Advertisement

ಕಲಬುರಗಿ ದಕ್ಷಿಣದಲ್ಲಿ ಸ್ಟಾರ್‌ ಆಗುವರಾರು?

01:24 PM Apr 06, 2018 | Team Udayavani |

ಕಲಬುರಗಿ: 2008ರಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಲಬುರಗಿ ದಕ್ಷಿಣ ವಿಧಾನಸಭೆ ಕ್ಷೇತ್ರ ಜಿಲ್ಲೆಯಲ್ಲಿಯೇ ಸ್ಟಾರ್‌ ಕ್ಷೇತ್ರವಾಗಿದೆ. ಈ ಕ್ಷೇತ್ರದ ಮೇಲೆ ಹಲವರು ಕಣ್ಣಿಟ್ಟಿರುವುದೇ ಇದಕ್ಕೆ ಸಾಕ್ಷಿ. ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ಸಹ ಕ್ಷೇತ್ರ ಪುನರ್‌ವಿಂಗಡನೆ ನಂತರ ಹೊಸದಾಗಿ ಹುಟ್ಟಿಕೊಂಡಿರುವಂತಹದ್ದು. ಮಹಾನಗರದ 25 ವಾರ್ಡ್‌ಗಳು ಹಾಗೂ ಕಲಬುರಗಿ ತಾಲೂಕಿನ ಖಣದಾಳ ಮತ್ತು ಪಟ್ಟಣ ಈ ಎರಡು ಜಿಪಂ ಕ್ಷೇತ್ರಗಳ ಒಟ್ಟು ಎಂಟು ಗ್ರಾಮ ಪಂಚಾಯತಿಗಳಾದ 28 ಹಳ್ಳಿಗಳು ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.ಒಟ್ಟಾರೆ ಮಹಾನಗರ ಹಾಗೂ ಗ್ರಾಮೀಣ ಭಾಗ ಒಳಗೊಂಡಿರುವ ಕಲಬುರಗಿ ದಕ್ಷಿಣ ಹಲವು ವೈಶಿಷ್ಟéಗಳಿಂದ ಕೂಡಿದೆ.

Advertisement

ಕಲಬುರಗಿ ಜಿಲ್ಲೆಯಲ್ಲೇ ಏಕೈಕ ಬಿಜೆಪಿ ಶಾಸಕರನ್ನು ಹೊಂದಿರುವ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಪುನರಾಯ್ಕೆ ಬಯಸಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬಿಜೆಪಿ ಅಭ್ಯರ್ಥಿ ದತ್ತಾತ್ರೇಯ ಪಾಟೀಲ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷರು ಘೋಷಣೆ ಮಾಡಿದ್ದರೂ ಟಿಕೆಟ್‌ ಇನ್ನೂ ಅಂತಿಮಗೊಂಡಿಲ್ಲವೆಂದು ಹೇಳುತ್ತಿರುವುದು ಹಾಗೂ ಈ ನಡುವೆ ಮತ್ತೂಬ್ಬರ ಹೆಸರು ತೂರಿ ಬಂದಿರುವುದು ಕುತೂಹಲಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಈ ಕ್ಷೇತ್ರದ ಚುನಾವಣೆ ಪೂರ್ವೋತ್ತರವೂ 20;20 ಕ್ರಿಕೆಟ್‌ ಪಂದ್ಯದಂತೆ ರೋಚಕತೆ ಪಡೆಯುತ್ತಿದೆ.

ಈ ಹಿಂದೆ ನಂದಿವನದ ರೂವಾರಿ ಬಸವರಾಜ ಡಿಗ್ಗಾವಿ ಅವರಿಗೆ ಬಿಜೆಪಿ ಟಿಕೆಟ್‌ ಸಿಗುತ್ತದೆ ಎನ್ನಲಾಗಿತ್ತು. ಆದರೆ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಿಲ್ಲ. ಹೀಗಾಗಿ ಅವರು ಜೆಡಿಎಸ್‌ ಪಕ್ಷ ಸೇರಿದರಲ್ಲದೇ, ಪಕ್ಷ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿತು. ಇನ್ನೇನು ಟಿಕೆಟ್‌ಗೆ ಯಾರೂ ಆಕಾಂಕ್ಷಿ ಇಲ್ಲ ಎನ್ನುವಷ್ಟರಲ್ಲೇ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ ಅವರ ಹೆಸರು ದಿಢೀರನೇ ತೂರಿ ಬಂತು. ಆದರೆ ಇದು ಪಕ್ಷದ ಹೈಕಮಾಂಡ್‌ದಲ್ಲಿ ಚರ್ಚೆ ಆಗಿಲ್ಲ ಎನ್ನಲಾಯಿತು. ಇನ್ನು ಕಾಂಗ್ರೆಸ್‌ನಿಂದ ಯಾರು ಅಭ್ಯರ್ಥಿ ಎಂಬುದು ಅಂತಿಮಗೊಂಡಿಲ್ಲ. ಕಳೆದ ಮೂರು ಅವಧಿಯುದ್ದಕ್ಕೂ ಕಾಂಗ್ರೆಸ್‌ ಹೊಸ ಮುಖವನ್ನೇ ಕಣಕ್ಕಿಳಿಸಿದೆ. ಈ ಸಲವೂ ಹೊಸ ಮುಖದ ಹೆಸರು ಕೇಳಿ ಬರುತ್ತಿದೆ. ಪ್ರಮುಖವಾಗಿ ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನೀಲಕಂಠರಾವ್‌ ಮೂಲಗೆ, ಕಲಬುರಗಿ ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿನಾಥ ಪಾಟೀಲ್‌ ಸೊಂತ, ಮಹಾಪೌರ ಶರಣಕುಮಾರ ಮೋದಿ, ಜಿಪಂ ಸದಸ್ಯರಾದ ದಿಲೀಪ ಪಾಟೀಲ, ಸಂತೋಷ ಪಾಟೀಲ ದಣ್ಣೂರ, ಸಂತೋಷ ಪಾಟೀಲ ದುಧನಿ ಹೀಗೆ ಹಲವರ ಹೆಸರು ಕೇಳಿ ಬರುತ್ತಿದೆ.

ಕೊನೆ ಘಳಿಗೆಯಲ್ಲಿ ಲಾಟರಿ ಎನ್ನುವಂತೆ ಒಂದು ಹೆಸರು ಅಂತಿಮಗೊಳ್ಳುತ್ತದೆ. ಹೀಗೆ ಒಂದಿಲ್ಲ ಒಂದು ನಿಟ್ಟಿನಲ್ಲಿ ಕಾರ್ಯಚಟುವಟಿಕೆಗಳನ್ನು ನಡೆಯುತ್ತಿರುವುದನ್ನು ಅವಲೋಕಿಸಿದರೆ ಕಣ ಎಷ್ಟರ ಮಟ್ಟಿಗೆ ಕಾವೇರುತ್ತಿದೆ ಎಂಬುದು ನಿರೂಪಿಸುತ್ತದೆ.

ದಿ| ಶಾಸಕ ಚಂದ್ರಶೇಖರ ಪಾಟೀಲ ರೇವೂರ ಹಿಡಿತ ಹೊಂದಿದ್ದ ಕ್ಷೇತ್ರವಿದು. 2008ರಲ್ಲಿ ಅತ್ಯಧಿಕ ಮತಗಳಿಂದ ಚುನಾಯಿತರಾಗಿದ್ದ ಅವರು, ನಿಧನರಾದ ನಂತರ 2010ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅವರ ಪುತ್ರ ಅಥವಾ ಪತ್ನಿಗೆ ಟಿಕೆಟ್‌ ನೀಡಲಿಲ್ಲ. ಕಡೆಗೆ ಕೊನೆ ಘಳಿಗೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅರುಣಾ ಪಾಟೀಲ ಅವರನ್ನು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಗೆಲ್ಲಿಸಿದಂತಹ ಕ್ಷೇತ್ರವಿದು. ಒಂದು ಕ್ಷೇತ್ರದಲ್ಲಿ ತಂದೆ ತದ ನಂತರ ತಾಯಿ ಹಾಗೂ ಮಗ ಹೀಗೆ ನಿರಂತರವಾಗಿ ಒಂದೂ ಸೋಲು ಅರಿಯದ ಕ್ಷೇತ್ರ ರಾಜ್ಯದಲ್ಲಿ ಯಾವುದಾದರೂ ಇದ್ದರೆ ಅದು ಕಲಬುರಗಿ ದಕ್ಷಿಣ ಕ್ಷೇತ್ರ. ತಂದೆ-ತಾಯಿ ನಂತರ ಮಗ ಶಾಸಕರಾಗಿದ್ದಾರೆ. ಆದರೆ ಒಂದೆರಡು ಸೋಲು ಅನುಭವಿಸಿ ತದನಂತರ ಶಾಸಕರಾದ ಉದಾಹರಣೆಗಳಿವೆ.

Advertisement

ರಾಜ್ಯದಲ್ಲಿ ವೀರಶೈವ-ಲಿಂಗಾಯತ ಜಿದ್ದಾಜಿದ್ದಿ ನಡೆದರೆ ಈ ಕ್ಷೇತ್ರದಲ್ಲಿ ಮಾತ್ರ ಲಿಂಗಾಯತ ಒಳಪಂಗಡಗಳದ್ದೇ ಸದ್ದು. ಲಿಂಗಾಯತರೇ ಪ್ರಬಲರಾದ್ರೂ ಒಳಜಾತಿಯ ರಾಜಕೀಯ ಬಹಳಷ್ಟಿದೆ. ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 259452
ಮತದಾರರಿದ್ದಾರೆ. ಇದರಲ್ಲಿ 129581 ಪುರುಷರು ಹಾಗೂ 129806 ಮಹಿಳೆಯರು ಸೇರಿದ್ದಾರೆ. ಲಿಂಗಾಯತರು ಸುಮಾರು 75 ಸಾವಿರ, ಎಸ್ಸಿ, ಎಸ್ಟಿ ಸುಮಾರು 50 ಸಾವಿರ, ಬ್ರಾಹ್ಮಣರು ಸುಮಾರು 25 ಸಾವಿರ, ಅಲ್ಪಸಂಖ್ಯಾತರು ಸುಮಾರು 25 ಸಾವಿರ, ಹಿಂದುಳಿದ ವರ್ಗ ಸುಮಾರು 40 ಸಾವಿರ ಹಾಗೂ ಇತರೆ ಸುಮಾರು 07 ಸಾವಿರ ಎಂದು ಅಂದಾಜಿಸಲಾಗಿದೆ. 

ಕ್ಷೇತ್ರದ ಬೆಸ್ಟ್‌ ಏನು?
ಕಲಬುರಗಿ ದಕ್ಷಿಣ ಮತಕ್ಷೇತ್ರದ 28 ಹಳ್ಳಿಗಳ ಪೈಕಿ 24 ಹಳ್ಳಿಗಳು ಸುವರ್ಣ ಗ್ರಾಮೋದಯ ಯೋಜನೆ ಅಡಿ ವಿವಿಧ ಕಾಮಗಾರಿಗಳಾಗಿರುವುದು, ಮಹಾನಗರದಲ್ಲಿ ಅಮೃತ ಯೋಜನೆ ಅಡಿ 85 ಕೋ.ರೂ. ವೆಚ್ಚದ ಒಳಚರಂಡಿ ನಿರ್ಮಾಣ ಕಾರ್ಯ ನಡೆದಿರುವುದು, ಸಾವಳಗಿಯಲ್ಲಿ ಮುಸ್ಲಿಂ ವಸತಿ ಶಾಲೆ, ಭೀಮಳ್ಳಿಯಲ್ಲಿ ಆದರ್ಶ ಮಹಾವಿದ್ಯಾಲಯ, ಸರ್ಕಾರಿ ವೈದ್ಯಕೀಯ ಕಾಲೇಜು, 1000 ಹಾಸಿಗೆಯುಳ್ಳ ಆಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿರುವುದು ಹಾಗೂ ಕೊಳಚೆ ನಿವಾಸಿಗಳಿಗೆ ಅತ್ಯುತ್ತಮ ಮನೆ ನಿರ್ಮಿಸಿರುವುದು ಬೆಸ್ಟ್‌ ಕೆಲಸವೆನ್ನಬಹುದಾಗಿ¨

ಕ್ಷೇತ್ರದ ದೊಡ್ಡ  ಸಮಸ್ಯೆ?
ಈ ಕಡೆ ರಸ್ತೆ ಮಾಡಿದರೆ ಮತ್ತೂಂದೆಡೆ ರಸ್ತೆ ಒಡೆಯುವುದು ಕ್ಷೇತ್ರದಲ್ಲಿನ ಒಂದು ದೊಡ್ಡ ಸಮಸ್ಯೆ ಎನ್ನಬಹುದಾಗಿದೆ. ಕಲಬುರಗಿ ಮಹಾನಗರಕ್ಕೆ ಸ್ಮಾರ್ಟ್‌ ಸಿಟಿ ಆಗದಿರುವುದು ಸಹ ಇನ್ನೊಂದು ಸಮಸ್ಯೆ ಎನ್ನಬಹುದಾಗಿದೆ. ಕ್ಷೇತ್ರದ ಕೆಲವು ವಾರ್ಡ್‌ಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗದಿರುವುದು ಸಹ ದೊಡ್ಡ ಸಮಸ್ಯೆವೆಂದೇ ಹೇಳಬಹುದು.

ಕ್ಷೇತ್ರ ಮಹಿಮೆ
ಐತಿಹಾಸಿಕ, ಮಹಾದಾಸೋಹಿ ಶರಣ ಬಸವೇಶ್ವರ ದೇವಾಲಯ ಪ್ರಮುಖವಾಗಿ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಬರುತ್ತದೆ. ಕೋಟನೂರ ಡಿ ಸಿದ್ಧರಾಮೇಶ್ವರ ದೇವಾಲಯ, ಅದೇ ರೀತಿ ಹುನ್ಸಿಹಡಗಿಲ್‌ ಪ್ರಭುಲಿಂಗ ದೇವಾಲಯ, ಕಡಣಿ ಶಂಕರಲಿಂಗೇಶ್ವರ, ಸಾವಳಗಿ
ಶಿವಲಿಂಗೇಶ್ವರ, ಪಟ್ಟಣದ ಮಹಾಲಕ್ಷ್ಮೀ, ರಾಮತೀರ್ಥ ಹೀಗೆ ಅನೇಕ ಧಾರ್ಮಿಕ ಕ್ಷೇತ್ರಗಳು ಇಲ್ಲಿವೆ. 

ಶಾಸಕರು ಏನಂತಾರೆ? 
ಕ್ಷೇತ್ರದ 24 ಹಳ್ಳಿಗಳನ್ನು ಸುವರ್ಣ ಗ್ರಾಮೋದಯ ಯೋಜನೆ ಅಡಿ ಅಭಿವೃದ್ಧಿ ಪಡಿಸಲಾಗಿದೆ. ಅದೇ ರೀತಿ ಮಹಾನಗರದಲ್ಲಿ ಅಮೃತ ಯೋಜನೆ ಅಡಿ 85 ಕೋ.ರೂ ವೆಚ್ಚದಲ್ಲಿ ಒಳಚರಂಡಿ ನಿರ್ಮಾಣ ಕಾರ್ಯವಲ್ಲದೇ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪನೆಯಾಗಿರುವುದು ಸೇರಿದಂತೆ ಇತರ ಹತ್ತಾರು ಕಾರ್ಯಗಳನ್ನು ಕ್ಷೇತ್ರದಲ್ಲಿ ಕೈಗೊಳ್ಳಲಾಗಿದೆ. ಈಗೇನಿದ್ದರೂ ಕಲಬುರಗಿ ಮಹಾನಗರ ಸ್ಮಾರ್ಟ್‌ ಸಿಟಿಯಾಗಬೇಕಿದೆ.
ದತ್ತಾತ್ರೇಯ ಪಾಟೀಲ್‌ ರೇವೂರ, ಶಾಸಕರು, ಕಲಬುರಗಿ ದಕ್ಷಿಣ ಮತಕ್ಷೇತ್ರ

ಹಳೆಯದಾದ ಬ್ರಹ್ಮಪುರ ಬಡಾವಣೆಯಲ್ಲಿ ಹಲವು ದಿನಗಳಿಂದ ಆಗದೇ ಇದ್ದ ರಸ್ತೆಗಳ ಅದರಲ್ಲೂ ಸಿಸಿ ರಸ್ತೆಗಳಾಗಿವೆ. ಇದಲ್ಲದೇ ಒಳಚರಂಡಿ ಕಾರ್ಯ ವೈಜ್ಞಾನಿಕವಾಗಿ ಕೈಗೊಳ್ಳಲಾಗಿದೆ. ಆದರೆ ಕುಡಿಯುವ ನೀರಿನ ಸೌಕರ್ಯ ಇನ್ನಷ್ಟು ಸುಧಾರಣೆಯಾಗಬೇಕಿದೆ. ಶಾಸಕರು ತಕ್ಕ ಮಟ್ಟಿಗೆ ಕೆಲಸ ಮಾಡಿದ್ದಾದರೂ ಇನ್ನು ಕೆಲವು ಕೆಲಸಗಳಾಗಬೇಕಿದೆ.
ಶಿವರಾಜ ಧಂಗಾಪುರ, ಸುಭಾಷ ಚೌಕ್‌ ನಿವಾಸಿ

ಲಾಲಗೇರಿ ಕ್ರಾಸ್‌ದಿಂದ ನ್ಯೂ ರಾಘವೇಂದ್ರ ಕಾಲೋನಿ ಹೋಗುವ ರಸ್ತೆಗಳು ಸೇರಿದಂತೆ ಇತರೆ ರಸ್ತೆಗಳು ಅಗಲೀಕರಣಗೊಂಡು ಸುಧಾರಣೆಯಾಗಿರುವುದು ಸಂತಸ ತಂದಿದೆ. ಇನ್ನೂ ಕೆಲವು ಕಡೆ ಅಗಲೀಕರಣ ಅರ್ಧಕ್ಕೆ ನಿಂತಿದ್ದು, ಅದು ಪೂರ್ಣಗೊಂಡರೆ ಒಂದು ಉತ್ತಮ ಕಾರ್ಯವಾಗುತ್ತದೆ. 
ಡಾ| ದೇವಾನಂದ ಬಿರಾದಾರ, ನ್ಯೂ ರಾಘವೇಂದ್ರ ಕಾಲೋನಿ

ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕಣ್ಣಿ ತರಕಾರಿ ಮಾರುಕಟ್ಟೆಗೆ ಶಾಶ್ವತ ಆಶ್ರಯ ಕಲ್ಪಿಸುವ ಕಾರ್ಯ ಮಾತ್ರ ಆಗುತ್ತಿಲ್ಲ. ಇದನ್ನು ಶಾಸಕರು ಸೇರಿದಂತೆ ಇತರೆಲ್ಲರೂ ಬಗೆಹರಿಸಬೇಕಿದೆ. ಈ ಕಾರ್ಯವಾದಲ್ಲಿ ಗ್ರಾಮೀಣ ಭಾಗದಿಂದ ಬರುವ ರೈತರಿಗೆ ಸಹಾಯ ಕಲ್ಪಿಸಿದಂತಾಗುತ್ತದೆ.
ಶರಣು ಗಬ್ಬೂರ, ಕಣ್ಣಿಗ್ರಾಮ

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next