ವಾಷಿಂಗ್ಟನ್: ಭಾರತದಲ್ಲಿ ಕೋವಿಡ್ ಎರಡನೇ ಅಲೆ ಕ್ಷಿಪ್ರವಾಗಿ ಹೆಚ್ಚಳವಾಗುತ್ತಿದ್ದು, ಕೋವಿಡ್ ಸೋಂಕು ನಿಗ್ರಹದ ಕೋವಿಶೀಲ್ಡ್ ಲಸಿಕೆಯ ಉತ್ಪಾದನೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಅಮೆರಿಕ ಭಾರತಕ್ಕೆ ಅಗತ್ಯವಿರುವ ಕಚ್ಛಾ ವಸ್ತುಗಳು ತುರ್ತು ಪೂರೈಕೆ ಮಾಡಲು ಮುಂದಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಭಾರೀ ಸೋಲಿನ ಬೆನ್ನಲ್ಲೇ ಆರ್ ಸಿಬಿಗೆ ಅವಳಿ ಆಘಾತ: ಇಬ್ಬರು ಆಸೀಸ್ ಆಟಗಾರರು ತವರಿಗೆ ವಾಪಸ್
ಕೋವಿಡ್ 19 ಸೋಂಕನ್ನು ನಿಗ್ರಹಿಸುವ ನಿಟ್ಟಿನಲ್ಲಿ ಇದಕ್ಕಾಗಿ ಅಗತ್ಯವಿರುವ ವೆಂಟಿಲೇಟರ್ ಗಳು, ಜೀವರಕ್ಷಕ ಉಪಕರಣ, ಚಿಕಿತ್ಸೆ ಮತ್ತು ಪರೀಕ್ಷೆಗಳಿಗೆ ಅಗತ್ಯವಿರುವ ಕಚ್ಛಾ ವಸ್ತುಗಳನ್ನು ಭಾರತಕ್ಕೆ ಪೂರೈಕೆ ಮಾಡುವುದಾಗಿ ಅಮೆರಿಕ ತಿಳಿಸಿದೆ.
ಭಾರತದಲ್ಲಿ ಕೋವಿಡ್ 19 ಸೋಂಕು ಹೆಚ್ಚಳವಾಗುತ್ತಿರುವ ನಿಟ್ಟಿನಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಭಾನುವಾರ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ತುರ್ತು ಅಗತ್ಯವಿರುವ ವೆಂಟಿಲೇಟರ್ಸ್, ಪಿಪಿಇ ಸೂಟ್ಸ್, ಪರೀಕ್ಷಾ ಕಿಟ್ಸ್ ಗಳನ್ನು ಭಾರತಕ್ಕೆ ಪೂರೈಕೆ ಮಾಡುವುದಾಗಿ ತಿಳಿಸಿದ್ದಾರೆ.
ಭಾರತಕ್ಕೆ ಅಗತ್ಯವಿರುವ ನೆರವನ್ನು ನೀಡಲು ಅಮೆರಿಕ ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಭಾನುವಾರ ಟ್ವೀಟ್ ಮೂಲಕ ತಿಳಿಸಿದ್ದರು. ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, ಆಕ್ಸಿಜನ್ ಕೊರತೆಯುಂಟಾಗಿದೆ. ಈ ನಿಟ್ಟಿನಲ್ಲಿ ತುರ್ತು ನೆಲೆಯಲ್ಲಿ ಆಕ್ಸಿಜನ್ ಸೇರಿದಂತೆ ಅಗತ್ಯವಿರುವ ಉಪಕರಣಗಳನ್ನು ಸರಬರಾಜು ಮಾಡಲು ಅಮೆರಿಕ ಬದ್ಧವಾಗಿದೆ ಎಂದು ತಿಳಿಸಿದೆ.