Advertisement

ಪಿಜಿ ಕೇಂದ್ರ ಸಮಸ್ಯೆಗೆ ಸಿಗಲಿದೆಯಾ ಮುಕ್ತಿ?

03:58 PM Oct 19, 2019 | Suhan S |

ಕೊಪ್ಪಳ: ಜಿಲ್ಲಾ ಕೇಂದ್ರಕ್ಕೆ ಸ್ನಾತಕೋತ್ತರ ಕೇಂದ್ರ ಮಂಜೂರಾತಿ ಮಾಡಿ ಎನ್ನುವ ಬಹುವರ್ಷಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿ ವಿಜಯನಗರ ಶ್ರೀಕೃಷ್ಣ ದೇವರಾಯ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭಿಸಿದೆ. ಆದರೆ ನಾಲ್ಕು ವರ್ಷಗಳಿಂದ ಕೇಂದ್ರಕ್ಕೆ ಸ್ವಂತ ನೆಲೆಯಿಲ್ಲ. ಈ ನಡುವೆ 13 ಎಕರೆ ಜಮೀನು ಸಿಕ್ಕಿದ್ದು, ಅನುದಾನದ ಕೊರತೆ ಎದುರಿಸುತ್ತಿದೆ.

Advertisement

ಇಲ್ಲಿನ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆಯಬೇಕಿದೆ. ಕೊಪ್ಪಳದ ವಿಜಯನಗರ ಶ್ರೀಕೃಷ್ಣ ದೇವರಾಯ ಸ್ನಾತಕೋತ್ತರ ಕೇಂದ್ರದಲ್ಲಿ ಮೊದಲು 7 ವಿಭಾಗಗಳನ್ನು ಆರಂಭಿಸಲಾಗಿತ್ತು. ಆದರೆ ಬೇಡಿಕೆಗೆ ತಕ್ಕಂತೆ ಪ್ರಸ್ತುತ 10 ವಿವಿಧ ವಿಭಾಗಗಳನ್ನು ಆರಂಭ ಮಾಡಲಾಗಿದೆ. ಅದರಲ್ಲಿ ಅರ್ಥಶಾಸ್ತ್ರ, ವಿಜ್ಞಾನ, ಕನ್ನಡ, ಇಂಗ್ಲಿಷ್‌, ಸಮಾಜ ವಿಜ್ಞಾನ, ಇತಿಹಾಸ, ಪ್ರತಿಕೋದ್ಯಮ, ಎಂಎಸ್‌ಡಬ್ಲೂ , ಎಂಕಾಂ ಹಾಗೂ ರಾಜ್ಯಶಾಸ್ತ್ರ ವಿಭಾಗ ಆರಂಭಿಸಲಾಗಿದೆ.

500 ವಿದ್ಯಾರ್ಥಿಗಳು: ಪ್ರಸ್ತುತ ಸ್ನಾತಕೋತ್ತರ ಕೇಂದ್ರದಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಪ್ರತಿ ವಿಭಾಗದಲ್ಲಿ 40 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಬೇಡಿಕೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶಾತಿ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ಪ್ರವೇಶಾತಿಗೆ ಆಗಮಿಸುತ್ತಾರೆ. ಆದರೆ ಎಲ್ಲರಿಗೂ ಸೀಟ್‌ ಲಭ್ಯವಾಗದ ಹಿನ್ನೆಲೆಯಲ್ಲಿ ಅನ್ಯ ಜಿಲ್ಲೆಗಳಲ್ಲಿ ಇರುವ ಸ್ನಾತಕೋತ್ತರ ಕೇಂದ್ರಗಳತ್ತ ಮುಖ ಮಾಡಬೇಕಿದೆ.

ವಿದ್ಯಾರ್ಥಿನಿಯರಿಗೆ ಸದಾವಕಾಶ: ಈ ಭಾಗದ ವಿದ್ಯಾರ್ಥಿನಿಯರು ಈಗಷ್ಟೇ ಸ್ನಾತಕೋತ್ತರ ಕೇಂದ್ರ ಜಿಲ್ಲಾ ಕೇಂದ್ರದಲ್ಲೇ ಇದೆ ಎನ್ನುವ ಧೈರ್ಯದಿಂದ ಸ್ನಾತಕ ಪದವಿ ಪಡೆಯಲು ಮುಂದಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಧೈರ್ಯದಿಂದಲೇ ನಗರದಲ್ಲೇ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.

13 ಎಕರೆ ಜಮೀನು ಮಂಜೂರು: ಈ ಹಿಂದೆ ಕಾಂಗ್ರೆಸ್‌ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರಡ್ಡಿ ಅವರ ಶ್ರಮದ ಫಲವಾಗಿ ಜಿಲ್ಲಾ ಕೇಂದ್ರದಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭವಾಗಿದೆ. ಇದು 2 ವರ್ಷಗಳಿಂದ ತಾತ್ಕಾಲಿಕ ಕಟ್ಟಡದಲ್ಲೇ ನಡೆಯುತ್ತಿದೆ. ಹಳೇ ಜಿಲ್ಲಾಸ್ಪತ್ರೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸೂಕ್ತ ವಾತಾವರಣ ಇಲ್ಲ. ಎಲ್ಲೆಂದರಲ್ಲಿ ತ್ಯಾಜ್ಯವೇ ಕಾಣಿಸುತ್ತಿದೆ. ಅಧ್ಯಯನಕ್ಕೂ ತೊಂದರೆಯಾಗುತ್ತಿದೆ. ಇದೆಲ್ಲವನ್ನು ಅರಿತು ಈ ಹಿಂದೆ ರಾಯರಡ್ಡಿ ಅವರೇ ಮಳೆ ಮಲ್ಲೇಶ್ವರ ದೇವಸ್ಥಾನ ಸಮೀಪದಲ್ಲಿ 13 ಎಕರೆ ಜಮೀನನ್ನು ಸ್ನಾತಕೋತ್ತರ ಕೇಂದ್ರಕ್ಕೆ ಹಸ್ತಾಂತರ ಪ್ರಕ್ರಿಯೆಗೂ ಮುಂದಾಗಿದ್ದರು. ಜಮೀನು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಹೆಸರಿಗೆ ಹಸ್ತಾಂತರಗೊಂಡಿದೆ.

Advertisement

ಬೇಕಿದೆ 55.83 ಕೋಟಿ: ಮಳೆ ಮಲ್ಲೇಶ್ವರದ ಬಳಿ ಮಂಜೂರಾದ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕೆ 55.85 ಕೋಟಿ ರೂ. ಬೇಡಿಕೆಯ ಪ್ರಸ್ತಾವನೆಯನ್ನು ವಿವಿಯಿಂದ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ ರಾಜ್ಯದಲ್ಲಿ ತಿಂಗಳಿಗೊಂದು ರಾಜಕೀಯ ವಿದ್ಯಮಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ನಾತಕೋತ್ತರ ಕೇಂದ್ರಕ್ಕೆ ಸರ್ಕಾರ ಯಾವುದೇ ಅನುದಾನ ಮಂಜೂರು ಮಾಡುತ್ತಿಲ್ಲ. ಈ ಹಿಂದಿನ ಕಾಂಗ್ರೆಸ್‌ ಸರ್ಕಾರವೂ ಅನುದಾನ ನೀಡಿಲ್ಲ. ಮೈತ್ರಿ ಸರ್ಕಾರವೂ ಅನುದಾನ ನೀಡಲಿಲ್ಲ. ಈಗಿನ ಬಿಜೆಪಿ ಸರ್ಕಾರವೂ ಅನುದಾನ ನೀಡುವ ಬಗ್ಗೆ ಚಕಾರವೆತ್ತಿಲ್ಲ.  ಸರ್ಕಾರ ಅಗತ್ಯಕ್ಕೆ ತಕ್ಕಂತೆ ಅನುದಾನ ನೀಡಿದರೆ ಮಾತ್ರ ಸ್ನಾತಕೋತ್ತರ ಕೇಂದ್ರದ ಕಟ್ಟಡ ಎದ್ದು ನಿಲ್ಲಲಿದೆ.

ಆತಂಕ: ಈ ಹಿಂದೆ ಜಿಲ್ಲೆಯಲ್ಲಿ ಎರಡು ಸ್ನಾತಕೋತ್ತರ ಕೇಂದ್ರ ಮಂಜೂರಾಗಿವೆ. ಕೊಪ್ಪಳ ಹಾಗೂ ಯಲಬುರ್ಗಾದಲ್ಲಿ ಕೇಂದ್ರ ಆರಂಭವಾಗಿವೆ. ಆದರೆ ಯಲಬುರ್ಗಾ ಕೇಂದ್ರಕ್ಕೆ ಕಟ್ಟಡ ನಿರ್ಮಾಣ ಮಾಡಲು ಅನುದಾನವೂ ಮಂಜೂರಾಗಿದೆ. ಆದರೆ ಕೊಪ್ಪಳ ಕೇಂದ್ರಕ್ಕೆ ಇಲ್ಲಿವರೆಗೂ ಹಣದ ನೆರವು ಸಿಗದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೊಪ್ಪಳದಲ್ಲಿನ ಕೇಂದ್ರವನ್ನೇ ಬಂದ್‌ ಮಾಡಿ ಯಲಬುರ್ಗಾದಲ್ಲಿ ಕೇಂದ್ರ ಉಳಿಸಿಕೊಂಡರೇ ಇಲ್ಲಿನ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ ಎಂದು ಶಿಕ್ಷಣ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕೊಪ್ಪಳದ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭವಾಗಿ 4 ವರ್ಷಗಳಾಗಿವೆ. ಆದರೆ ಇಲ್ಲಿವರೆಗೂ ಸ್ವಂತ ಕಟ್ಟಡವಿಲ್ಲ. ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು. ಈ ಹಿಂದೆ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ತಮ್ಮ ಕ್ಷೇತ್ರಕ್ಕಷ್ಟೇ ಅನುದಾನ ಮಂಜೂರು ಮಾಡಿಸಿ ಕೊಪ್ಪಳ ಕೇಂದ್ರಕ್ಕೆ ಹಣ ನೀಡಿಲ್ಲ. ಇನ್ನಾದರೂ ಕೊಪ್ಪಳ ಶಾಸಕ, ಸಂಸದರು ಸರ್ಕಾರದ ಗಮನ ಸೆಳೆದು ಅನುದಾನ ತಂದು ಕಟ್ಟಡ ನಿರ್ಮಿಸಬೇಕು. -ಅಮರೇಶ ಕಡಗದ್‌, ಎಸ್‌ಎಫ್‌ಜಿಲ್ಲಾಧ್ಯಕ್ಷ

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next