Advertisement

ವಿಲ್‌ ಪವರ್‌: ಆಸ್ತಿ ಹಂಚಿಕೆ ಸುತ್ತಮುತ್ತ…

02:51 PM Dec 04, 2017 | |

ಅಪ್ಪನಿಂದ ಬಂದ ಹಳ್ಳಿಯಲ್ಲಿರೋ ಒಂದಿಷ್ಟು ಜಮೀನು, ಹಳೆ ಮನೆ. ನೀವು ದುಡಿದು ಕಟ್ಟಿಸಿದ ಈಗಿನ ಮನೆ, ಟೆಂಪಲ್‌ ರೋಡಲ್ಲಿರೋ ಚಿಕ್ಕ ಮಳಿಗೆ. ರಿಟೈರ್‌ವೆುಂಟ್‌ ದುಡ್ಡಲ್ಲಿ ಕೊಂಡ ಹೊಸ ಬಡಾವಣೆಯ ಎರಡು ಸೈಟು, ಇದಲ್ಲದೆ ನಿಮ್ಮ ಮಾರುತಿ ಕಾರು, ಟಾಟಾ ಕಂಪನಿ ಷೇರು. ಬ್ಯಾಂಕ್‌ನಲ್ಲಿರೋ ಡಿಪಾಜಿಟ್‌, ಅಲ್ಲೇ ಲಾಕರಲ್ಲಿರೋ ಎರಡು ಲಕ್ಷ ಹಣ, ನಿಮ್ಮ ಪತ್ನಿ ಕೊಡಿಸಿದ್ದ ಚಿನ್ನದ ಬ್ರಾಸಲೆಟ್ಟು… ಇವೆಲ್ಲಾ ನಿಮ್ಮ ಆಸ್ತಿ-ಪಾಸ್ತಿ. 

Advertisement

ನಿಮಗೋ ವಯಸ್ಸಾಗ್ತಾ ಬಂತು, ಆಸ್ತಿ ವಿಚಾರದಲ್ಲಿ ಮುಂದೆ ತಗಾದೆಗಳಾಗಬಾರದು, ಎಲುನೂ ಒಟ್ಟಿಗೆ ಸೇರಿಸಿ ಆಸ್ತಿ ಹಂಚಬೇಕಲ್ಲ… ಅದಕ್ಕೆ ಏನು ಮಾಡುವುದು ಎಂಬು  ಚಿಂತೆ ಬಿಡಿ, ಉಯಿಲು ಅಥವಾ ವಿಲ್‌ ಮೂಲಕ ಆಸ್ತಿಪಾಸ್ತಿಯನ್ನು ಸುಲಭವಾಗಿ ಹಂಚಿಕೆ ಮಾಡಬಹುದು. 

ಏನಿದು ಉಯಿಲು? 
ವ್ಯಕ್ತಿಯೊಬ್ಬ ತನ್ನ ಮರಣಾನಂತರ ತನ್ನ ಆಸ್ತಿಪಾಸ್ತಿ ಯಾರಿಗೆ ಸೇರಬೇಕೆಂಬ ಬಗ್ಗೆ ಕಾನೂನುಬದ್ದವಾಗಿ ಮಾಡುವ ಘೋಷಣೆಯೇ ಉಯಿಲು. ಪ್ರಾಪ್ತ ವಯಸ್ಕ, ಸ್ವಸ್ಥಚಿತ್ತನಾದ ಯಾವುದೇ ವ್ಯಕ್ತಿ ವಿಲ್‌ ಬರೆಯಬಹುದು. ಮಾನಸಿಕ ಅಸ್ವಸ್ಥ ಕೆಲವೊಮ್ಮೆ ಸ್ವಾಸ್ಥ್ಯನಾಗುವುದಾದರೆ ಆ ಅವಧಿಯಲ್ಲಿ ಬರೆಯಬಹುದು. ಕಿವುಡ, ಕುರುಡ, ಮೂಗರೂ ಸಹ ವಿಲ್‌ ಮಾಡಬಹುದು. ಆದರೆ ಮತ್ತು ಬರಿಸುವ ಪದಾರ್ಥ ಸೇವಿಸುವವರು,  ಅಪ್ರಾಪ್ತ ವಯಸ್ಕರು, ಬುದ್ದಿಭ್ರಮಣೆಯಾದವರ ಪರ ಮತ್ತೂಬ್ಬರು ಉಯಿಲು ಬರೆಯುವಂತಿಲ್ಲ.

ಯಾವ ಆಸ್ತಿ ಬರೆಯಬಹುದು? ನಿಮ್ಮ ಜೀವಿತಾವಧಿಯಲ್ಲಿ ನೀವು ವಿಲೆವಾರಿ ಮಾಡುವ ಹಕ್ಕುಳ್ಳ ಎಲ್ಲಾ ಆಸ್ತಿಗಳ ಬಗ್ಗೆ ವಿಲ್‌ ಬರೆಯಬಹದು. ಹಿಂದೂ ಅವಿಭಕ್ತ ಕುಟುಂಬದ ಸದಸ್ಯನಾಗಿದ್ದರೆ ತನ್ನ ಸ್ವಯಾರ್ಜಿತ ಆಸ್ತಿಯ ಜೊತೆಗೆ ಕುಟುಂಬದ ಆಸ್ತಿ ವಿಭಾಗವಾದಲ್ಲಿ ತನ್ನ ಪಾಲಿಗೆ ಬರುವಷ್ಟು ಆಸ್ತಿಯನ್ನೂ ವಿಲ್‌ ಮಾಡಬಹುದು. ಉದಾ: ತಂದೆಯಿಂದ ಬಂದ 8 ಎಕರೆ, ಸ್ವಯಾರ್ಜಿತ 2 ಎಕರೆ ಜಮೀನು ಹೊಂದಿರುವ ವ್ಯಕ್ತಿಗೆ ಮೂವರು ಮಕ್ಕಳಿದ್ದರೆ, ಮೂರೂ ಮಕ್ಕಳಿಗೆ ತಲಾ 2ಎಕರೆ ಹಂಚಿಕೆ ಮಾಡಿ, ಅದರಲ್ಲಿನ ತನ್ನ ಪಾಲು 2 ಎಕರೆ ಹಾಗೂ ಸ್ವಯಾರ್ಜಿತ 2 ಎಕರೆ ಸೇರಿ 4 ಎಕರೆ ಜಮೀನನ್ನು ಯಾರಿಗಾದರೂ ನೀಡಬಹುದು. ಆದರೆ ಪತ್ನಿ ಸೇರಿದಂತೆ ಅವಲಂಬಿತರ ಜೀವನಾಂಶದ ಹಕ್ಕಿಗೆ ದಕ್ಕೆಯಾಗುವಂತಿಲ್ಲ. 

ಮುಸ್ಲಿಮರಲ್ಲಿ ಪಿತ್ರಾರ್ಜಿತ ಆಸ್ತಿ ಕಲ್ಪನೆಯಿಲ್ಲ. ತಂದೆಯೊಬ್ಬ ತನ್ನ ಜೀವಿತಾವಧಿಯಲ್ಲಿ ಪೂರ್ತಿ ಆಸ್ತಿಯನ್ನೂ ತನಗೆ ಬೇಕಾದವರಿಗೆ ಕೊಡಬಹುದು. ವಿಲ್‌ ಬರೆಯುವುದಾದರೆ ತನ್ನ ಉತ್ತರಕ್ರಿಯೆ ಮತ್ತು ಸಾಲಗಳಿಗೆ ಸಂದಾಯವಾಗಿ ಉಳಿದ ಸ್ವತ್ತಲ್ಲಿ 1/3 ರಷ್ಟು ಮಾತ್ರ ತನ್ನಿಚ್ಚೆಯಂತೆ ವಿಲೆವಾರಿ ಮಾಡಬಹುದು. ಈ ಮಿತಿ ಮೀರಿ ಮಾಡುವ ಉಯಿಲಿಗೆ ಉಯಿಲುಕರ್ತನ ಉತ್ತರಾಧಿಕಾರಿಗಳ ಸಮ್ಮತಿ ಅತ್ಯಗತ್ಯ.

Advertisement

ನೋಂದಣಿ ಕಡ್ಡಾಯವಲ್ಲ:
ಉಯಿಲು ನೋಂದಣಿ  ಮಾಡಿಸುವುದು ಕಡ್ಡಾಯವಲ್ಲ. ಆದರೆ ನೋಂದಾದ ಉಯಿಲಿನ ವಿಶ್ವಾಸರ್ಹತೆ ಹೆಚ್ಚು.  ಅಲ್ಲದೆ ಮೂಲ ಪ್ರತಿ ಕಳೆದು ಹೋಗುವ /ನಾಶವಾಗುವ/ಅಕ್ರಮ ತಿದ್ದುಪಡಿಗೆ ಒಳಗಾಗುವ ಭಯವಿರುವುದಿಲ್ಲ. ಯಾವುದೇ ಭಾಷೆ, ಶೈಲಿಯಲ್ಲಿರಲಿ ಆದರೆ ಲಿಖೀತವಾಗಿರಬೇಕು. ಇ-ಸ್ಟಾಂಪ್‌ ಪೇಪರ್‌ನಲ್ಲೇ ಬರೆಯಬೇಕೆಂದಿಲ್ಲ, ಗುಣಮಟ್ಟದ ಯಾವುದೇ ಹಾಳೆ ಸಾಕು. ಉಯಿಲಿನ ಪ್ರತಿಪುಟದ ಕೊನೆಗೆ ಉಹಿಲುಕರ್ತನ ಸಹಿ ಅಥವಾ ಹೆಬ್ಬರಳ ಗುರುತು ಹಾಕಬೇಕು. ಉಯಿಲುಕರ್ತ ಸಹಿ ಮಾಡಿದ್ದನ್ನು ಪ್ರತ್ಯಕ್ಷ ಕಂಡ ಇಬ್ಬರು ಸಾಕ್ಷಿ$ಗಳೆಂದು ಸಹಿ ಮಾಡಬೇಕು. ಕೊನೆಯ ಉಯಿಲು ಊರ್ಜಿತವಾದ್ದರಿಂದ ಅದರಲ್ಲಿ ದಿನಾಂಕ ಸ್ಪಷ್ಟವಾಗಿರಬೇಕು. ಉಯಿಲಿನಲ್ಲಿ ವಿಲೇ ಮಾಡಲಿಚ್ಚಿಸುವ ಆಸ್ತಿಗಳ, ಅವುಗಳನ್ನು ಪಡೆಯುವವರ ಪೂರ್ಣ ಹೆಸರು, ವಿವರಗಳನ್ನು ಗೊಂದಲಕ್ಕೆ ಆಸ್ಪದವಿಲ್ಲದಂತೆ ಸ್ಪಷ್ಟವಾಗಿ ನಮೂದಿಸಬೇಕು.

ಎಷ್ಟು ಜನಕ್ಕೆ ಬರೆಯಬಹುದೇ?
ಒಂದೇ ಉಯಿಲಿನಲ್ಲಿ ಎಷ್ಟು ಜನಕ್ಕೆ ಬೇಕಾದರೂ, ಎಷ್ಟು ಆಸ್ತಿಗಳನ್ನು ಬೇಕಾದರೂ ವಿಲೆವಾರಿ ಮಾಡಬಹುದು.
ಆಸ್ತಿ ಜಂಟಿ ಒಡೆತನದಲ್ಲಿದ್ದಲ್ಲಿ ಜಂಟಿಯಾಗಿಯೇ ಉಯಿಲು ಬರೆಯಬಹುದು. ಆದರೆ ಇದು ಜಾರಿಗೆ ಬರುವುದು ಇಬ್ಬರೂ ಮರಣ ಹೊಂದಿದ ನಂತರವೇ.  ಅಪ್ರಾಪ್ತ ವಯಸ್ಕರಿಗೆ ಆಸ್ತಿ ನೀಡಿದ್ದರೆ ಪೋಷಕರನ್ನು ನೇಮಿಸಬಹುದು. ನೇಮಿಸದಿದ್ದರೂ ಮಗುವಿನ ತಾಯಿ ಸಹಜ ಪೋಷಕಿಯಾಗುತ್ತಾಳೆ. ಹಣ, ಆಭರಣ, ವಾಹನ, ಷೇರು ಮಾತ್ರವಲ್ಲದೆ ಸಾಕುಪ್ರಾಣಿ, ಬೌದ್ದಿಕ ಆಸ್ತಿ, ಇಂಟರ್‌ನೆಟ್‌ ಖಾತೆಗಳು, ಪುಸ್ತಕ, ಮನೆಯ ಬೆಲೆಬಾಳುವ ಸಾಮಾನುಗಳನ್ನೂ ಸಹ ಉಯಿಲಿನ ಮೂಲಕ ನಿಮ್ಮಿಷ್ಟದಂತೆ ಹಂಚಿಕೆ ಮಾಡಬಹುದು.  ಊಹಿಲು ನೋಂದಣಿಗೆ ಮುದ್ರಾಂಕ ಶುಲ್ಕವಿಲ್ಲ. ಕೇವಲ 200 ರೂ. ನೋಂದಣಿ ಶುಲ್ಕದಲ್ಲಿ ಅದೆಷ್ಟೇ ಆಸ್ತಿಗಳನ್ನು ಎಷ್ಟು ಜನರಿಗೆ ಬೇಕಾದರೂ ನೀಡಬಹುದು.

ಬದಲಾವಣೆ ಮಾಡಬಹುದು
ಒಮ್ಮೆ ಬರೆದ ಉಯಿಲಿನಲ್ಲಿ ಬದಲಾವಣೆ, ಪೂರ್ತಿ ರದ್ದುಮಾಡಬಹುದು.   ನಿರ್ದಿಷ್ಟ ಸ್ವತ್ತಿಗೆ ಸಂಬಂಧಿಸಿದಂತೆ ಒಮ್ಮೆ ಮಾಡಿದ ಉಯಿಲು ತಪ್ಪಾಗಿದ್ದು, ಹೊಸ ಉಯಿಲು ಮಾಡಬೇಕೆಂದಿದ್ದರೆ ನಂತರದಲ್ಲಿ ಮತ್ತೂಂದು ಉಯಿಲು ಬರೆದರೆ ಸಾಕು. ಮೊದಲನೆಯದು ಸಹಜವಾಗಿಯೇ ರದ್ದಾಗುತ್ತದೆ.  ಈಗಾಗಲೇ ನೋಂದಣಿಯಾಗಿರುವ ಉಯಿಲನ್ನು ಕೇವಲ ರದ್ದುಪಡಿಸಬೇಕಿದ್ದರೆ ರದ್ದಾಯಿತಿ ಪತ್ರ ರಚಿಸಿ ನೊಂದಾಯಿಸುವ ಮೂಲಕ ರದ್ದುಗೊಳಿಸಬಹುದು. ಒಮ್ಮೆ ರದ್ದುಪಡಿಸಿದ ಉಯಿಲನ್ನು ಪುನರುಜ್ಜೀವನಗೊಳಿಸಲಾಗದು. 

ಉಯಿಲು ಪತ್ರವನ್ನು ತನ್ನಲ್ಲಾಗಲಿ, ನಿರ್ವಾಹಕನ ಹತ್ತಿರವಾಗಲಿ ಅಥವಾ ಮೊಹರು ಮಾಡಿದ ಲಕೋಟೆಯಲ್ಲಿಟ್ಟು ನೋಂದಣಾಧಿಕಾರಿ ಕಚೇರಿಯಲ್ಲಿ ಭಧ್ರವಾಗಿರಿಸಬಹುದು. ಇದಕ್ಕೆ 1ಸಾವಿರ ರೂ. ಶುಲ್ಕವಿದೆ. ಹೀಗೆ ಕಚೇರಿಯಲ್ಲಿಟ್ಟ ಉಯಿಲನ್ನು ತನಗೆ ಬೇಕಾದ ಹಿಂದಕ್ಕೆ ಪಡೆಯಬಹುದು. ಉಯಿಲುಕರ್ತ ಮೃತಪಟ್ಟಲ್ಲಿ ವಾರಸುದಾರರು ಉಲ್ಲೇಖೀಸಲ್ಪಟ್ಟವರು ಅದರ ದೃಢೀಕೃತ ಪ್ರತಿ ಪಡೆದುಕೊಳ್ಳಬಹುದು.

ವಿಶೇಷ  ಉಯಿಲು
ಉಯಿಲಿನಲ್ಲಿ ಸಾಮಾನ್ಯ ಹಾಗೂ ವಿಶೇಷ ಸೌಲಭ್ಯಯುಕ್ತ ಎಂದು ಎರಡು ವಿಧಗಳಿವೆ. ಯುದ್ದ ನಿರತ ಸೈನಿಕರು, ವೈಮಾನಿಕರು, ನಾವಿಕರು ವಿಶೇಷ ಸಂದರ್ಭಗಳಲ್ಲಿ ಭಾಗಶಃ ಲಿಖೀತ ಮತ್ತು ಭಾಗಶಃ ಮೌಖೀಕ ಅಥವಾ ಸಂಪೂರ್ಣ ಮೌಖೀಕವಾದ ಪ್ರಿವಿಲೈಜಡ್‌ ವಿಲ್‌ ಬರೆಯಬಹುದು. 

ವಿಶೇಷ ಉಯಿಲಿನ ಲಕ್ಷಣಗಳು:-
ಉಯಿಲುಕರ್ತ ಸ್ವಹಸ್ತಾಕ್ಷರದಿಂದ ಬರೆದಿದ್ದರೆ ಅದಕ್ಕೆ ಸಹಿ ಹಾಕಬೇಕಿಲ್ಲ, ಸಾಕ್ಷಿಗಳೂ ಬೇಕಿಲ್ಲ. ಬೇರೆಯವರಿಂದ ಬರೆಸಿದ್ದರೆ ಉಯಿಲುಕರ್ತನ ಸಹಿ ಅಗತ್ಯ, ಆದರೆ ಸಾಕ್ಷಿಗಳ ಅಗತ್ಯವಿಲ್ಲ. ಬೇರೆಯವರಿಂದ ಬರೆಯಿಸಿ ಸಹಿ ಹಾಕದಿದ್ದರೂ ಅದನ್ನು ಆತನೇ ಹೇಳಿ ಬರೆಸಿದ್ದನೆಂಬುದನು ರುಜುವಾತು ಮಾಡಿದರೂ ಊರ್ಜಿತ. ಅಪೂರ್ಣವಾಗಿ ಬರೆದ ಉಯಿಲು ಸಹ ಊರ್ಜಿತ ಆದರೆ ಅದಕ್ಕೆ ಸಕಾರಣವಿರಬೇಕು.

ಪ್ರೊಬೇಟ್‌ ಅಂದರೆ…
ಯಾವುದೇ ಒಂದು ಉಯಿಲು ನಿಸ್ಸಂದೇಹವಾಗಿ ಸಾಚಾತನದಿಂದ ಕೂಡಿದೆ ಎಂಬುದನ್ನು ನ್ಯಾಯಾಲದಲ್ಲಿ ರುಜುವಾತುಪಡಿಸಿ ಪಡೆಯುವ ಉಯಿಲಿನ ಪ್ರಮಾಣಿತ ಪ್ರತಿ.  ಉಯಿಲಿನ ಸತ್ಯಾಸತ್ಯತೆ ಬಗ್ಗೆ ಕೂಲಂಕುಶ ವಿಚಾರಣೆ ನಡೆಸಿದ ನಂತರವೇ ನ್ಯಾಯಾಲಯ ಪೊ›ಬೇಟ್‌ ಮಂಜೂರು ಮಾಡುವುದರಿಂದ ಅಂತಹ ಉಯಿಲು ಸಂಶಾಯಾತೀತವಾಗುತ್ತದಲ್ಲದೆ ಅದರ ಸಿಂಧುತ್ವವನ್ನು ಯಾರೂ ಪ್ರಶ್ನಿಸುವಂತಿಲ್ಲ. ಹೇಗೆ ಪಡೆಯುವುದು? ಉಯಿಲಿನ ನಿರ್ವಾಹಕ ಅಥವಾ ಸದರಿ ಉಯಿಲಿನ ಮೂಲಕ ಆಸ್ತಿ ಪಡೆಯುವ ಹಕ್ಕುಳ್ಳ ಯಾವುದೇ ವ್ಯಕ್ತಿ, ಆಸ್ತಿ ಇರುವ ಸ್ಥಳೀಯ ಪ್ರದೇಶದ ಸಕ್ಷಮ ನ್ಯಾಯಾಲಯಕ್ಕೆ ಪೊ›ಬೇಟ್‌ ಕೋರಿ ಅರ್ಜಿ ಸಲ್ಲಿಸಬೇಕು.

ಉಯಿಲು ಬೃಹತ್‌ ಮೊತ್ತದ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ್ದರೆ ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಉಯಿಲುಕರ್ತ ಮೃತನಾದ ಕನಿಷ್ಟ 7 ದಿನದ ನಂತರ ಇಂತಹ ಅರ್ಜಿ ಸಲ್ಲಿಸಬಹುದಾಗಿದ್ದು, ಗರಿಷ್ಠ ಕಾಲಮಿತಿ ಇರುವುದಿಲ್ಲ. ಆದರೆ ಅಸಾಮಾನ್ಯ ವಿಳಂಬವಾದರೆ ಸಕಾರಣವಿರಬೇಕು. 

ಬಿ.ಎಂ.ಸಿದ್ದಲಿಂಗಸ್ವಾಮಿ,

Advertisement

Udayavani is now on Telegram. Click here to join our channel and stay updated with the latest news.

Next