ಶಿವಮೊಗ್ಗ: ಪೊಲೀಸ್ ವ್ಯವಸ್ಥೆಯಲ್ಲಿ ಒಂದಷ್ಟು ಬದಲಾವಣೆ ಮಾಡುವ ಕೆಲಸವಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಒಂದು ನಂತರವೇ ವರ್ಗಾವಣೆ ಮಾಡುವುದು, ಇದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಒಂದೇ ಠಾಣೆಯಲ್ಲಿ ಐದಕ್ಕಿಂತ ಹೆಚ್ಚಿನ ವರ್ಷ ಕೆಲಸ ಮಾಡಿದವರನ್ನು ವರ್ಗಾಯಿಸಲಾಗುತ್ತಿದೆ. ನೀತಿ ಸಂಹಿತೆ ಮುಗಿದ ನಂತರ ಇಲಾಖೆಯ ಮತ್ತಷ್ಟು ಪರಿಶೀಲನೆ ಮಾಡುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸಿಬಿ ದಾಳಿ ನಡೆಯುತ್ತಲೇ ಇರುತ್ತದೆ. ಲೋಕಾಯುಕ್ತದ ನಂತರ ಎಸಿಬಿಯನ್ನು ಬಲ ಪಡಿಸುವ ಕೆಲಸ ಮಾಡಲಾಗಿದೆ. ಭ್ರಷ್ಟರು, ಕಾನೂನು ಬಾಹಿರವಾಗಿ ಹಣ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ನಿಧಾನವಾದರೂ ಕ್ರಮವಾಗುತ್ತದೆ ಎಂದರು.
ಇದನ್ನೂ ಓದಿ:ಒಮಿಕ್ರಾನ್ ಭೀತಿ ; ವಿಮಾನ ಸಂಚಾರ ಸ್ಥಗಿತಗೊಳಿಸಲು ಪ್ರಧಾನಿಗೆ ಕೇಜ್ರಿವಾಲ್ ಮನವಿ
ಶಿವಮೊಗ್ಗದಲ್ಲೂ ಎಫ್ಎಸ್ಎಲ್ ಲ್ಯಾಬ್ ಮಾಡುವ ಪ್ರಸ್ತಾವನೆಯಿದೆ. ರಾಜ್ಯದಲ್ಲಿ ಲಕ್ಷಾಂತರ ಕೇಸ್ ಗಳು ಇನ್ನೂ ಬಾಕಿ ಉಳಿದಿವೆ. ಈಗ ಇರುವ ಲ್ಯಾಬ್ ಗಳನ್ನು ಸಹ ಮೇಲ್ದರ್ಜೆಗೆ ಏರಿಸುವ ಕೆಲಸವನ್ನು ಸಹ ಮಾಡಲಾಗುತ್ತಿದೆ ಎಂದು ಗೃಹ ಸಚಿವರು ಹೇಳಿದರು.
ಕಲ್ಬುರ್ಗಿ ಆಯುಕ್ತರ ವಿರುದ್ಧ ವಂಚನೆ ದೂರು ವಿಚಾರವಾಗಿ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ನನಗೆ ಮಾಹಿತಿಯಿಲ್ಲ. ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.