ಹೊಸದಿಲ್ಲಿ : ಈ ಬಾರಿಯ 2018ರ ಬಜೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ದೇಶದ ಪ್ರತಿಯೋರ್ವ ನಾಗರಿಕರಿಗೆ 5 ಲಕ್ಷ ರೂ. ವರೆಗೆ ಆರೋಗ್ಯ ವಿಮೆಯನ್ನು ಕಲ್ಪಿಸಲಿದೆ ಎಂಬುದಾಗಿ ಹಿಂದಿ ದೈನಿಕವೊಂದು ವರದಿ ಮಾಡಿದೆ.
ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡಿಸಲಿರುವ ವಿತ್ತ ಸಚಿವ ಅರುಣ್ ಜೇತ್ಲಿ ಅವರು ಆರೋಗ್ಯ ವಿಮೆ ಕ್ಷೇತ್ರದಲ್ಲಿನ ಕೇಂದ್ರ ಪ್ರವರ್ತಿತ ಯೋಜನೆಯಡಿ ದೇಶದ ಪ್ರತಿಯೋರ್ವ ನಾಗರಿಕರಿಗೆ 5,000 ರೂ. ವರೆಗೆ ಆರೋಗ್ಯ ವಿಮೆಯನ್ನು ಕಲ್ಪಿಸಲಿದ್ದಾರೆ ಎಂದು ಹಿಂದಿ ದೈನಿಕ “ಪ್ರಭಾತ್ ಖಬರ್’ ವರದಿ ಹೇಳಿದೆ.
ಕೇಂದ್ರ ಪ್ರವರ್ತಿತ ಯೋಜನೆಗಳಿಗೆ ಕೇಂದ್ರ ಸರಕಾರ ಬಹುಪಾಲ ಹಣವನ್ನು ಒದಗಿಸುತ್ತದೆಯಾದರೆ ರಾಜ್ಯ ಸರಕಾರಗಳು ನಿಗದಿಯಾಗುವ ತಮ್ಮ ಪಾಲನ್ನು ನೀಡಬೇಕಾಗುವುದು.
ಪ್ರಸಾವಿತ ಆರೋಗ್ಯ ವಿಮೆಯ ಶೇ.60ರಷ್ಟು ಖರ್ಚನ್ನು ಕೇಂದ್ರ ಸರಕಾರ ಭರಿಸಲಿದೆ ಮತ್ತು ರಾಜ್ಯ ಸರಕಾರಗಳು ಶೇ.40ರಷ್ಟನ್ನು ಭರಿಸಬೇಕಾಗುವುದು ಎಂದು ವರದಿ ತಿಳಿಸಿದೆ.
ಈ ಆರೋಗ್ಯ ವಿಮಾ ಯೋಜನೆಯನ್ನು ಹೊರತರಲು ಕೇಂದ್ರ ಸರಕಾರ ಟ್ರಸ್ಟ್ ರೂಪಿಸಲಿದೆ. ಇದರಡಿ ಪ್ರತಿಯೋರ್ವ ಪ್ರಜೆಗೆ 3ರಿಂದ 5 ಲಕ್ಷ ರೂ. ಆರೋಗ್ಯ ವಿಮೆ ಕಲ್ಪಿಸಲಾಗುವುದು ಎಂದು ವರದಿ ತಿಳಿಸಿದೆ.