ಹೊಸದಿಲ್ಲಿ: ದೇಶದ ಮೂಲೆ ಮೂಲೆಯಲ್ಲಿರುವ ಅಕ್ರಮ ನುಸುಳು ಕೋರರನ್ನು ಕೇಂದ್ರ ಗುರುತಿಸಿ, ಗಡಿಪಾರು ಮಾಡಲಿದೆ. ಅದಕ್ಕಾಗಿ ರಾಷ್ಟ್ರಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿಸ್ತರಿಸಲು ಬದ್ಧವಾಗಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ಜಾವೇದ್ ಅಲಿ ಖಾನ್ ಎನ್‌ಆರ್‌ಸಿಯನ್ನು ಅಸ್ಸಾಂ ಹೊರತಾಗಿ ಉಳಿದ ರಾಜ್ಯಗಳಲ್ಲಿಯೂ ಜಾರಿಗೊಳಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. “ಅಸ್ಸಾಂ ಒಪ್ಪಂದದಂತೆಯೇ ಎನ್‌ಆರ್‌ಸಿ ಇದೆ. ಅದು ಬಿಜೆಪಿಯ ಪ್ರಣಾಳಿಕೆ ಯಲ್ಲಿಯೂ ಇದೆ. ಅಂತಾರಾಷ್ಟ್ರೀಯ ನಿಯಮಗಳಿಗೆ ಅನ್ವಯವಾಗಿ ನುಸುಳು ಕೋರರನ್ನು ಗಡಿಪಾರು ಮಾಡ ಲಾಗುತ್ತದೆ’ ಎಂದಿದ್ದಾರೆ.
ಶಾಶ್ವತ ಮುಂದುವರಿಕೆ ಇಲ್ಲ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಯನ್ನು ಶಾಶ್ವತವಾಗಿ ಮುಂದುವರಿಸುವ ಇರಾದೆ ಸರಕಾರಕ್ಕೆ ಇಲ್ಲ. ಅದು ಕೇವಲ ಬಡವರಿಗಾಗಿ ಇರುವ ಯೋಜನೆಯಾಗಿದೆ. ಮೋದಿ ಸರಕಾರದ ವಿಸ್ತೃತ ಗುರಿಯೇ ಬಡತನ ನಿವಾರಣೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ವಜಾ: 5 ವರ್ಷಗಳ ಅವಧಿಯಲ್ಲಿ ಗೃಹ ಖಾತೆಯ ವ್ಯಾಪ್ತಿ ಯಲ್ಲಿ 1,083 ಅಧಿಕಾರಿಗಳನ್ನು ವಜಾ ಮಾಡಲಾಗಿದೆ. ಅಧಿಕಾರಿಗಳಲ್ಲಿ ಸರಿಯಾದ ರೀತಿಯಲ್ಲಿ ಕಾರ್ಯತತ್ಪರತೆ ತೋರದೇ ಇರುವುದು ಮತ್ತು ಪ್ರಾಮಾ ಣಿಕತೆಯಿಂದ ಇಲ್ಲದೇ ಇರುವ ಕಾರಣ ಗಳಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ನಿತ್ಯಾನಂದ ರಾಯ್ ರಾಜ್ಯಸಭೆ ಯಲ್ಲಿ ತಿಳಿಸಿದ್ದಾರೆ.
ಎನ್‌ಐಎ ಮಸೂದೆ ಅಂಗೀಕಾರ
ಲೋಕಸಭೆಯಲ್ಲಿ ಅಂಗೀಕಾರ ಪಡೆದಿರುವ ಎನ್‌ಐಎ ವಿಧೇಯಕ ರಾಜ್ಯಸಭೆ ಯಲ್ಲಿಯೂ ಬುಧವಾರ ಅಂಗೀಕಾರಗೊಂಡಿದೆ. ಈ ಕುರಿತು ರಾಜ್ಯಸಭೆಯಲ್ಲಿ ದೀರ್ಘ ಚರ್ಚೆ ನಡೆಯಿತು. ರಾಜ್ಯಗಳ ಜತೆಗೆ ಸಹಕಾರದಿಂದ ಭಯೋತ್ಪಾದನೆ ಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯಗಳಿಗೆ ಇರುವ ಹಕ್ಕು ಕಸಿದುಕೊಳ್ಳಬಾರದು ಎಂದು ಎಂದು ಪ್ರತಿಪಕ್ಷಗಳು ಕೇಂದ್ರವನ್ನು ಒತ್ತಾಯಿಸಿದವು. ಕಾಂಗ್ರೆಸ್ ಸೇರಿದಂತೆ ಪ್ರಮುಖ ಪಕ್ಷಗಳ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದವು.