ಪುರ ಹೀಗೆ ಎಲ್ಲಾ ವಿಧದ ಪ್ರದೇಶಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಕಷ್ಟವೇನೂ ಅಲ್ಲ ಎಂಬುದು 2008ರಲ್ಲಿ ಸಾಬೀತಾಗಿತ್ತು. 2013ರಲ್ಲಿ ಸೋಲು ಅನುಭವಿಸಿದ್ದರೂ ಮತ್ತೆ ಗೆಲ್ಲಲು ಅವಕಾಶ ಸಾಕಷ್ಟಿತ್ತು. ಆದರೆ, ಅಭ್ಯರ್ಥಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದುದು ಮತ್ತು ಅವರೆಲ್ಲರೂ ಪ್ರಬಲರಾಗಿದ್ದುದು ಈ ಬಾರಿ ಪಕ್ಷಕ್ಕೆ ಹಿನ್ನಡೆ ತಂದೊಡ್ಡುವ ಭೀತಿ ಎದುರಾಗಿದೆ.
ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಪಾಲಿಕೆ ಮಾಜಿ ಸದಸ್ಯ ಎನ್.ಆರ್.ರಮೇಶ್ ಒಂದು ವರ್ಷದ ಹಿಂದೆಯೇ ಕೆಲಸ ಆರಂಭಿಸಿದ್ದರು. ಇನ್ನೊಂದೆಡೆ ಹೇಮಚಂದ್ರ ಸಾಗರ್ ಕೂಡ ಕಾರ್ಯಪ್ರವೃತ್ತರಾಗಿದ್ದರು. ರಮೇಶ್ ಅಥವಾ ಹೇಮಚಂದ್ರ ಸಾಗರ್ ಪೈಕಿ ಒಬ್ಬರಿಗೆ ಟಿಕೆಟ್ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಉದಯ್ ಗರುಡಾಚಾರ್ ಯಶಸ್ಸು ಗಳಿಸಿದರು. ಇದರಿಂದ ರಮೇಶ್ ಅಸಮಾಧಾನಗೊಂಡರೆ, ಹೇಮಚಂದ್ರ ಸಾಗರ್ ಪಕ್ಷವನ್ನೇ ತೊರೆದು ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ.
ಇನ್ನು ಉದಯ ಗರುಡಾಚಾರ್ ಅಭ್ಯರ್ಥಿಯಾಗಿರುವುದು ಸ್ಥಳೀಯ ಕಾರ್ಯಕರ್ತರಿಗೂ ಪೂರ್ಣ ಸಮಾಧಾನವಿಲ್ಲ ಎಂದು ಹೇಳಲಾಗುತ್ತಿದೆ. ಆದರೂ ಎನ್.ಆರ್.ರಮೇಶ್ ಅಸಮಾಧಾನ ಮರೆತು ಪಕ್ಷದ ಅಭ್ಯರ್ಥಿಗೆ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಿದರೆ ಬಿಜೆಪಿ ಗೆಲ್ಲುವ ಅವಕಾಶವಿದೆ. ಏಕೆಂದರೆ, ಕ್ಷೇತ್ರದಲ್ಲಿ ಎಸ್‌ಡಿಪಿಐ ಮತ್ತು ಮಹಿಳಾ ಎಂಪವರ್‌ವೆುಂಟ್ ಪಾರ್ಟಿಗಳು ಕಣಕ್ಕಿಳಿದಿದ್ದು, ಎರಡೂ ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಮತಬ್ಯಾಂಕ್‌ಗೆ ನಷ್ಟ ಉಂಟುಮಾಡುತ್ತದೆ. ಜೆಡಿಎಸ್ ಕೂಡ ಈ ಬಾರಿ ಕ್ಷೇತ್ರದಲ್ಲಿ ಶಕ್ತಿ ಹೆಚ್ಚಿಸಿಕೊಂಡಿದೆ.
* ಪ್ರದೀಪ್‍ಕುಮಾರ್ ಎಂ.