Advertisement

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

02:28 AM Apr 30, 2024 | Team Udayavani |

ಸೋಲಾಪುರ್‌/ಸತಾರಾ: “ನಾನು ಇರುವ ವರೆಗೆ ಸಂವಿಧಾನವನ್ನು ಬದಲಾಯಿಸಲು ಕಾಂಗ್ರೆಸ್‌ಗೆ ಅವಕಾಶ ನೀಡುವುದಿಲ್ಲ’ ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ಸಾರಿದ್ದಾರೆ. ಮಹಾರಾಷ್ಟ್ರದ ಸೋಲಾಪುರ ಮತ್ತು ಸತಾರಾಗಳಲ್ಲಿ ಸೋಮವಾರ ಪ್ರಚಾರ ನಡೆಸಿ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ಮೀಸಲಾತಿ ನೀತಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

Advertisement

ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲು ರದ್ದು ಮಾಡಲಿದೆ ಎಂದು ಪದೇಪದೆ ಆರೋಪಿಸುತ್ತಾರೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಸಂವಿಧಾನವನ್ನು ತಿದ್ದುಪಡಿ ಮಾಡುವ ಉದ್ದೇಶ ಏನಿದ್ದರೂ ಕಾಂಗ್ರೆಸ್‌ನವರದ್ದು ಎಂದು ತಿರುಗೇಟು ನೀಡಿದ್ದಾರೆ. “ನನಗೆ ಜನರ ಆಶೀರ್ವಾದ ಇರುವ ವರೆಗೆ ಧರ್ಮದ ಆಧಾರದಲ್ಲಿ ಮೀಸಲು ನೀಡುವುದು ಮತ್ತು ಸಂವಿಧಾನವನ್ನು ಬದಲಿಸುವುದಕ್ಕೆ ಅವಕಾಶ ವನ್ನೇ ನೀಡುವುದಿಲ್ಲ’ ಎಂದು ಪ್ರಧಾನಮಂತ್ರಿ ಸಾರಿದ್ದಾರೆ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದರೂ, ಕಾಂಗ್ರೆಸ್‌ನ ಅಧಿಕಾರದ ಅಷ್ಟೂ ಅವಧಿಗಳಲ್ಲಿ ಜನರನ್ನು ದಾಸ್ಯ ಬಂಧನದಲ್ಲಿಯೇ ಇರಿಸಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರ್ಷಕ್ಕೊಬ್ಬ ಪ್ರಧಾನಿ: ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ವರ್ಷಕ್ಕೊಬ್ಬರು ಪ್ರಧಾನಿಯಾಗಲಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಚುನಾವಣೆ ಬಳಿಕ ಪ್ರಧಾನಿ ಯಾರು ಆಗಬೇಕು ಎಂಬುದರ ಬಗ್ಗೆ ವಿಪಕ್ಷಗಳ ಒಕ್ಕೂಟದಲ್ಲಿ ಯುದ್ಧವೇ ನಡೆದಿದೆ ಎಂದು ಸೋಲಾಪುರದಲ್ಲಿ ನಡೆದ ರ್ಯಾಲಿಯಲ್ಲಿ ಟೀಕಿಸಿದ್ದಾರೆ ಪ್ರಧಾನಿ ಮೋದಿ.

10 ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರ ಯಾವ ರೀತಿಯ ಆಡಳಿತ ನೀಡಿದೆ ಎನ್ನುವುದನ್ನು ನೀವೆಲ್ಲ ನೋಡಿದ್ದೀರಿ. ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗದಂತೆ ಸಾಮಾನ್ಯ ವರ್ಗದಲ್ಲಿ ಇರುವ ಆರ್ಥಿಕವಾಗಿ ಹಿಂದುಳಿದವರಿಗೆ (ಇಡಬ್ಲ್ಯುಎಸ್‌) ಶೇ.10 ಮೀಸಲಾತಿ ನೀಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದರಿಂದಾಗಿ ಸಾಮಾನ್ಯ ವರ್ಗದವರಿಗೆ ಅನುಕೂಲವಾಗಿದೆ. ವಿಪಕ್ಷಗಳ ಒಕ್ಕೂಟದ ನಾಯಕರು ಪ್ರತೀ ದಿನ ಮೋದಿಯನ್ನು ತೆಗಳುವುದನ್ನೇ ಕಾಯಕವನ್ನಾಗಿಸಿದ್ದಾರೆ ಎಂದರು.

ದೇಶದ ಸಂವಿಧಾನ ರಕ್ಷಣೆಗೆ ಈ ಚುನಾವಣೆ: ರಾಹುಲ್‌
ಬಿಲಾಸ್‌ಪುರ/ಪಟಾನ್‌: ಈ ಬಾರಿಯ ಲೋಕಸಭೆ ಚುನಾವಣೆ ಹಿಂದಿನ ಚುನಾವಣೆಗಳಿಗಿಂತ ಭಿನ್ನ ವಾಗಿದೆ. ಇದು ದೇಶದ ಸಂವಿಧಾನವನ್ನು ರಕ್ಷಿಸಲು ಇರುವ ಅವಕಾಶವಾಗಿದೆ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಹೇಳಿದ್ದಾರೆ. ಛತ್ತೀಸ್‌ಗಢದ ಬಿಲಾಸ್‌ಪುರ ಮತ್ತು ಗುಜರಾತ್‌ನ ಪಟಾನ್‌ನಲ್ಲಿ ಚುನಾವಣ ರ್ಯಾಲಿಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು ತುಳಿತಕ್ಕೆ ಒಳಗಾದವರ ರಕ್ಷಣೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ನೀಡಿರುವ ಸಂವಿಧಾನವನ್ನು ರದ್ದು ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Advertisement

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೀಸಲಾತಿ ಶೇ.50 ಮಿತಿಯನ್ನು ರದ್ದುಗೊಳಿಸುತ್ತೇವೆ. ಈಗಾಗಲೇ ವಾಗ್ಧಾನ ಮಾಡಿದಂತೆ ದೇಶದಲ್ಲಿ ಜಾತಿ ಮತ್ತು ಆರ್ಥಿಕ ಸಮೀಕ್ಷೆಯನ್ನು ಮಾಡಲು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಇದರಿಂದ ದಲಿತರು, ಬುಡಕಟ್ಟು, ಬಡವರು, ಸಾಮಾನ್ಯ ವರ್ಗದವರು ಮತ್ತು ಇತರ ಹಿಂದುಳಿದ ವರ್ಗದವರಿಗೆ ಅನುಕೂಲವಾಗಲಿದೆ ಎಂದು ಹೇಳಿಕೊಂಡಿದ್ದಾರೆ.

ದೇಶದ ಒಟ್ಟು ಜನಸಂಖ್ಯೆಯ ಪೈಕಿ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯದವರು ಇದ್ದಾರೆ. ಆದರೆ ಅವರು ಖಾಸಗಿ ಆಸ್ಪತ್ರೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಕಾರ್ಪೊರೇಟ್‌ ಸಂಸ್ಥೆಗಳು, ಮಾಧ್ಯಮಗಳಲ್ಲಿ ಈ ವರ್ಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ಈ ವರ್ಗದವರಿಗೆ ಇಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಈ ಎಲ್ಲ ಸಮುದಾಯದವರು ಸಣ್ಣ ವ್ಯಾಪಾರಿಗಳು, ರೈತರು, ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಅಸಮಾನತೆ: ನರೇಂದ್ರ ಮೋದಿ ಆಡಳಿತದಲ್ಲಿ ದೇಶದ ಶೇ.70 ಮಂದಿಗೆ ಸೇರಿದ ಸಂಪತ್ತು ಕೇವಲ 22 ಮಂದಿ ಶ್ರೀಮಂತರ ಪಾಲಾಗಿದೆ. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಜಾತಿ ಮತ್ತು ಆರ್ಥಿಕ ಸಮೀಕ್ಷೆ ನಡೆಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next