ಹೊಸದಿಲ್ಲಿ: ಹಿರಿಯ ಬಿಜೆಪಿ ನಾಯಕಿ, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ತಾನು ಈಗಾಗಲೇ ಉನ್ನತ ನಾಯಕರಿಗೆ ಮಾಹಿತಿ ನೀಡಿದ್ದೇನೆ ಎಂದು ಹೇಳಿದ್ದಾರೆ.
ರಾಮಜನ್ಮಭೂಮಿ ಹೋರಾಟ ಸೇರಿದಂತೆ ಪಕ್ಷದ ಬೆಳವಣಿಗೆಯ ಪ್ರಮುಖ ಘಟ್ಟಗಳಲ್ಲಿ ಮುಂಚೂಣಿಯಲ್ಲಿದ್ದ ಉಮಾ ಭಾರತಿ ಅವರು ಎಂದೂ ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ರಾಜಕೀಯವನ್ನೂ ತೊರೆಯುವುದಿಲ್ಲ ಎಂದು ಉಮಾ ಭಾರತಿ ಹೇಳಿದ್ದಾರೆ.
ಈ ಹಿಂದೆಯೂ ನಾನು ಪಕ್ಷ ಬಿಟ್ಟಿರಲಿಲ್ಲ. ವಾಸ್ತವವಾಗಿ, ನನಗೆ ಬಾಗಿಲು ತೋರಿಸಲಾಗಿತ್ತು, ನಾನು ಭಾರತೀಯ ಜನಶಕ್ತಿ ಪಕ್ಷವನ್ನು ರಚಿಸಿದ್ದೇನೆ ಎಂದ ಉಮಾಭಾರತಿ ಅವರು, ರಾಜ್ಯಸಭಾ ಚುನಾವಣೆ ಸೇರಿದಂತೆ ಮುಂದಿನ ಎರಡು ವರ್ಷಗಳವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.
ಮುಂಬರುವ ಲೋಕಸಭೆ ಚುನಾವಣೆಗೆ ರಾಮ ಜನ್ಮಭೂಮಿಯ ಬಹುತೇಕ ಮುಂಚೂಣಿ ನಾಯಕರಿಗೆ ಪಕ್ಷದ ಟಿಕೆಟ್ ನಿರಾಕರಿಸಲಾಗಿದೆ ಎಂಬ ಪ್ರಶ್ನೆಗೆ ಉಮಾಭಾರತಿ, “ಇದು ನಿಜವಲ್ಲ. ಪ್ರಧಾನಿ ಮೋದಿ ಕೂಡ ಇದೇ ಚಳವಳಿಯಿಂದ ಬಂದವರು” ಎಂದಿದ್ದಾರೆ.