ಕರಾಚಿ/ದುಬೈ: ಏಷ್ಯಾ ಕಪ್ ವಿಚಾರದಲ್ಲಿ ಈಗಾಗಲೇ ನೆರೆ ಹೊರೆಯ ದೇಶಗಳಿಂದ ಮುಖಭಂಗಕ್ಕೆ ಒಳಗಾಗಿರುವ ಪಾಕಿಸ್ತಾನ, ಈಗ ಭಾರತದಲ್ಲಿ ನಡೆಯುವ ವಿಶ್ವಕಪ್ ವಿಚಾರದಲ್ಲಿ ಹೊಸ ನಕಾರಾತ್ಮಕ ತಂತ್ರದ ಮೊರೆ ಹೋಗಿದೆ. ಪಾಕಿಸ್ತಾನ- ಭಾರತ ನಡುವಿನ ಪಂದ್ಯವನ್ನು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡುವುದಿಲ್ಲ ಎಂದು ಹೇಳಿದೆ.
ಐಸಿಸಿಗೆ ಈ ಬಗ್ಗೆ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ ಪ್ರಸ್ತಾಪ ಸಲ್ಲಿಸಿದ್ದಾರೆ. ಆದರೆ, ಅಹ್ಮದಾಬಾದ್ ಬಿಟ್ಟು, ಕೋಲ್ಕತಾ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಪಂದ್ಯಗಳನ್ನು ಆಡುವುದಾಗಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಐಸಿಸಿ ಮುಖ್ಯಸ್ಥ ಗ್ರೇಗ್ ಬಾರ್ಕ್ಲೇ ಮತ್ತು ಐಸಿಸಿ ಜನರಲ್ ಮ್ಯಾನೇಜರ್ ಗಿಯೋಫ್ ಅಲ್ಲಡೈಸ್ ಕರಾಚಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಏಷ್ಯಾ ಕಪ್ ಅನ್ನು ಪಾಕಿಸ್ತಾನದಲ್ಲಿ ಆಯೋಜನೆ ಮಾಡುವುದು ಕಷ್ಟಕರ. ಇದನ್ನು ಮುಂದಿ ಟ್ಟುಕೊಂಡು ಐಸಿಸಿ ವಿಶ್ವಕಪ್ ವಿಚಾರದಲ್ಲಿ ಯಾವುದೇ ತಟಸ್ಥ ಕ್ರೀಡಾಂಗಣಗಳ ಬಗ್ಗೆ ಬೇಡಿಕೆ ಇಡಬಾರದು ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಸೇಥಿ, ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ಯಾವುದೇ ಪಂದ್ಯಗಳನ್ನು ಆಯೋಜಿಸಬಾರದು. ಒಂದು ವೇಳೆ ಇಲ್ಲಿ ಫೈನಲ್ ಪಡೆದರೆ ನಮ್ಮದೇನೂ ಅಭ್ಯಂತರವಿಲ್ಲ. ಇದಕ್ಕೆ ಬದಲಾಗಿ ಪಾಕಿಸ್ತಾನದ ಪಂದ್ಯಗಳನ್ನು ಚೆನ್ನೈ, ಬೆಂಗಳೂರು ಮತ್ತು ಕೋಲ್ಕತಾದಲ್ಲಿ ಆಯೋಜನೆ ಮಾಡಬೇಕು ಎಂದಿದ್ದರು.
ಈ ಮಧ್ಯೆ, ಬುಧವಾರದಿಂದ ಲಂಡನ್ ನಲ್ಲಿ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾಗಿದ್ದು, ಬಿಸಿಸಿಐ ಮತ್ತು ಐಸಿಸಿ ಅಧಿಕಾರಿಗಳು ಅಲ್ಲೇ ಇದ್ದಾರೆ. ಈ ಸಂದರ್ಭದಲ್ಲಿ ವಿಶ್ವಕಪ್ ಪಂದ್ಯಾವಳಿಯ ಕ್ರೀಡಾಂಗಣಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
Related Articles
ಪಾಕಿಸ್ತಾನಕ್ಕೆ ಮುಖಭಂಗ
ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್ ಪಂದ್ಯಾವಳಿ ಆಡಿಸಬೇಕು ಎಂಬ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಸ್ತಾಪವನ್ನು ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ದೇಶಗಳು ತಿರಸ್ಕರಿಸಿವೆ. ಹೀಗಾಗಿ, ಏಷ್ಯಾಕಪ್ ನಿಂದಲೇ ಆತಿಥೇಯ ಪಾಕಿಸ್ತಾನ, ಹೊರಗುಳಿಯುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ.
ಪಾಕಿಸ್ತಾನವು, 3ರಿಂದ 4 ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಡುವುದು, ಭಾರತ ಪಾಲ್ಗೊಳ್ಳುವ ಇತರೆ ಪಂದ್ಯಗಳನ್ನು ತಟಸ್ಥ ತಾಣಗಳಲ್ಲಿ ಆಡುವ ಬಗ್ಗೆ ಪಾಕಿಸ್ತಾನ ಪ್ರಸ್ತಾಪ ನೀಡಿತ್ತು. ಏಷ್ಯಾಕಪ್ ಗಾಗಿ ಭಾರತ ಪಾಕ್ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಹೇಳಿದ ಮೇಲೆ ಈ ಕುರಿತಂತೆ ಚಿಂತನೆ ನಡೆಸಲಾಗಿತ್ತು. ಆದರೆ, ಇದಕ್ಕೆ ಲಂಕಾ, ಬಾಂಗ್ಲಾ ಮತ್ತು ಆಫ್ಘಾನ್ ಕ್ರಿಕೆಟ್ ಮಂಡಳಿಗಳು ಒಪ್ಪಿಕೊಂಡಿಲ್ಲ. ಅಲ್ಲದೆ, ಬಿಸಿಸಿಐ ಹೇಳಿದಂತೆ, ಪಾಕ್ ನಿಂದ ಹೊರಗೆ ಏಷ್ಯಾಕಪ್ ಆಡಿಸಬೇಕು ಎಂಬ ಪ್ರಸ್ತಾಪಕ್ಕೆ ಒಪ್ಪಿಕೊಂಡಿವೆ.
ಇನ್ನೊಂದೆಡೆ, ಏಷ್ಯಾಕಪ್, ಪಾಕ್‌ನಿಂದ ಹೊರಗೆ ನಡೆದರೆ, ತಾನು ಭಾಗಿಯಾಗುವುದಿಲ್ಲ ಎಂದು ಈಗಾಗಲೇ ಪಾಕಿಸ್ತಾನ ಹೇಳಿದೆ. ಇದರಿಂದಾಗಿ ಏಷ್ಯಾಕಪ್‌ನಿಂದ ಪಾಕಿಸ್ತಾನ ಹೊರ ಬಿದ್ದಂತೆ ಆಗಿದೆ. ಹೀಗಾಗಿ, ಇದೇ ತಿಂಗಳು ಏಷ್ಯಾ ಕ್ರಿಕೆಟ್ ಮಂಡಳಿ ಸಭೆ ನಡೆಯಲಿದ್ದು, ಇದರಲ್ಲಿ ಏಷ್ಯಾಕಪ್‌ನ ಭವಿಷ್ಯ ನಿರ್ಧಾರವಾಗಲಿದೆ. ಮೂಲಗಳ ಪ್ರಕಾರ, ಈ ಬಾರಿಯ ಏಷ್ಯಾಕಪ್ ಸಂಪೂರ್ಣವಾಗಿ ರದ್ದಾಗುವ ಸಾಧ್ಯತೆಗಳೇ ಹೆಚ್ಚಾಗಿವೆ.