Advertisement

ಬೇಕಾಬಿಟ್ಟಿ ಕುಡಿವ ನೀರು ಪೂರೈಕೆ: ಪಾಲಿಕೆಯಲ್ಲಿ ಕೋಲಾಹಲ

11:28 AM Jul 08, 2018 | Team Udayavani |

ಕಲಬುರಗಿ: ಸಮರ್ಪಕ ಕುಡಿಯುವ ನೀರಿದ್ದರೂ ಮಹಾನಗರಕ್ಕೆ ಬೇಕಾಬಿಟ್ಟಿ ನೀರು ಪೂರೈಕೆ ಮಾಡುತ್ತಿರುವ ಕುರಿತು ವರದಿ ನೀಡುವಂತೆ ಮಹಾಪೌರ ಶರಣಕುಮಾರ ಮೋದಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಶನಿವಾರ ಪಾಲಿಕೆಯ ಇಂದಿರಾ ಸ್ಮಾರಕ ಭವನದಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀರು ಪೂರೈಕೆಯ ಭೀಮಾ ಹಾಗೂ ಬೆಣ್ಣೆತೋರಾ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ಜಲಮಂಡಳಿ ಅಧಿಕಾರಿಗಳ ಕರ್ತವ್ಯ ಲೋಪದಿಂದ ಮಹಾನಗರದ ಜನತೆ ಕುಡಿಯುವ ನೀರಿನ ತೊಂದರೆ ಅನುಭವಿಸುವಂತಾಗಿದೆ.

ಅಲ್ಲದೇ ಕಲುಷಿತ ನೀರು, ಕುಡಿಯಲು ಯೋಗ್ಯವಲ್ಲದ ನೀರು ಪೂರೈಕೆ ಮಾಡಿರುವ ಕುರಿತಾಗಿಯೂ ವರದಿ ನೀಡುವಂತೆ ನಿರ್ದೇಶನ ನೀಡಿದರು.

ವರದಿ ನೀಡುವಲ್ಲಿ ನಿರ್ಲಕ್ಷ್ಯ ತೋರಿದರೆ ಸೂಕ್ತ ಕ್ರಮಕ್ಕೆ ಮೇಲಾಧಿಕಾರಿಗೆ ವರದಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಮಹಾಪೌರರು, ಇನ್ಮುಂದೆ ಹೀಗೆ ಕರ್ತವ್ಯ ಲೋಪ ಎಸಗದಿರಿ ಎಂದು ತಾಕೀತು ಮಾಡಿದರು.

ಮಾಜಿ ಮಹಾಪೌರ ಸೈಯದ್‌ ಅಹ್ಮದ ಮಾತನಾಡಿ, ಕಲಬುರಗಿ ಮಹಾನಗರದ ಇತಿಹಾಸದಲ್ಲಿ 12 ಹಾಗೂ 15 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗಿಲ್ಲ. ಬರಗಾಲದ ಸಮಯದಲ್ಲೂ ಹೀಗೆ ಆಗಿರಲಿಲ್ಲ. ಆದರೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳ ಬೇಜವಾಬ್ದಾರಿ ಕಾರ್ಯದಿಂದ ಹೀಗೆ ಆಗಿದೆ. ಕುಡಿಯಲು ಯೋಗ್ಯವಲ್ಲದ ನೀರು ಪೂರೈಕೆ ಮಾಡಿದ್ದರೂ ಯೋಗ್ಯ ನೀರು ಪೂರೈಕೆ ಮಾಡಲಾಗಿದೆ ಎಂದು ವರದಿ ನೀಡಿರುವುದು ಸಹ ಅಕ್ಷಮ್ಯ ಅಪರಾಧವಾಗಿದೆ ಎಂದು ವಾಗ್ಧಾಳಿ ನಡೆಸಿದರು.

Advertisement

ಜಲಮಂಡಳಿ ಕಾರ್ಯಪಾಲಕ ಅಭಿಯಂತರ ಸುಬ್ರಹ್ಮಣ್ಯಂ ಮಾತನಾಡಿ, ನೀರು ಪೂರೈಕೆಯಲ್ಲಿ ಕೆಲವು ತೊಂದರೆಗಳಾಗಿವೆ ಎಂದು ಸಾವರಿಸಿ ಹೇಳಲು ಬಂದರಾದರೂ ಸದಸ್ಯರು ಮುಗಿ ಬಿದ್ದರು. ಆಗ ಮಹಾಪೌರರು ಕುಡಿಯುವ ನೀರು ಪೂರೈಕೆ ಸಂಬಂಧವಾಗಿ ಜಲಮಂಡಳಿ ಅಧಿಕಾರಿಗಳ ವಿಶೇಷ ಸಭೆಯನ್ನು ಶೀಘ್ರದಲ್ಲಿಯೇ ಕರೆಯಲಾಗುವುದು ಎಂದು ಪ್ರಕಟಿಸಿದರು.

ಆರೋಗ್ಯಾಧಿಕಾರಿ ಯಾರು?: ಪಾಲಿಕೆಯಲ್ಲಿ ಆರೋಗ್ಯಾಧಿಕಾರಿ ಯಾರು ಎನ್ನುವಂತಾಗಿದೆ. ತಾವಂತು ಕಳೆದೊಂದು ವರ್ಷದಿಂದ ನೋಡಿಯೇ ಇಲ್ಲ ಎಂದು ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಫಯಾಜ್‌ ಹುಸೇನ್‌ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಪಾಲಿಕೆಗೆ ಬಂದ ಹೊಸ ಅಧಿಕಾರಿಗಳನ್ನು ಪರಿಚಯಿಸಿಕೊಳ್ಳಲಾಯಿತು.

ಎಸ್‌.ಎಫ್‌.ಸಿ ಅನುದಾನಕ್ಕೆ ಒಪ್ಪಿಗೆ: ಪ್ರಸಕ್ತ 2018-19ನೇ ಸಾಲಿನ 19.73 ಕೋಟಿ ರೂ. ವೆಚ್ಚದ ಎಸ್‌.ಎಫ್‌.ಸಿ ಅನುದಾನದ ಕ್ರಿಯಾ ಯೋಜನೆಗೆ ಒಪ್ಪಿಗೆ ನೀಡಲಾಯಿತು. ಅದೇ ರೀತಿ 14ನೇ ಹಣಕಾಸು ಯೋಜನೆ ಅಡಿ 21 ಕೋಟಿ ರೂ. ವೆಚ್ಚದ ಅನುದಾನಕ್ಕೂ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಸ್ವಾಗತ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಶಾಸಕ ಬಿ.ಜಿ. ಪಾಟೀಲ ಅವರು ಶನಿವಾರದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರಿಂದ ಮಹಾಪೌರ ಶರಣಕುಮಾರ ಮೋದಿ ಹೂಗುಚ್ಚ ನೀಡಿ ಸಭೆಗೆ ಸ್ವಾಗತಿಸಿರುವುದು ವಿಶೇಷವಾಗಿತ್ತು. ಪಾಲಿಕೆ ಆಯುಕ್ತ ರಘುನಂದನ ಮೂರ್ತಿ ಉಪಮಹಾಪೌರ ಪುತಳಿಬೇಗಂ ಸೇರಿದಂತೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.

ಬಜೆಟ್‌ಗೆ ಅಸ್ತು ಪಾಲಿಕೆ 2018-19ನೇ ಸಾಲಿನ ಆಯ-ವ್ಯಯದ ಮುಂಗಡ ಪತ್ರವನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು. 96 ಕೋಟಿ 90 ಲಕ್ಷ ರೂ. ಮೊತ್ತದ ಉಳಿತಾಯ ಮುಂಗಡ ಪತ್ರ ಮಂಡಿಸಲಾಯಿತು. ಅದೇ ರೀತಿ 181 ಕೋಟಿ ರೂ.ಆದಾಯ ನಿರೀಕ್ಷೆ ಹಾಗೂ 180
ಕೋಟಿ ರೂ. ವೆಚ್ಚದ ಬಜೆಟ್‌ ಮಂಡಿಸಿ ಒಪ್ಪಿಗೆ ಪಡೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next