Advertisement
ಎಚ್‌ಡಿಕೆ ಕರ್ಮಭೂಮಿಯಾಗಿರುವ ಗ್ರಾಮಾಂತರದಲ್ಲಿ ಮೈತ್ರಿ ಕೈಗೂಡೀತೆ, ಡಿಕೆ ಸಹೋದರರ ಹಿಡಿತದಲ್ಲಿರುವ ಕ್ಷೇತ್ರವನ್ನು ದೋಸ್ತಿ ಪಡೆ ಕಸಿದು ಕೊಳ್ಳುವುದೇ ಎಂಬ ಲೆಕ್ಕಾಚಾರಗಳು ಮೈತ್ರಿ ಘೋಷಣೆಯ ಬೆನ್ನಲ್ಲೇ ನಡೆಯುತ್ತಿದೆ.
Related Articles
Advertisement
ಕೆಳ ಹಂತದ ಕಾರ್ಯಕರ್ತರದ್ದೇ ಪ್ರಶ್ನೆ: ಕೆಲ ತಿಂಗಳ ಹಿಂದಷ್ಟೆ ಜಿಲ್ಲೆಯಲ್ಲಿ ಬಿಜೆಪಿ-ಜೆಡಿಎಸ್ ಕಟ್ಟಾಕಟ್ಟಾ ಪೈಪೋಟಿ ನಡೆಸಿದ್ದವು. ಒಕ್ಕಲಿಗರ ಶಕ್ತಿ ಕೇಂದ್ರದಲ್ಲಿ ಕಮಲ ಅರಳಿಸುತ್ತೇವೆ ಎಂದು ಬಿಜೆಪಿ ರಾಜ್ಯ ನಾಯಕರು ರಾಮನಗರದಲ್ಲಿ ತೊಡೆತಟ್ಟಿ ದ್ದರು. ಚನ್ನಪಟ್ಟಣದಲ್ಲಿ ಹತ್ತಾರು ವರ್ಷ ಜೆಡಿಎಸ್ ಮುಖಂಡರಾಗಿದ್ದವರು ಬಿಜೆಪಿ ಶಾಲುಹೊದ್ದು ಕುಮಾರಸ್ವಾಮಿ ವಿರುದ್ಧ ರಣಕಹಳೆ ಮೊಳಗಿಸಿದ್ದರು. ಇವರೆಲ್ಲಾ ಇದೀಗ ಜೆಡಿಎಸ್-ಬಿಜೆಪಿ ಮೈತ್ರಿಯನ್ನು ಒಪ್ಪಿ ಒಗ್ಗೂಡಿ ಕೆಲಸ ಮಾಡುವರೇ ಎಂಬುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಮೈತ್ರಿಯನ್ನು ಒಪ್ಪಿಕೊಳ್ಳಲು ಸಾಧ್ಯವೇ: ಜೆಡಿಎಸ್ -ಬಿಜೆಪಿ ಮೈತ್ರಿಯ ಬಗ್ಗೆ ಮೊದಲು ಪ್ರಸ್ತಾಪ ಮಾಡಿದ್ದೇ ಯೋಗೇಶ್ವರ್. ಮೈತ್ರಿಗೆ ನಾನು ಸಿದ್ಧ ಎಂದು ಯೋಗೇಶ್ವರ್ ಬಹಿರಂಗವಾಗಿ ಸಮ್ಮತಿಸಿದ್ದಾರೆ. ಆದರೆ, ಭೂತ್‌ಮಟ್ಟದಲ್ಲಿ ಜೆಡಿಎಸ್ ಮುಖಂಡ ಎದುರಿಗೆ ಕಟ್ಟಾಕಟ್ಟಾ ನಿಂತು ಹೋರಾಡಿದ, ಗ್ರಾಮ ಮಟ್ಟದಲ್ಲಿ ಪಕ್ಷಕ್ಕಾಗಿ ಕಾದಾಡಿ ಕೇಸುಹಾಕಿಸಿ ಕೊಂಡಿರುವ ತಳ ಹಂತದ ಕಾರ್ಯಕರ್ತರು ಈ ಮೈತ್ರಿಯನ್ನು ಒಪ್ಪಿ ಕೊಳ್ಳಲು ಸಾಧ್ಯವೇ ಎಂದು ಕಾಯ್ದುನೋಡಬೇಕಿದೆ.
ಬಲಾಬಲ: ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಕಳೆದ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಭರ್ಜರಿ ಬಹುಮತದಿಂದ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಕಾಂಗ್ರೆಸ್, ಒಂದರಲ್ಲಿ ಜೆಡಿಎಸ್, 2ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಒಟ್ಟಾರೆ 8,12,917 ಮತ ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳು 3,62,805, ಬಿಜೆಪಿ ಅಭ್ಯರ್ಥಿಗಳು 6,09,382 ಮತಗಳನ್ನು ಪಡೆದಿದ್ದಾರೆ.
ಜೆಡಿಎಸ್-ಬಿಜೆಪಿ ಮೈತ್ರಿ ಕೈಕೊಟ್ಟಿತ್ತು: 2013 ರಲ್ಲಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿದ್ದ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅನಿತಾಕುಮಾರ ಸ್ವಾಮಿ ವಿರುದ್ಧವಾಗಿ ಜೆಡಿಎಸ್ – ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಈ ಚುನಾವಣೆಯಲ್ಲಿ ಡಿ.ಕೆ. ಸುರೇಶ್ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಜೆಡಿಎಸ್ – ಬಿಜೆಪಿ ಮೈತ್ರಿ ಕೈಕೊಟ್ಟಿತ್ತು. ಇದೀಗ ಮತ್ತೆ ಜೆಡಿಎಸ್ – ಬಿಜೆಪಿ ಮೈತ್ರಿಯಾಗಿದ್ದಾರೆ.
ಗ್ರಾಮಾಂತರಕ್ಕೆ ಮೈತ್ರಿ ಅಭ್ಯರ್ಥಿ ಯಾರು..?: ಬಿಜೆಪಿ-ಜೆಡಿಎಸ್ ಈ ಬಾರಿಯ ಚುನಾವಣೆಯಲ್ಲಿ ಮೈತ್ರಿಯಾಗಿದ್ದು, ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಯಾರು ಸ್ಪರ್ಧೆ ಮಾಡಲಿದ್ದಾರೆ ಎಂಬ ಕುತೂಹಲ ಇದೀಗ ಗರಿಗೆದರಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸಹೋದರರಾಗಿರುವ ಸಂಸದ ಡಿ.ಕೆ.ಸುರೇಶ್, ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿದ್ದಾರೆ. ಇವರನ್ನು ಮಣಿಸಲು ಪ್ರಬಲ ಸ್ಪರ್ಧಿಯನ್ನೇ ಕಣಕ್ಕಿಳಿಸಬೇಕಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್-ಬಿಜೆಪಿ ಮೈತ್ರಿಕೂಟಕ್ಕೆ ಈ ಕ್ಷೇತ್ರ ಸಾಕಷ್ಟು ಮಹತ್ವದ್ದಾಗಿದ್ದು ಮೈತ್ರಿಕೂಟದ ಯಶಸ್ಸು, ವೈಫಲ್ಯ ಈ ಕ್ಷೇತ್ರದ ಫಲಿತಾಂಶದ ಮೇಲೆ ನಿರ್ಧರಿತವಾಗಲಿದೆ. ಈ ಹಿನ್ನೆಲೆಯಲ್ಲಿ ಮೈತ್ರಿಕೂಟ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಲಿದೆ ಎಂಬ ಚರ್ಚೆ ಪ್ರಾರಂಭವಾಗಿದೆ.
ಗ್ರಾಮಾಂತರ ಮೈತ್ರಿ ಪಕ್ಷದಲ್ಲಿ ಯಾರಿಗೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಾನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಹಾಗಾದರೆ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟು ಕೊಟ್ಟರೆ ಯಾರು ಅಭ್ಯರ್ಥಿ ಎಂಬ ಪ್ರಶ್ನೆ ಮೂಡಿದೆ. ಇನ್ನು ಎಂಎಲ್‌ಸಿ ಯೋಗೇಶ್ವರ್ ಹೈಕಮಾಂಡ್ ಹೇಳಿದರೆ ಸ್ಪರ್ಧೆಗೆ ಸಿದ್ದ ಎಂದಿದ್ದಾರೆ. ಇತ್ತ ಜೆಡಿಎಸ್‌ನ ಮಾಜಿ ಶಾಸಕ ಎ.ಮಂಜು ಮೈತ್ರಿ ಅಭ್ಯರ್ಥಿಯಾಗಲು ಒಪ್ಪಿದ್ದಾರೆ. ಗ್ರಾಮಾಂತರ ಕ್ಷೇತ್ರ ಜೆಡಿಎಸ್‌ಗಾ, ಬಿಜೆಪಿಗಾ, ಅಭ್ಯರ್ಥಿ ಯಾರು ಎಂಬುದು ಸದ್ಯಕ್ಕೆ ನಿಗೂಢವಾಗೇ ಉಳಿದಿದೆ.
-ಸು.ನಾ.ನಂದಕುಮಾರ್