ಮಡಿಕೇರಿ/ಉಡುಪಿ: “ನರೇಂದ್ರ ಮೋದಿ ವಿದೇಶಗಳನ್ನು ಯಾರ ಹಣದಲ್ಲಿ ಸುತ್ತುತ್ತಿದ್ದಾರೆ? ಅವರು ಸ್ವಂತ ದುಡ್ಡಲ್ಲಿ ಓಡಾಡ್ತಾರಾ? ನಾವು ಕೂಡ ಸರಕಾರಿ ಕಾರ್ಯಕ್ರಮಕ್ಕೆ ಓಡಾಟ ಮಾಡುತ್ತಿದ್ದೇವೆ’. ಸರ್ಕಾರದ ಹಣದಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂಬ ಪ್ರತಿಪಕ್ಷಗಳ ಟೀಕೆಗೆ ಸಿಎಂ
ಸಿದ್ದರಾಮಯ್ಯ ನೀಡಿದ ಉತ್ತರವಿದು.
ಉಡುಪಿಯಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ಅಮಿತ್ ಶಾ ಗೌಪ್ಯ ಸಭೆ ಮಾಡಲಿ. ನಾವು ಸೂಕ್ತ ಸಮಯದಲ್ಲಿ ನಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಅಮಿತ್ ಶಾಗೆ ಸೋಲಿನ ಭಯ ಆರಂಭವಾಗಿದೆ. ಉಪಚುನಾವಣೆಯಲ್ಲೇ ರಾಜ್ಯದ ಫಲಿತಾಂಶದ ದಿಕ್ಸೂಚಿ ಗೊತ್ತಾಗಿದೆ. ಶಾರ ಯಾವ ತಂತ್ರ, ರಣತಂತ್ರವೂ ನಡೆಯುವುದಿಲ್ಲ. ಕರ್ನಾಟಕದ ಮತದಾರರು ಕಾಂಗ್ರೆಸ್ ಪಕ್ಷವನ್ನೇ ಗೆಲ್ಲಿಸುತ್ತಾರೆ ಎಂದರು.
ನಾವು ಏನು ಎಂಬುದನ್ನು ಚುನಾವಣೆ ವೇಳೆ ತೋರಿಸುತ್ತೇವೆ ಎಂದು ದೇವೇಗೌಡರು ಹೇಳುತ್ತಿದ್ದಾರಲ್ಲ ಎಂದು ಪ್ರಶ್ನಿಸಿದಾಗ, “ಗೌಡರನ್ನು ಬಹಳ ವರ್ಷಗಳಿಂದ ನೋಡಿದ್ದೇನೆ. ಪದೇಪದೆ ತೋರಿ ಸೋದಕ್ಕೆ ಏನಿದೆ? ಅವರ ಜತೆಗಿದ್ದೂ ಬಹಳ ನೋಡಿದ್ದೇನೆ? ವಿರೋಧ ಪಕ್ಷದಲ್ಲಿದ್ದೂ ನೋಡಿದ್ದೇನೆ’ ಎಂದು ಸಿದ್ದರಾಮಯ್ಯ ಕುಟುಕಿದರು.
ರಾಜ್ಯದ ಹಣಕಾಸು ಸ್ಥಿತಿ ಉತ್ತಮ: ಬಳಿಕ ಮಡಿಕೇರಿಯಲ್ಲಿ ನಡೆದ ಸರಕಾರದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಣಕಾಸಿನ ಸ್ಥಿತಿ ಉತ್ತಮವಾಗಿದೆ. 2012-13ನೇ ಸಾಲಿನಲ್ಲಿ 98 ಸಾವಿರ ಕೋಟಿ ರೂ.ಗಳ ಬಜೆಟ್‌ನ್ನು ಮಂಡಿಸಲಾಗಿತ್ತು. ಈ ಮೊತ್ತ 2017-18ನೇ ಸಾಲಿನ ಬಜೆಟ್‌ನಲ್ಲಿ 1.86 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. ಪ್ರಸ್ತುತ ಫೆಬ್ರವರಿಯಲ್ಲಿ ಮಂಡಿಸಲಿರುವ ಬಜೆಟ್ ಮೊತ್ತ 2.56 ಲಕ್ಷ ಕೋಟಿ ರೂ. ಗಳಾಗಿದ್ದು, ಎಲ್ಲಾ ಪ್ರಗತಿ ಕಾರ್ಯಕ್ರಮಗಳ ನಡುವೆಯೂ ಆರ್ಥಿಕ ಸ್ಥಿತಿ ಸುಭದ್ರವಾಗಿದೆ. ಆದರೆ, ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಅರಿವಿಲ್ಲದ ಅಜ್ಞಾನಿಗಳು ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಟೀಕೆ ಮಾಡುತ್ತಿದ್ದಾರೆ. ಒಂದು ರಾಜ್ಯ ಅಭ್ಯುದಯವಾಗಬೇಕಾದರೆ ಸಾಲ ಮಾಡುವ ಅನಿವಾರ್ಯತೆ ಉಂಟಾಗುತ್ತದೆ. ಅಷ್ಟಕ್ಕೂ, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ಬೇರೆ ರಾಜ್ಯಗಳ ಮೇಲೆ, ದೇಶದ ಮೇಲೆ ಸಾಲ ಇಲ್ಲವೆ ಎಂದು ಪ್ರಶ್ನಿಸಿದರು.
ನನ್ನ ಆಡಳಿತ ತೃಪ್ತಿ ತಂದಿದೆ: “ಮಾಜಿ ಸಿಎಂ ದೇವರಾಜ ಅರಸು ಅವರ ನಂತರ ಮುಖ್ಯಮಂತ್ರಿ ಅಧಿಕಾರಾವಧಿಯನ್ನು 5 ವರ್ಷ ಪೂರ್ಣಗೊಳಿ ಸುವ ಅವಕಾಶ ನನಗೆ ಸಿಕ್ಕಿದ್ದು, ನನ್ನ ಆಡಳಿತ ತೃಪ್ತಿ ತಂದಿದೆ. ಪ್ರತಿಯೊಬ್ಬರಿಗೂ ಎರಡು ಹೊತ್ತು ಊಟ ಮಾಡುವ ಹಕ್ಕಿದೆ. ಹಸಿವು ಮುಕ್ತ ಕರ್ನಾಟಕ ನಿರ್ಮಿಸಬೇಕೆನ್ನುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆಗೆ ಆದ್ಯತೆ ನೀಡಲಾುತು. ಪ್ರತಿ ಕುಟುಂಬಕ್ಕೆ 7 ಕೆ.ಜಿ.ಅಕ್ಕಿಯನ್ನು ಉಚಿತ ವಾಗಿ ನೀಡುವ ಯೋಜನೆ ದೇಶದ ಇತರ ಯಾವುದೇ ರಾಜ್ಯಗಳಲ್ಲೂ ಇಲ್ಲ’ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಟ್ವಿಟರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಆಹಾರ ಪದ್ಧತಿ ವಿಚಾರದಲ್ಲಿ ಯಾರೂ, ಯಾರನ್ನೂ ಪ್ರಶ್ನಿಸುವಂತಿಲ್ಲ. ಏನು ತಿನ್ನಬೇಕು, ಯಾವ ಬಟ್ಟೆ ತೊಡಬೇಕು ಎನ್ನುವ ಬಗ್ಗೆ ಇನ್ನೊಬ್ಬರ ಸಲಹೆಯ ಅಗತ್ಯವಿಲ್ಲ ಎಂದರು.