ನವದೆಹಲಿ: ‘ಮಹಾತ್ಮ ಗಾಂಧಿಯ ಹಂತಕನನ್ನು ದೇಶಭಕ್ತ ಎಂದು ಕರೆಯುವ ಮೂಲಕ ಬಾಪುವಿಗೆ ಅವಮಾನ ಮಾಡಿರುವ ಸಾಧ್ವಿ ಪ್ರಜ್ಞಾ ಸಿಂಗ್‌ರನ್ನು ನಾನೆಂದಿಗೂ ಕ್ಷಮಿಸುವುದಿಲ್ಲ.’ ನಾಥೂರಾಂ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದು ವಿವಾದಕ್ಕೆ ನಾಂದಿಹಾಡಿರುವ ಭೋಪಾಲ್ನ ಬಿಜೆಪಿ ಅಭ್ಯರ್ಥಿಯ ಹೇಳಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು ಹೀಗೆ. ಸಾಧ್ವಿ ಹೇಳಿಕೆ ನೀಡಿದ ಮಾರನೇ ದಿನ ಅಂದರೆ ಶುಕ್ರವಾರ ನ್ಯೂಸ್24 ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರು ಈ ಮಾತುಗಳನ್ನು ಆಡಿದ್ದಾರೆ.
ಲೋಕಸಭೆ ಚುನಾವಣೆಯ ಕೊನೇ ಹಂತದ ಮತದಾನಕ್ಕೆ ಬಹಿರಂಗ ಪ್ರಚಾರ ಅಂತ್ಯಗೊಂಡ ದಿನವೇ ಮಧ್ಯಪ್ರದೇಶದಲ್ಲಿ ರ್ಯಾಲಿ ನಡೆಸಿದ ಮೋದಿ, ಬಳಿಕ ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಸಾಧ್ವಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಗಾಂಧಿ ಅಥವಾ ಗೋಡ್ಸೆ ಬಗ್ಗೆ ನೀಡಿರುವ ಹೇಳಿಕೆಯು ಸರಿಯಾದದ್ದಲ್ಲ. ಅದು ಖಂಡನೀಯ. ಸುಸಂಸ್ಕೃತ ಸಮಾಜದಲ್ಲಿ ಈ ರೀತಿಯ ಭಾಷೆಯನ್ನು ಒಪ್ಪಿಕೊಳ್ಳಲಾಗದು. ಈ ರೀತಿ ಆಲೋಚನೆಯೂ ತಪ್ಪು. ಹೀಗಾಗಿ, ಯಾರು ಇಂಥ ತಪ್ಪುಗಳನ್ನು ಮಾಡುತ್ತಿದ್ದಾರೋ, ಅವರು ನೂರು ಬಾರಿ ಯೋಚಿಸಬೇಕು. ತಮ್ಮ ಹೇಳಿಕೆ ಬಗ್ಗೆ ಸಾಧ್ವಿ ಕ್ಷಮೆ ಕೇಳಿದ್ದರೂ, ನಾನಂತೂ ಹೃದಯಪೂರ್ವಕವಾಗಿ ಅವರನ್ನು ಕ್ಷಮಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ಗುರುವಾರ ಮಧ್ಯಪ್ರದೇಶದಲ್ಲಿ ನಡೆದ ರೋಡ್‌ಶೋ ವೇಳೆ ಮಾತನಾಡಿದ್ದ ಸಾಧ್ವಿ, ‘ನಾಥೂರಾಂ ಗೋಡ್ಸೆ ದೇಶಭಕ್ತರಾಗಿದ್ದರು, ಮುಂದೆಯೂ ಆಗಿರುತ್ತಾರೆ. ಅವರನ್ನು ಭಯೋತ್ಪಾದಕ ಎಂದು ಕರೆಯುವವರಿಗೆ ಈ ಚುನಾವಣೆಯಲ್ಲಿ ತಕ್ಕ ಉತ್ತರ ಸಿಗಲಿದೆ’ ಎಂದು ಹೇಳಿದ್ದರು. ಈ ಹೇಳಿಕೆಗೆ ಭಾರೀ ಆಕ್ಷೇಪ ವ್ಯಕ್ತವಾಗಿ, ವಿವಾದದ ಬಿರುಗಾಳಿ ಎಬ್ಬಿಸಿದ ಹಿನ್ನೆಲೆಯಲ್ಲಿ, ಕೊನೆಗೆ ಸಾಧ್ವಿ ಕ್ಷಮೆ ಕೋರಿದ್ದರು.
ಈ ಬಾರಿ 300+ ಖಚಿತ: ಶುಕ್ರವಾರ ಮಧ್ಯಪ್ರದೇಶದ ಖರ್ಗೋನೆಯಲ್ಲಿ ಚುನಾವಣಾ ಪ್ರಚಾರ ರ್ಯಾಲಿ ನಡೆಸಿ ಮಾತನಾಡಿದ ಮೋದಿ, ಈ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 300ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ನನ್ನನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿಸಲು ನಿರ್ಧರಿಸಿರುವುದಕ್ಕೆ ನಿಮಗೆಲ್ಲ ಧನ್ಯವಾದಗಳು. ಭಾನುವಾರ ನೀವು ಹಕ್ಕು ಚಲಾಯಿಸುವ ಮೂಲಕ ಹೊಸ ಇತಿಹಾಸ ಬರೆಯಲಿದ್ದೀರಿ. ಹಲವು ದಶಕಗಳ ಬಳಿಕ ಜನರು ಸತತ ಎರಡನೇ ಬಾರಿಗೆ ಬಹುಮತದ ಸರ್ಕಾರವನ್ನು ಆಯ್ಕೆ ಮಾಡುತ್ತಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಕಛ್ನಿಂದ ಕಾಮರೂಪ್‌ವರೆಗೆ ಇಡೀ ದೇಶವೇ ‘ಅಬ್ ಕೀ ಬಾರ್ 300 ಪಾರ್, ಫಿಕ್ ಏಕ್ ಬಾರ್ ಮೋದಿ ಸರ್ಕಾರ್’ ಎಂದು ಹೇಳುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 130 ಕೋಟಿ ಭಾರತೀಯರ ಆಯ್ಕೆಯಾಗಿದೆ’ ಎಂದೂ ಹೇಳಿದ್ದಾರೆ.
ಪ್ರಧಾನಿ ಮೋದಿ ರ್ಯಾಲಿ ಅಂತ್ಯ
ಯಾವ ವಿಚಾರವನ್ನೆತ್ತಿಕೊಂಡು ಪ್ರಧಾನಿ ಮೋದಿ ಲೋಕಸಭೆ ಚುನಾವಣೆಯ ಪ್ರಚಾರ ಕಾರ್ಯವನ್ನು ಆರಂಭಿಸಿದ್ದರೋ, ಅದೇ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಅವರು ತಮ್ಮ ಪ್ರಚಾರಕ್ಕೆ ಮಧ್ಯಪ್ರದೇಶದ ಖಾರ್ಗೋನೆಯಲ್ಲಿ ಅಂತ್ಯ ಹಾಡಿದ್ದಾರೆ. ಮಾರ್ಚ್ 28 ರಂದು ಮೇರs್ನಲ್ಲಿ ಪ್ರಚಾರ ಆರಂಭಿಸಿದ್ದ ಮೋದಿ, ಒಟ್ಟು 50 ದಿನಗಳ ಪ್ರಚಾರ ಕಾರ್ಯಕ್ಕೆ ಶುಕ್ರವಾರ ಅಂತ್ಯ ಹಾಡಿದ್ದಾರೆ. ನಮ್ಮ ಸರ್ಕಾರವು ಭೂಮಿ ಮತ್ತು ವಾಯು ಮಾರ್ಗದಲ್ಲಿ ಶತ್ರುದೇಶದ ಮೇಲೆ ದಾಳಿ ನಡೆಸಿದೆ. ಭಾರತವು ಶತ್ರುಗಳಿಂದ ಸುರಕ್ಷಿತವಾಗಿರಬೇಕು ಮತ್ತು ಭಾರತವು ಅಭಿವೃದ್ಧಿಗೊಳ್ಳಬೇಕು ಎಂದು ಮೋದಿ ಖಾರ್ಗೋನೆಯಲ್ಲಿ ಹೇಳಿದ್ದಾರೆ. ಭಯೋತ್ಪಾದನೆ ಮತ್ತು ನಕ್ಸಲ್ವಾದದ ವಿರುದ್ಧ ಹೋರಾಡಲು ನಮಗೆ ಜನರ ಬೆಂಬಲ ಸಿಕ್ಕಿದೆ. ಉಗ್ರರನ್ನು ಅವರ ಅಡಗುತಾಣಕ್ಕೇ ತೆರಳಿ ಹತ್ಯೆಗೈದಿದ್ದೇವೆ ಎಂಬ ವಿಚಾರಗಳನ್ನು ಮೋದಿ ಪುನರುಚ್ಚರಿಸಿದ್ದಾರೆ.