ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವಿನ ‘ಅವಹೇಳನಕಾರಿ ಕರಪತ್ರ’ ವಿವಾದ ಶುಕ್ರವಾರವೂ ಮುಂದುವರಿದಿದೆ. ಆಪ್ ಅಭ್ಯರ್ಥಿ ಆತಿಷಿ ವಿರುದ್ಧ ಕೀಳುಮಟ್ಟದಲ್ಲಿ ಟೀಕಿಸಿದ್ದ ಕರಪತ್ರದ ಹಿಂದೆ ಪೂರ್ವ ದಿಲ್ಲಿಯ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಅವರ ಕೈವಾಡವಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತೆ ಪ್ರತಿಕ್ರಿಯೆ ನೀಡಿರುವ ಗಂಭೀರ್, ‘ನನ್ನ ಮೇಲಿನ ಆರೋಪ ಸಾಬೀತಾದರೆ, ನಾನು ಸಾರ್ವಜನಿಕವಾಗಿ ನೇಣಿಗೇರಲು ಸಿದ್ಧ’ ಎಂದಿದ್ದಾರೆ. ಜತೆಗೆ, ಆರೋಪ ಸಾಬೀತುಮಾಡಲು ಆಪ್ ವಿಫಲವಾದರೆ, ಕೇಜ್ರಿವಾಲ್ ಅವರು ರಾಜಕೀಯ ತ್ಯಜಿಸಬೇಕು ಎಂಬ ಸವಾಲನ್ನೂ ಹಾಕಿದ್ದಾರೆ. ಇದರ ಜೊತೆಗೆ, ಶುಕ್ರವಾರ ಆಪ್ ನಾಯಕರ ವಿರುದ್ಧ ಮಾನಹಾನಿ ನೋಟಿಸ್ ಜಾರಿ ಮಾಡಿದ್ದಾರೆ. ಇನ್ನೊಂದೆಡೆ, ಆಪ್ ಅಭ್ಯರ್ಥಿ ಆತಿಷಿ ದಿಲ್ಲಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಗಂಭೀರ್‌ಗೆ ಮಾನಹಾನಿ ನೋಟಿಸ್ ಜಾರಿ ಮಾಡುವುದಾಗಿ ಡಿಸಿಎಂ ಸಿಸೋಡಿಯಾ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಗಂಭೀರ್ ಪರ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಮತ್ತು ವಿವಿಎಸ್ ಲಕ್ಷ್ಮಣ್ ಬ್ಯಾಟಿಂಗ್ ಮಾಡಿದ್ದಾರೆ. ಗಂಭೀರ್ ನಮಗೆ ಹಲವು ವರ್ಷಗಳಿಂದ ಗೊತ್ತು. ಅವರಿಗೆ ಮಹಿಳೆಯರ ಬಗ್ಗೆ ಗೌರವವಿದೆ. ಅವರು ಇಂಥ ಕೆಲಸ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.