Advertisement

ಹಠಕ್ಕೆ ಮತ್ತೆ ಮತ್ತೆ ಬಲಿ ರಾಜ್ಯದ ಸ್ಥಿತಿ ಗಂಭೀರ

06:00 AM Nov 16, 2017 | |

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಖಾಸಗಿ ವೈದ್ಯರ ಜಟಾಪಟಿ ಮೂರನೇ ದಿನ ಪೂರೈಸಿದ್ದು, ಬುಧವಾರ ರಾಜ್ಯದಲ್ಲಿ ಎರಡು ಹಸುಗೂಸುಗಳು, ಬಿಜೆಪಿಯ ಮುಖಂಡರೊಬ್ಬರು ಸೇರಿದಂತೆ ಮತ್ತೆ 11 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ವೈದ್ಯರ ಪ್ರತಿಭಟನೆಯಿಂದಾಗಿ ಜೀವ ಕಳೆದುಕೊಂಡವರ ಸಂಖ್ಯೆ 25ಕ್ಕೇರಿದೆ.

Advertisement

ಇದಷ್ಟೇ ಅಲ್ಲ, ಗುರುವಾರದಿಂದ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗದ ಸೇವೆ ಸ್ಥಗಿತ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಗುವ ಎಲ್ಲ ಆತಂಕಗಳೂ ಸೃಷ್ಟಿಯಾಗಿವೆ. ಈ ನಡುವೆಯೇ ರಾಜ್ಯ ಸರ್ಕಾರ ಎಲ್ಲ ಸರ್ಕಾರಿ ವೈದ್ಯ ಮತ್ತು ಸಿಬ್ಬಂದಿಯ ರಜೆ ಕಡಿತಗೊಳಿಸಿ ಗುರುವಾರದಿಂದಲೇ ಸೇವೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಮೂರನೇ ದಿನವಾದ ಬುಧವಾರವೂ ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಸಾರ್ವಜನಿಕರು ಚಿಕಿತ್ಸೆ ಸಿಗದೇ ಪರದಾಡಿದರು. ಹುಬ್ಬಳ್ಳಿಯಲ್ಲಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ಅವರು ಸಾವನ್ನಪ್ಪಿದ್ದಾರೆ. ಬಿಜೆಪಿ ಮುಖಂಡ ಹಾಗೂ ಮಹಾನಗರ ಪಾಲಿಕೆಯ ಮಾಜಿ ಸದಸ್ಯರೂ ಆಗಿರುವ ನಾಗಶೆಟ್ಟಿಕೊಪ್ಪ ನಿವಾಸಿ ಹಳಾÂಳ ಮೃತಪಟ್ಟವರು. ಮಧ್ಯಾಹ್ನ 3.30ರ ವೇಳೆಗೆ ಹೃದಯಾಘಾತವಾಗಿದ್ದು, ಹುಬ್ಬಳ್ಳಿಯ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಯಿತು. ಆದರೆ ಅಲ್ಲಿನ ವೈದ್ಯರು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದರು. ಹೇಗಾದರೂ ಮಾಡಿ ಜೀವ ಉಳಿಸಿ ಎಂದು ಅವರ ಕುಟುಂಬ ಸದಸ್ಯರು ಮನವಿ ಮಾಡಿದರೂ ಕಿವಿಗೊಟ್ಟಿಲ್ಲ. ಕಡೆಗೆ ಕಿಮ್ಸ್‌ನತ್ತ ಕರೆದೊಯ್ಯುವಾಗ ಚನ್ನಬಸಪ್ಪ ಸಾವನ್ನಪ್ಪಿದ್ದಾರೆ.

ಇನ್ನುಳಿದಂತೆ, ಕೊಪ್ಪಳದ ಕುಷ್ಠಗಿ ತಾಲೂಕಿನ ಕಡಿವಾಲ ಗ್ರಾಮದ ಮುತ್ತುರಾಜ ಗಡಾದ(5), ಹಾವೇರಿಯ ಜೀವನ್‌ ಹೀರೇಮಠ(4ತಿಂಗಳು), ಬ್ಯಾಡಗಿ ತಾಲೂಕಿನ ಕಾಗಿನೆಲೆಯ ಇಸ್ಮಾಯಿಲ್‌(5 ತಿಂಗಳು), ರಾಣೆಬೆನ್ನೂರಿನ ಕಲಾವಿದ ಕೃಷ್ಣ ಉತ್ತಮ್‌ ಸಿಂಗ್‌ ಗೂರ್ಖಾ(57) ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಭಜಂತ್ರಿ ಕಾಲೋನಿಯ ವಿಠuಲ ಭಜಂತ್ರಿ(39), ಜಮಖಂಡಿ ತಾಲೂಕಿನ ಬನಹಟ್ಟಿಯ ಈರಪ್ಪ ಮಂಟೂರ(43), ಲಯಾಖತ ಮಾಲದರ(67), ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಸಿದ್ದಪ್ಪ ಮಲ್ಲಪ್ಪ ಕುಂಬಾರ್‌(60), ಬೆಳಗಾವಿ ಜಿಲ್ಲೆ ಅಥಣಿಯ ಶ್ರೀನಿವಾಸ ಆಚಾರ್ಯ ಕುಂದರಗಿ(82) ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೊನೆಯುಸಿರೆಳೆದಿದ್ದಾರೆ. ಇನ್ನು ಗೋಕಾಕಿನ ತಪಶಿ ಗ್ರಾಮದ ದೊಡ್ಡವ್ವ ಮುತ್ತೆಪ್ಪ  ಕೊಂಕಣಿಯವರಿಗೆ ಯಾವುದೇ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದಿದ್ದರಿಂದ ಅವರ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ.

ರಾಜ್ಯಾದ್ಯಂತ ಒಪಿಡಿ ಸೇವೆ ಇರಲ್ಲ
ಬೆಂಗಳೂರು ಹೊರತುಪಡಿಸಿ ರಾಜ್ಯದ ಬಹುತೇಕ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ನ.14ರಿಂದಲೇ ಒಪಿಡಿ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಒಪಿಡಿ ಸೇವೆ ರದ್ದಾಗಿತ್ತು. ಮಂಗಳವಾರ ಹಾಗೂ ಬುಧವಾರ ಬಹುತೇಕ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ನೀಡಲಾಗಿತ್ತು. ಗುರುವಾರದಿಂದ ಅನಿರ್ದಿಷ್ಠಾವಧಿಗೆ ಒಪಿಡಿ ಸೇವೆ ಸ್ಥಗಿತಗೊಳಿಸಲು ಬೆಂಗಳೂರಿನ ಖಾಸಗಿ ವೈದ್ಯರ ಸಂಘಟನೆಗಳು ನಿರ್ಧರಿಸಿವೆ. ಇದರ ಪರಿಣಾಮವಾಗಿ ರಾಜಧಾನಿಯ ಸುಮಾರು 600 ಆಸ್ಪತ್ರೆ ಸೇರಿದಂತೆ ರಾಜ್ಯದ 40 ಸಾವಿರ ಖಾಸಗಿ ಆಸ್ಪತ್ರೆ, ಕ್ಲಿನಿಕ್‌, ನರ್ಸಿಂಗ್‌ ಹೋಮ್‌ಗಳಲ್ಲಿ ಹೊರರೋಗಿಗಳ ವಿಭಾಗ, ಎಲೆಕ್ಟ್ರೀವ್‌ ಸರ್ಜರಿ ವಿಭಾಗದ ಸೇವೆ ಗುರುವಾರದಿಂದ ಇರುವುದಿಲ್ಲ.

Advertisement

ಸರ್ಕಾರಿ ವೈದ್ಯರ ರಜೆ ಕಟ್‌
ಇತ್ತ, ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರದ ಅಧೀನದಲ್ಲಿ ಆರೋಗ್ಯ ಸೇವೆ ಒದಗಿಸುತ್ತಿರುವ ಎಲ್ಲಾ ವೈದ್ಯರು ಮತ್ತು ವೈದ್ಯೆàತರ ಸಿಬ್ಬಂದಿಗೆ ರಜೆ ಪಡೆಯದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ತಮ್ಮ ವ್ಯಾಪ್ತಿಯ ಎಲ್ಲಾ ಆರೋಗ್ಯ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳಲು ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದೆ. ವೈದ್ಯರಿಗೆ ಹಾಗೂ ವೈದ್ಯೆàತರ ಸಿಬ್ಬಂದಿಗೆ ರಜೆ ಮಂಜೂರು ಮಾಡದಂತೆಯೂ ನಿರ್ದೇಶಿಸಲಾಗಿದೆ.

ಪ್ರತಿ ದಿನ ಪ್ರತಿಭಟನೆ
ನ.16ರಿಂದ ಪ್ರತಿ ದಿನ ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ಖಾಸಗಿ ವೈದ್ಯರ ವಿವಿಧ ಸಂಘಟನೆಗಳು ಕೆಪಿಎಂಇ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ಚಾಮರಾಜಪೇಟೆಯ  ಭಾರತೀಯ ವೈದ್ಯಕೀಯ ಸಂಘದ ಎದುರು ಶಾಂತಿಯುತ ಧರಣಿ ನಡೆಸಲು ನಿರ್ಧರಿಸಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸೇವೆ
* ತುರ್ತು ಚಿಕಿತ್ಸಾ ವಿಭಾಗ
* ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ
* ರೇಡಿಯೇಷನ್‌, ಕೀಮೋಥೆರಪಿ
* ಡಯಾಲಿಸಿಸ್‌ ಚಿಕಿತ್ಸೆ
* ಅಫಘಾತ, ತಲೆಗೆ ಗಂಭೀರ ಗಾಯವಾದಲ್ಲಿ ಅಗತ್ಯ ಚಿಕಿತ್ಸೆಖಾಸಗಿ ಆಸ್ಪತ್ರೆಗಳಲ್ಲಿ ಈ ಸೇವೆಗಳು ಅಲಭ್ಯ
* ವೈದ್ಯರ ಕನ್‌ಸಲ್ಟೆàಷನ್‌
* ಹೊರರೋಗಿಗಳ ವಿಭಾಗ
* ಸ್ಕ್ಯಾನಿಂಗ್‌ (ತುರ್ತು ಅಗತ್ಯತೆ ಇಲ್ಲದ)
* ಎಲೆಕ್ಟ್ರಿವ್‌ ಸರ್ಜರಿಗಳು
* ಶೀತ, ಜ್ವರ, ಕೆಮ್ಮು ಸೇರಿ ದಿಢೀರ್‌ ಆರೋಗ್ಯ ಅಸ್ವಸ್ಥಕ್ಕೆ ಚಿಕತ್ಸೆ ಇರುವುದಿಲ್ಲ

ವೈದ್ಯರ ಮೇಲೆ ಮಹಿಳೆಯ ಕೂಗಾಟ
ವಿಧೇಯಕ ವಿರೋಧಿಸಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ವೈದ್ಯರು, ಬುಧವಾರ ಸಾರ್ವಜನಿಕರ ಆಕ್ರೋಶಕ್ಕೂ ತುತ್ತಾಗಬೇಕಾಯಿತು. ಆ್ಯಂಬುಲೆನ್ಸ್‌ವೊಂದರಲ್ಲಿ ನೇರವಾಗಿ ಪ್ರತಿಭಟನಾ ಸ್ಥಳಕ್ಕೆ ಬಂದ ಗಂಗಾ ಎಂಬ ಮಹಿಳೆ, ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ನನ್ನ ಮಗುವಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ವೈದ್ಯರು ಹಾಗೂ ಸರಕಾರದ ಮೇಲೆ ವಾಗ್ಧಾಳಿ ನಡೆಸಿದ ಮಹಿಳೆಯ ಮಾತುಗಳಿಂದ ಕೆಲ ಕಾಲ ತಬ್ಬಿಬ್ಟಾದ ಸಂಘಟಕರು ಅವಳನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಆದರೆ ಅವಳ ಆಕ್ರಂದನವನ್ನು ಅಲ್ಲಿ ಯಾರೂ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ.

ಅಧಿಕಾರಕ್ಕೆ ಬಂದ ಒಂದೇ ದಿನದಲ್ಲಿ ವಾಪಸ್‌
ರಾಜ್ಯ ಸರ್ಕಾರ ಈ ವಿಧೇಯಕ ಜಾರಿಗೊಳಿಸಿದಲ್ಲಿ, ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ ದಿನವೇ ಇದನ್ನು ವಾಪಸ್‌ ಪಡೆಯುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವೈದ್ಯಕೀಯ ಸಂಸ್ಥೆ ಹಾಗೂ ವೈದ್ಯರೊಂದಿಗೆ ಚರ್ಚಿಸದೇ ಇಂತಹ ತೀರ್ಮಾನಕ್ಕೆ ಬಂದಿರುವುದು ಸರಿಯಲ್ಲ ಎಂದರು. ರಾಜ್ಯ ಸರ್ಕಾರದ ಬೇಜವಾಬ್ದಾರಿ ನಿರ್ಧಾರದಿಂದಲೇ ಜನ ಸಾಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನವಕರ್ನಾಟಕ ನಿರ್ಮಾಣದ ಪರಿವರ್ತನಾ ಯಾತ್ರೆ ಗುರುವಾರ ಬೆಳಗಾವಿಯಿಂದ ಹೊರಡಲಿದೆ. ಖಾಸಗಿ ವೈದ್ಯರು ಕೆಪಿಎಂಇ ತಿದ್ದುಪಡಿ ವಿಧೇಯಕ ವಿರೋಧಿಸಿ ಅಲ್ಲಿಯೇ ಪ್ರತಿಭಟನೆ ನಡೆಸುತ್ತಿರುವುದರಿಂದ ಸಮಯವನ್ನು ಹೊಂದಿಸಿಕೊಂಡು ಅವರೆಲ್ಲರನ್ನು ಭೇಟಿ ಮಾಡುವ ಪ್ರಯತ್ನ ಮಾಡಲಿದ್ದೇನೆ ಎಂದು ಹೇಳಿದರು.

ಮುಷ್ಕರ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್‌
ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಖಾಸಗಿ ವೈದ್ಯರು ಹಾಗೂ ಸಂಘಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ, ಪ್ರತಿಭಟನೆ ವಾಪಸ್‌ ಪಡೆಯಲು ಮುಂದಾಗುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ.

ವಕೀಲರಾದ ಪಿ.ಎನ್‌ ಅಮೃತೇಶ್‌ ಹಾಗೂ ಬೆಂಗಳೂರಿನ ಆದಿನಾರಾಯಣ ಶೆಟ್ಟಿ ಎಂಬುವವರು ಈ ಅರ್ಜಿಗಳನ್ನು ಸಲ್ಲಿಸಿದ್ದು, ಗುರುವಾರವೇ ಹಂಗಾಮಿ ಮುಖ್ಯನ್ಯಾ. ಎಚ್‌.ಜಿ ರಮೇಶ್‌ ಹಾಗೂ ನ್ಯಾ. ಪಿ.ಎಸ್‌ ದಿನೇಶ್‌ಕುಮಾರ್‌ ವಿಭಾಗೀಯ ಪೀಠದ ಮುಂದೆ ಬರುವ ಸಾಧ್ಯತೆಯಿದೆ.

ವಕೀಲ ಅಮೃತೇಶ್‌ ಅವರ ಪಿಐಎಲ್‌ ಅರ್ಜಿಯಲ್ಲಿ ರಾಜ್ಯಸರ್ಕಾರ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಇಲಾಖೆ ಆಯುಕ್ತರು, ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್‌ ಹೋಮ್‌ಗಳ ಸಂಘ, ಭಾರತೀಯ ವೈದ್ಯಕೀಯ ಸಂಘ, ಭಾರತೀಯ ವೈದ್ಯಕೀಯ ಪರಿಷತ್ತನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ವಿಧೇಯಕದ ಬಗ್ಗೆ ಪ್ಲೀಸ್‌ ಆಸ್ಕ್ ಟು ಮೈ ಲೀಡರ್‌. ನನ್ನ ಮತ್ತು ನಮ್ಮ ನಾಯಕರ ಮಧ್ಯೆ ಜವಾಬ್ದಾರಿ ಇದೆ. ಏನೇ ಇರ್ಲಿ, ಅದನ್ನು ನಮ್ಮ ನಾಯಕರ ಬಳಿ ಕೇಳಿ ಅವರಿಂದಲೇ ವಿವರ ಪಡೆಯಿರಿ. ನಾನು ಸಿಎಂಗಳ ಸಚಿವ ಸಂಪುಟದಲ್ಲಿದ್ದೇನೆ. ನಿನ್ನೆ ಅವರು ಪ್ರತಿಭಟನಾ ನಿರತರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ನಾವೆಲ್ಲಾ ಒಂದೇ ಪ್ರತ್ಯೇಕವಾಗಿ ಮಾತನಾಡಲು ಬರಲ್ಲ. ಲಾಬಿಗಳ ಬಗ್ಗೆ ಮುಖ್ಯಮಂತ್ರಿಗಳೇ ಹೇಳ್ತಾರೆ. ಅವರು ಮೋಸ್ಟ್‌ ಎಕ್ಸ್‌ಪಿರೀಯನ್ಸ್‌.
– ಕೆ.ಆರ್‌. ರಮೇಶ್‌ಕುಮಾರ್‌, ಆರೋಗ್ಯ ಸಚಿವ

ಸದನದಲ್ಲಿ ವಿಧೇಯಕ ಇನ್ನೂ ಮಂಡನೆಯೇ ಆಗಿಲ್ಲ. ಈ ವಿಚಾರದಲ್ಲಿ ಏನೂ ಅಂತಿಮವಾಗಿಲ್ಲ. ಇಂಥ ಸಮಯದಲ್ಲಿ ಮುಷ್ಕರ ಮಾಡುವುದು ಸಮಂಜಸವೇ? ಆರೋಗ್ಯ ಸಚಿವರ ಜತೆ ಮಾತುಕತೆ ನಡೆಸಿ, ವೈದ್ಯ ಸಂಘಟನೆಯ ಪದಾಧಿಕಾರಿಗಳ ಜತೆಗೂ ಮತ್ತೂಮ್ಮೆ ಚರ್ಚಿಸುತ್ತೇನೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಸಚಿವ ರಮೇಶ್‌ ಕುಮಾರ್‌ ಅವರ ಮನನೊಂದ ಖಾಸಗಿ ವೈದ್ಯರು ಸ್ವಯಂಪ್ರೇರಿತವಾಗಿ ರಾಜ್ಯಾದ್ಯಂತ ಒಪಿಡಿ ಸೇವೆ ಸ್ಥಗಿತಕ್ಕೆ ನಿರ್ಧರಿಸಿದ್ದಾರೆ. ಐದು ಮಂದಿ ವೈದ್ಯರು ಸುವರ್ಣವಿಧಾನಸೌಧದ ಎದುರು ಆಮರಣಾಂತ ಉಪವಾಸ ನಡೆಸುತ್ತಿದ್ದಾರೆ.
– ಡಾ. ರವೀಂದ್ರ, ಐಎಂಎ ರಾಜ್ಯಶಾಖೆ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next