ನವದೆಹಲಿ:ಕೋವಿಡ್ 19 ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸಿರುವುದಾಗಿ ಪುಣೆ ಮೂಲದ ಸೀರಮ್ ಇನ್ ಟಿಟ್ಯೂಟ್ ಆಫ್ ಇಂಡಿಯಾ(ಎಸ್ ಐಐ) ತಿಳಿಸಿದ್ದು, ಮುಂದಿನ ತಿಂಗಳ ವೇಳೆಗೆ ಕೇಂದ್ರಕ್ಕೆ 10 ಕೋಟಿ ಕೋವಿಶೀಲ್ಡ್ ಡೋಸ್ ಮತ್ತು ಜುಲೈ ಅಂತ್ಯದೊಳಗೆ ಇನ್ನೂ 10ರಿಂದ 12 ಕೋಟಿ ಡೋಸ್ ಗಳನ್ನು ಒದಗಿಸುವುದಾಗಿ ಹೇಳಿದೆ.
ಇದನ್ನೂ ಓದಿ:ಗೋಕಾಕ್: ನಿಯಮ ಉಲ್ಲಂಘಿಸಿ ಮದುವೆ ನಡೆಸಿದವರಿಗೆ 20 ಸಾವಿರ ರೂ. ದಂಡ!
ಮೇ ತಿಂಗಳಿನಲ್ಲಿ 6.5 ಕೋಟಿ ಡೋಸ್ ಗಳಷ್ಟು ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಆದರೆ ಇದೀಗ ನಾವು ಜೂನ್ ತಿಂಗಳಿನಲ್ಲಿ ಉತ್ಪಾದನೆಯ ಪ್ರಮಾಣ ಹೆಚ್ಚಳ ಮಾಡಿದ್ದು, 9ರಿಂದ 10 ಕೋಟಿ ಡೋಸ್ ಗಳಷ್ಟು ಕೋವಿಶೀಲ್ಡ್ ಲಸಿಕೆಯನ್ನು ವಿತರಿಸುವುದಾಗಿ ಮಾಹಿತಿ ನೀಡಿರುವುದಾಗಿ ಪತ್ರದಲ್ಲಿ ತಿಳಿಸಿದೆ.
ದೇಶದಲ್ಲಿ ಕೋವಿಡ್ ಲಸಿಕೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಕಂಪನಿ ಉದ್ಯೋಗಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸೀರಮ್ ಇನ್ ಟಿಟ್ಯೂಟ್ ಬರೆದಿರುವ ಪತ್ರದಲ್ಲಿ ಮಾಹಿತಿ ನೀಡಿದೆ.
ದೇಶದಲ್ಲಿ ಪ್ರಸ್ತುತ ಮೇಡ್ ಇನ್ ಇಂಡಿಯಾ ಲಸಿಕೆಯಾದ ಸೀರಮ್ ಇನ್ಸ್ ಟಿಟ್ಯೂಟ್ ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ 19 ಲಸಿಕೆಯನ್ನು ಬಳಸಲಾಗುತ್ತಿದೆ. ಈಗಾಗಲೇ ರಷ್ಯಾದ ಸ್ಫುಟ್ನಿಕ್ v ಲಸಿಕೆಯನ್ನು ತುರ್ತಾಗಿ ಬಳಸಲು ಡಿಸಿಜಿಐ ಅನುಮತಿ ನೀಡಿದ್ದು, ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಸ್ಫುಟ್ನಿಕ್ ಲಸಿಕೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.