ಇಂದೋರ್ : ಮಹತ್ತರ ವಿದ್ಯಮಾನವೊಂದರಲ್ಲಿ ವಿದೇಶ ವ್ಯವಹಾರಗಳ ಸಚಿವೆ ಮತ್ತು ಹಿರಿಯ ಬಿಜೆಪಿ ನಾಯಕಿಯಾಗಿರುವ 66ರ ಹರೆಯದ ಸುಶ್ಮಾ ಸ್ವರಾಜ್ ಅವರು ತಾನು 2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮಧ್ಯ ಪ್ರದೇಶದ ಇಂದೋರ್ ನ ರಾಲಿಯಲ್ಲಿ ಮಾತನಾಡುತ್ತಿದ್ದ ಅವರು, “ನಾನು ಸ್ಪರ್ಧಿಸುವುದು ಪಕ್ಷದ ನಿರ್ಧಾರಕ್ಕೆ ಸಂಬಂಧಿಸಿದ ವಿಷಯವಾದರೂ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ’ ಎಂದು ಹೇಳಿದರು. ಸುಶ್ಮಾ ಸ್ವರಾಜ್ ಅವರು ಮಧ್ಯ ಪ್ರದೇಶದ ವಿದಿಷಾ ಲೋಕಸಭಾ ಸದಸ್ಯರಾಗಿದ್ದು ಬಿಜೆಪಿಯ ಹಿರಿಯ ನಾಯಕಿಯಾಗಿದ್ದಾರೆ.
ಸುಪ್ರೀಂ ಕೋರ್ಟಿನ ಮಾಜಿ ವಕೀಲೆಯಾಗಿರುವ ಸ್ವರಾಜ್ ಏಳು ಬಾರಿಯ ಸಂಸದೆ ಮತ್ತು ಮೂರು ಬಾರಿಯ ಶಾಸಕಿಯಾಗಿದ್ದಾರೆ. 1977ರಲ್ಲಿ ತನ್ನ 25ರ ಹರೆಯದಲ್ಲೇ ಹರಿಯಾಣದ ಅತಿ ಕಿರಿಯ ವಯಸ್ಸಿನ ಕ್ಯಾಬಿನೆಟ್ ಸಚಿವೆಯಾಗಿದ್ದ ಸುಶ್ಮಾ ಸ್ವರಾಜ್, 2016ರ ಡಿಸೆಂಬರ್ ನಲ್ಲಿ ದಿಲ್ಲಿಯ ಏಮ್ಸ್‌ನಲ್ಲಿ ಯಶಸ್ವೀ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದರು.
ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸದಿರುವ ಆಕೆಯ ನಿರ್ಧಾರ ಆರೋಗ್ಯದ ಕಾರಣದಿಂದಾಗಿದೆ ಎಂಬ ಅಭಿಪ್ರಾಯ ಸರ್ವತ್ರ ಇದೆ. ಸುಶ್ಮಾ ಅವರು 1998 ಕಿರು ಅವಧಿಗೆ ದಿಲ್ಲಿ ಮುಖ್ಯಮಂತ್ರಿಯೂ ಆಗಿದ್ದರು.