ಮಂಗಳೂರು: ದಕ್ಷಿಣ ಕನ್ನಡ ಕ್ಷೇತ್ರದಿಂದ ನಿರಂತರ 3ನೇ ಬಾರಿಗೆ ಗೆಲುವು ಸಾಧಿಸಿರುವ ನಳಿನ್ ಕುಮಾರ್ ಕಟೀಲು ಅವರಿಗೆ ಈ ಬಾರಿಯ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ದೊರಯುವುದೇ? ಹೀಗೊಂದು ಪ್ರಶ್ನೆ ಮತ್ತು ಸಾಧ್ಯಾಸಾಧ್ಯತೆಯ ಚರ್ಚೆ ಈಗ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ, ಪಕ್ಷದ ವಲಯದಲ್ಲಿ ಆರಂಭವಾಗಿದೆ.
ನಳಿನ್ ಅವರಿಗೆ ಸಚಿವ ಸ್ಥಾನದ ಕುರಿತಂತೆ ಇತ್ತೀಚೆಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರು ಚುನಾವಣಾ ಪ್ರಚಾರದ ಸಂದರ್ಭ ಮಂಗಳೂರಿಗೆ ಬಂದಿದ್ದ ವೇಳೆ ಸುಳಿವು ನೀಡಿದ್ದರು. ಆ ದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಅವಧಿಯಲ್ಲಿ ನಳಿನ್‌ಗೆ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಹೊಣೆಗಾರಿಕೆ ಲಭಿಸಲಿದೆ ಎಂದಿದ್ದರು.
ನಳಿನ್ ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ಪ್ರಭಾವಿ ನಾಯಕರ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಕೇರಳದ ಸಹಪ್ರಭಾರಿಯಾಗಿ ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಜತೆಗೂ ನಿಕಟವಾಗಿದ್ದಾರೆ.
ಇನ್ನೊಂದೆಡೆ ಚುನಾವಣಾ ಸಂದರ್ಭದಲ್ಲಿ ಮಂಗಳೂರಿನಲ್ಲಿ ಆಯೋಜನೆ
ಗೊಂಡಿದ್ದ ಮೋದಿಯವರ ಬೃಹತ್ ರ್ಯಾಲಿಯ ಯಶಸ್ಸು ಕೂಡ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಮೋದಿ ಮಂಗಳೂರಿಗೆ ಬಂದಾಗೆಲ್ಲ ರ್ಯಾಲಿಯಲ್ಲಿ ಸೇರಿದ ಭಾರೀ ಜನಸ್ತೋಮ ಮತ್ತು ದೊರೆತ ಅಭೂತಪೂರ್ವ ಸ್ವಾಗತ ಸ್ವತಃ ಮೋದಿಯವರಿಗೆ ತೃಪ್ತಿ ತಂದಿದೆ. ಇದನ್ನೆಲ್ಲ ಗಮನಿಸುವಾಗ ನಳಿನ್‌ಗೆ ಸಚಿವ ಸ್ಥಾನದ ಸಾಧ್ಯತೆ ಹೆಚ್ಚಿದೆ.
ನಳಿನ್‌ಗೆ ಸಚಿವ ಸ್ಥಾನದ ಮಾತು ಈ ಹಿಂದಿನ ಅವಧಿಯಲ್ಲೂ ಕೇಳಿ ಬಂದಿತ್ತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಅವರಿಗೆ ಸಚಿವ ನೀಡುವ ವಿಚಾರ ಪಕ್ಷದ ಉನ್ನತ ಮಟ್ಟದಲ್ಲಿ ಚರ್ಚೆಗೆ ಬಂದಿತ್ತು. ಈ ಹಿಂದೆ ಜಿಲ್ಲೆಯಿಂದ ಜನಾರ್ದನ ಪೂಜಾರಿ, ಧನಂಜಯ ಕುಮಾರ್ ಸಚಿವರಾಗಿದ್ದರು. ಜಿಲ್ಲೆಯವರೇ ಆದ ಸದಾನಂದ ಗೌಡ 2014ರಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಆಯ್ಕೆಯಾಗಿ, ಪ್ರಸ್ತುತ ಕೇಂದ್ರ ಸಚಿವರಾಗಿದ್ದಾರೆ.