ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಮುನಿರತ್ನ ಗೆದ್ದ ಕೂಡಲೇ ಅವರಿಗೆ ಸಚಿವ ಸ್ಥಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ನಗರದ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ , ಚುನಾವಣೆ ಮುಗಿದ ಕೂಡಲೇ ನೂರಕ್ಕೆ ನೂರರಷ್ಟು ಮುನಿರತ್ನರನ್ನು ಮಂತ್ರಿಯನ್ನಾಗಿ ಮಾಡುತ್ತೇನೆ. ಉಪ ಚುನಾವಣೆ ಮುಗಿದ ಕೂಡಲೇ ದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗುತ್ತೇನೆ ಎಂದರು.
ಈಗಾಗಲೇ ಸಂಪುಟ ವಿಸ್ತರಣೆ ಮಾಡಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಉಪ ಚುನಾವಣೆ ಮುಗಿದ ಕೂಡಲೇ ದಿಲ್ಲಿಗೆ ಹೋಗುತ್ತೇನೆ. ಸದ್ಯದಲ್ಲೇ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಉಪ ಚುನಾವಣೆಯಲ್ಲಿ 50,000 ಮತಗಳ ಅಂತರದಲ್ಲಿ ಗೆಲುವು
ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಮಾಡಲಾಗುವುದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ ಬಿಎಸ್ ವೈ, ಏನು ಬೇಕಾದರೂ ಆಗಬಹುದು. ವರಿಷ್ಠರ ಜೊತೆಗೆ ಮಾತನಾಡಿದ ಬಳಿಕ ಆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿ ಸೇರಿದ ಶಾಸಕರ ಪೈಕಿ ಚುನಾವಣೆಯಲ್ಲಿ ಗೆದ್ದ ಮಹೇಶ್ ಕುಮಟಳ್ಳಿ ಹೊರತುಪಡಿಸಿ ಉಳಿದ ಎಲ್ಲರಿಗೂ ಸಚಿವ ಸ್ಥಾನ ನೀಡಲಾಗಿದೆ. ಇದೀಗ ಮುನಿರತ್ನ ಅವರಿಗೂ ಸಚಿವ ಸ್ಥಾನ ನೀಡುವ ಭರವಸೆಯನ್ನು ಸಿಎಂ ಯಡಿಯೂರಪ್ಪ ನೀಡುದ್ದಾರೆ.