ಬಳ್ಳಾರಿ: ವಿಮ್ಸ್ ಆಸ್ಪತ್ರೆಯಲ್ಲಿ ಮಹಿಳಾ ನರ್ಸ್‌ಗೆ ಕಿರುಕುಳ ನೀಡುತ್ತಿದ್ದ ನಸಿಂರ್ಗ್ ಅಧೀಕ್ಷಕ ಸಂಪತ್‌ಕುಮಾರ್ ಅವರನ್ನು ಅಮಾನತುಗೊಳಿಸಬೇಕು. ನೊಂದ ಮಹಿಳೆಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ಸೇನೆಯ ಕಾರ್ಯಕರ್ತರು ವಿಮ್ಸ್ ನಿರ್ದೇಶಕರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿ ನರ್ಸಿಂಗ್ ಅಧೀಕ್ಷಕರಾಗಿರುವ ಸಂಪತ್‌ಕುಮಾರ್ ಅವರು, ಹಲವು ವರ್ಷಗಳಿಂದ ಸ್ಟಾಪ್ ನರ್ಸ್‌ಗಳ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ತಮ್ಮ ಮಾತು ಕೇಳುವ ನರ್ಸ್‌ಗಳಿಗೆ ಅವರು ಬಯಸುವ ವಾರ್ಡ್‌ಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸುತ್ತಾರೆ. ಹೇಳಿದಂತೆ ಕೇಳದೆ ಹೋದರೆ ಹಾಜರಾತಿ ಹಾಕುವುದಿಲ್ಲ. ರಜೆಯನ್ನೂ ನೀಡುವುದಿಲ್ಲ. ಅಧೀಕ್ಷಕರು ಸೂಚಿಸಿದ ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸಬೇಕು. ವಾರ್ಡ್‌ನ್ನು ಬದಲಾಯಿಸುವಂತೆ ಕೇಳಿಕೊಂಡರೂ ಬದಲಾಯಿಸದೇ, ಅದೇ ವಾರ್ಡ್‌ನಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನರ್ಸಿಂಗ್ ಅಧೀಕ್ಷಕ ಸಂಪತ್‌ಕುಮಾರ್ ಅವರು, ಹಾಜರಾತಿ ನೀಡದ ಹಿನ್ನೆಲೆಯಲ್ಲಿ ಅದನ್ನು ಪರಿಶೀಲಿಸಲು ಆಗಮಿಸಿದ್ದ ಸ್ಟಾಫ್ ನರ್ಸ್ ರತ್ನಮ್ಮ ಅವರಿಗೆ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತ ರತ್ನಮ್ಮ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಂಪತ್‌ಕುಮಾರ್ ಅವರು ವಿಮ್ಸ್‌ನಲ್ಲಿ ಇನ್ನು ಸಾಕಷ್ಟು ಸ್ಟಾಫ್ ನರ್ಸ್‌ಗಳಿಗೆ ಈ ರೀತಿ ಕಿರುಕುಳ ನೀಡುತ್ತಿದ್ದಾರೆ. ಈ ವರೆಗೂ ಯಾವುದೇ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಅಧಿಕಾರಿಗಳು ಸಹ ತಮ್ಮ ಪ್ರಭಾವ ಬಳಸಿ ಕೆಲವು ಪ್ರಕರಣಗಳನ್ನು ಮುಚ್ಚಿ ಹಾಕಿದ್ದಾರೆ. ಆದ್ದರಿಂದ ವಿಮ್ಸ್‌ನಲ್ಲಿ ಇಂಥ ಪ್ರಕರಣಗಳು ಮರುಕಳಿಸದಂತೆ ನರ್ಸಿಂಗ್ ಅಧೀಕ್ಷಕ ಸಂಪತ್ ಕುಮಾರ್ ಅವರನ್ನು ಕರ್ತವ್ಯದಿಂದ ಕೂಡಲೇ ವಜಾಗೊಳಿಸಿ ಸೂಕ್ತ ತನಿಖೆಗೆ ಆದೇಶ ನೀಡಬೇಕು. ಲೈಂಗಿಕ ಕಿರುಕುಳದಿಂದ ನೊಂದ ಎಲ್ಲ ಮಹಿಳೆಯರಿಗೆ ಸೂಕ್ತ ನ್ಯಾಯ ಒದಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸೇನೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾರರು ಎಚ್ಚರಿಕೆ ನೀಡಿದರು. ಬಳಿಕ ವಿಮ್ಸ್ ನಿರ್ದೇಶಕರು ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಪ್ರಸಾದ್, ಯುವ ಅಧ್ಯಕ್ಷ ಶ್ರೀನಿವಾಸ್, ತಾಲೂಕು ಅಧ್ಯಕ್ಷ ಉಮರ್ ಫಾರೂಕ್, ಗಂಗಣ್ಣ, ಜಾನಿ, ದುರುಗೇಶ್, ಜ್ಞಾನಿ, ಪೀರಾ, ಮಹೇಶ್, ಎರ್ರಿಸ್ವಾಮಿ, ಶಿವು, ಕೀರ್ತಿ, ರಮೇಶ್, ಪ್ರವೀಣ್, ಚಿರಂಜೀವಿ, ಹೊನ್ನೂರಸ್ವಾಮಿ, ಸನ್ನಿ ಸೇರಿದಂತೆ ಇತರೆ ಕಾರ್ಯಕರ್ತರು ಪಾಲ್ಗೊಂಡಿದ್ದರು.