ನವದೆಹಲಿ:ಕಳೆದ ಎರಡು ತಿಂಗಳ ಕಾಲ ತೈಲ ಮಾರಾಟ ಕಂಪನಿಗಳು ದೇಶದಲ್ಲಿ ಇಂಧನ ಬೆಲೆಯನ್ನು ಪರಿಷ್ಕರಿಸಿಲ್ಲ. ಆದರೆ ಮೇ 2ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾದ ಮೇಲೆ ತೈಲ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮೇ ನಲ್ಲಿ ಭಾರತಕ್ಕೆ ತಲುಪಲಿವೆ ರಷ್ಯಾದ 2 ಲಕ್ಷ ಸ್ಪುಟ್ನಿಕ್ ವಿ ಲಸಿಕೆಗಳು: ವೆಂಕಟೇಶ್ ವರ್ಮಾ
ನಾಲ್ಕು ರಾಜ್ಯಗಳ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ದರ ಪರಿಷ್ಕರಣೆಗೆ ಮುಂದಾಗಿಲ್ಲ. ಇದೀಗ ನಷ್ಟವನ್ನು ಭರ್ತಿ ಮಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸ್ವಾಮಿತ್ವದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹಂತ, ಹಂತವಾಗಿ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ವರದಿ ವಿವರಿಸಿದೆ.
ರಾಜ್ಯ ಸ್ವಾಮಿತ್ವದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕನಿಷ್ಠ 2ರಿಂದ 3 ರೂಪಾಯಿವರೆಗೆ ಹಂತ, ಹಂತವಾಗಿ ಹೆಚ್ಚಳ ಮಾಡುವ ಮೂಲಕ ನಷ್ಟ ಭರ್ತಿ ಮಾಡಿಕೊಳ್ಳಲು ಮುಂದಾಗಲಿವೆ. ಮೇ ಮೊದಲ ವಾರದಲ್ಲಿ ದರ ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ಇಂಡಿಯಾ ಟುಡೇ ವರದಿ ತಿಳಿಸಿದೆ.
ಫೆಬ್ರುವರಿ 27ರಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿಲ್ಲ ಎಂದು ತೈಲ ಮಾರಾಟ ಕಂಪನಿ ತಿಳಿಸಿದೆ. ಚುನಾವಣೆ ನಿಟ್ಟಿನಲ್ಲಿ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಬೆಲೆಯನ್ನು ಹೆಚ್ಚಿಸಿಲ್ಲ ಎಂದು ಹೇಳಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ಭಾರೀ ಪ್ರಮಾಣದ ತೆರಿಗೆ ಹೊರೆಯಾಗಿದ್ದು, ಇದರಿಂದಾಗಿ ತೈಲ ಬೆಲೆ ಹೆಚ್ಚಳ ಮಾಡುವುದು ಅನಿವಾರ್ಯವಾಗಲಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ತಿಳಿಸಿದೆ.