Advertisement

ಸೋನಿಯಾ ಗಾಂಧಿ,ಖರ್ಗೆ ಬೂತ್ ಮಟ್ಟಕ್ಕೆ ಬರುತ್ತಾರಾ?: ನಳಿನ್ ಕುಮಾರ್ ಕಟೀಲ್

07:49 PM Jan 08, 2023 | Team Udayavani |

ಹುಣಸೂರು: ಬಿಜೆಪಿಯ ಬೂತ್ ಮುಖಂಡರು ಮತ್ತು ಪೇಜ್ ಪ್ರಮುಖರು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳ ಮುಖಾಂತರ ಮತದಾರರನ್ನು ಪಕ್ಷದತ್ತ ಸೆಳೆಯಬೇಕು. ಪ್ರತಿಯೊಬ್ಬ ಮತದಾರರನ್ನು ಸಹ ನಮ್ಮ ಪಕ್ಷದ ಕಾರ್ಯಕರ್ತರನ್ನಾಗಿ ಮಾಡಬೇಕೆಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಕರೆ ನೀಡಿದರು.

Advertisement

ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಬೋಳನಹಳ್ಳಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಯೋಗಾನಂದಕುಮಾರ್ ಹಾಗೂ ಗ್ರಾಮದ ಬೂತ್ ಅಧ್ಯಕ್ಷ ಕುಮಾರ್‌ರವರ ಮನೆಗಳ ಮೇಲೆ ಪಕ್ಷದ ಧ್ವಜವನ್ನು ಕಟ್ಟುವ ಮೂಲಕ ಬೂತ್ ವಿಜಯ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬಿಜೆಪಿ ಪಕ್ಷ ವಿಭಿನ್ನ ಮತ್ತು ವಿಶಿಷ್ಟವಾಗಿದ್ದು ಕಾರ್ಯಕರ್ತರು ಮತ್ತು ಮತದಾರರ ಪಕ್ಷವಾಗಿದೆ ಅದಕ್ಕೆ ಉದಾಹರಣೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು, ಮುಖ್ಯಮಂತ್ರಿಗಳು, ನಾನು ಹಾಗೂ ನಮ್ಮ ಪಕ್ಷದ ಎಲ್ಲಾ ಹಿರಿಯರು ಸಹ ಸಾಮಾನ್ಯ ಬೂತ್ ಮುಖಂಡನ ಮನೆಗೆ ತೆರಳಿ ಧ್ವಜವನ್ನು ಕಟ್ಟುವ ಮೂಲಕ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡುತ್ತಿದ್ದೇವೆ. ಇದೀಗ ಪಕ್ಷ ಸರ್ವ ವ್ಯಾಪ್ತಿಯಾಗಿ ವಿಸ್ತರಿಸಿದೆ.ಇದನ್ನು ಕಾಂಗ್ರೆಸ್ ಪಕ್ಷದಲ್ಲಿ ನೋಡಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಒಬ್ಬ ಸಾಮಾನ್ಯ ಬೂತ್ ಮುಖಂಡನ ಮನೆಗೆ ಬರುತ್ತಾರೆಯೇ ಅದನ್ನು ನೀವು ನಿರೀಕ್ಷಿಸಲು ಸಾಧ್ಯವಿಲ್ಲ. ಬಡವರಿಗೆ ಎಟಿಎಂ ಕೊಡಲು ಮೋದಿ ಬರಬೇಕಾಯಿತು. ರೈತರಿಗೆ, ಸಾಮಾನ್ಯರಿಗೆ, ದೀನ ದಲಿತರಿಗೆ ಅನುದಾನಗಳನ್ನು ನೀಡಲು, ಉಜ್ವಲ್ ಯೋಜನೆ ನೀಡಲು, ಉಚಿತ ವಿದ್ಯುತ್, ನೀರು, ಮನೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಬಿಜೆಪಿ ಬರಬೇಕಾಯಿತು ಎಂದರು.

ಕಾಂಗ್ರೆಸ್ 60 ವರ್ಷದಲ್ಲಿ ಯಾವ ಅಭಿವೃದ್ಧಿಯನ್ನು ಮಾಡಿಲ್ಲ.ಕೇವಲ ಭ್ರಷ್ಟಾಚಾರದಲ್ಲಿ ತೊಡಗಿತ್ತು, ಬಿಜೆಪಿಯು ಸರ್ವಾಂಗೀಣ ಅಭಿವೃದ್ಧಿಗೆ ಕಟಿ ಬದ್ದವಾಗಿದೆ ಎಂದರು.ಕೊರೊನ ಸಮಯದಲ್ಲಿ ಉಚಿತ ಲಸಿಕೆ ನೀಡಿದ್ದಾರೆ. ಪ್ರತಿ ಬಡವರಿಗೂ ಮನೆ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಿದ್ದಾರೆ.ನಮ್ಮದು ಅಭಿವೃದ್ಧಿಯ ರಾಜಕಾರಣವಾದರೆ ಕಾಂಗ್ರೆಸ್‌ನವರದ್ದು ಲೂಟಿ ರಾಜಕಾರಣವೆಂದರು.

ಭ್ರಷ್ಟಾಚಾರದ ರಾಜಕಾರಣ
ವಿರೋಧ ಪಕ್ಷಗಳು ನಮ್ಮ ಮೇಲೆ ಭ್ರಷ್ಟಾಚಾರದ ಆರೋಪವನ್ನು ಮಾಡುತ್ತಿವೆ ಹೊರತು ಮತದಾರರು ಮತ್ತು ಜನರಲ್ಲ. ನಮ್ಮದು ಅಭಿವೃದ್ಧಿ ಆಡಳಿತ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಉತ್ತಮ ಸಂಘಟನೆ ಮಾಡಿ ಪ್ರಧಾನಮಂತ್ರಿಯವರ ಆಶಯದಂತೆ ಮನ್ ಕಿ ಬಾತ್ ಕಾರ್ಯಕ್ರಮಗಳನ್ನು ಎಲ್ಲಾ ಕಡೆಯೂ ಪ್ರಸಾರ ಮಾಡಿ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಡಿರುವ ಪ್ರಮುಖ ಕೆಲಸ ಕಾರ್ಯಗಳನ್ನು ಪ್ರತಿ ಮನೆಮನೆಗೂ ತೆರಳಿ ಪೇಜ್ ಪ್ರಮುಖರು, ಬೂತ್ ಮುಖಂಡರುಗಳು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳ ಮುಖಾಂತರ ಮತದಾರರನ್ನು ನಮ್ಮ ಪಕ್ಷದ ಕಡೆ ಬರುವಂತೆ ಮಾಡಬೇಕೆಂದರು.

ಈ ವೇಳೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಜಿಲ್ಲಾಧ್ಯಕ್ಷೆ ಮಂಗಳಸೋಮಶೇಖರ್, ಪ್ರಧಾನಕಾರ್ಯದರ್ಶಿ ಯೋಗಾನಂದಕುಮಾರ್, ಜಿಲ್ಲಾ ಉಸ್ತುವಾರಿ ಪರಿಕ್ಷಿತ್‌ರಾಜ್‌ಅರಸ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ರೈತ ಮೋರ್ಚಾ ಅಧ್ಯಕ್ಷ ರಮೇಶ್‌ಕುಮಾರ್, ಜಿಲ್ಲಾ ಉಪಾಧ್ಯಕ್ಷ ಸೂರ್ಯಕುಮಾರ್, ಜಿಲ್ಲಾ ವಕ್ತಾರ ಗೋಪಾಲ್, ತಾಲೂಕು ಅಧ್ಯಕ್ಷ ನಾಗಣ್ಣಗೌಡ, ಪ್ರಧಾನ ಕಾರ್ಯದರ್ಶಿಕಾಂತರಾಜು, ನಗರ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಹನಗೋಡುಮಂಜುನಾಥ್, ನಾಗರಾಜ್‌ಮಲ್ಲಾಡಿ, ಅಣ್ಣಯ್ಯನಾಯಕ, ಅರುಣ್‌ಔವಾಣ್ಹ್, ಶ್ರೀನಿವಾಸ್,ರಮೇಶ್, ಅಕ್ರಮ ಸಕ್ರಮ ಸಮಿತಿ ಸದಸ್ಯೆ ವೆಂಕಟಮ್ಮ, ಬೂತ್ ಅಧ್ಯಕ್ಷರಾದ ಕುಮಾರ್,ಲೋಕೇಶ್, ಮಂಜುನಾಥ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next