ಚಿಕ್ಕಮಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚಿನ ಶೃಂಗೇರಿ ಭೇಟಿ ಬಳಿಕ ಬುಧವಾರ ಜಿಲ್ಲಾಕೇಂದ್ರಕ್ಕೆ ಆಗಮಿಸಲಿದ್ದು, ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆಯೇ ಎಂದು ಜಿಲ್ಲೆಯ ಜನತೆ ಎದುರು ನೋಡುತ್ತಿದ್ದಾರೆ.
ಒತ್ತುವರಿ ಸಮಸ್ಯೆ ಜಿಲ್ಲೆಯ ಜನತೆಯನ್ನು ಬಹುವರ್ಷಗಳಿಂದ ಕಾಡುತ್ತಿದೆ. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಕಂದಾಯ ಸಚಿವ ಆರ್.ಅಶೋಕ್ ಅವರು ಒತ್ತುವರಿ ಜಮೀನು ಭೂ ಮಾಲೀಕರಿಗೆ ಗುತ್ತಿಗೆ ನೀಡುವುದಾಗಿ ಭರವಸೆ ನೀಡಿದರು.
ಸರ್ಕಾರ ಎಷ್ಟು ಎಕರೆ ಜಮೀನು ಗುತ್ತಿಗೆ ನೀಡಲಿದೆ ಎಂಬ ಬಗ್ಗೆ ಸ್ಪಷ್ಟಪಡಿಸಿಲ್ಲ. ಈ ಸಂಬಂಧ ಸರ್ಕಾರ ರೂಪುರೇಷೆಗಳನ್ನು ಸಿದ್ಧಪಡಿಸಿದೆಯೇ? ಎಷ್ಟು ಎಕರೆವರೆಗೂ ಜಮೀನು ಗುತ್ತಿಗೆ ನೀಡಲಿದೆ. ಸರ್ಕಾರ ಕೈಗೊಂಡಿರುವ ತೀರ್ಮಾನಗಳ ಬಗ್ಗೆ ಸ್ಪಷ್ಟಪಡಿಸುವರೇ ಎಂದು ಬೆಳೆಗಾರರು ಎದುರು ನೋಡುತ್ತಿದ್ದಾರೆ. ಜಿಲ್ಲೆಯಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ಅಧಿಕವಾಗಿದ್ದು, ಕಾಡಾನೆ ದಾಳಿಗೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಭಾರೀ ಪ್ರಮಾಣದ ಬೆಳೆನಷ್ಟವಾಗಿದೆ. ಇದರಿಂದ ಬೇಸತ್ತ ಬೆಳೆಗಾರರು ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಅಂತ್ಯ ಹಾಡಬೇಕೆಂದು ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸ್ವತಃ ಮುಖ್ಯಮಂತ್ರಿಗಳೇ ಜಿಲ್ಲೆಗೆ ಆಗಮಿಸಲಿದ್ದು ಸಮಸ್ಯೆ ಪರಿಹಾರದ ಆಶ್ವಾಸನೆ ನೀಡಲಿದ್ದಾರೆಯೇ ನೋಡಬೇಕಿದೆ.
ಕೆ.ಎಸ್. ಈಶ್ವರಪ್ಪ ರಾಜೀನಾಮೆ ಬಳಿಕ ಜಿಲ್ಲಾ ಉಸ್ತುವಾರಿಗಳಿಲ್ಲದೆ ಸೊರಗುತ್ತಿದೆ. ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರಿಲ್ಲದಿರುವುದು ದೊಡ್ಡ ಸಮಸ್ಯೆಯಾಗಿದ್ದು, ಮುಂದಿನ ದಿನಗಳಲ್ಲಿ ಉಸ್ತುವಾರಿ ಸಚಿವರ ನೇಮಕ ಸುಳಿವು ಸಿಗಲಿದೆಯೇ ಎಂಬ ಕುತೂಹಲ ಕೆರಳಿಸಿದೆ.
ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು, ಪರಿಸರವನ್ನು ಹಾಳು ಮಾಡುತ್ತಿದ್ದಾರೆಂಬ ದೂರುಗಳು ಕೇಳಿ ಬರುತ್ತಿವೆ. ಸರ್ಕಾರ ವ್ಯವಸ್ಥಿತ ರೂಪರೇಷೆಗಳನ್ನು ಸಿದ್ಧಪಡಿಸಿ ಪರಿಸರ ರಕ್ಷಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಆಶ್ವಾಸನೆ ನೀಡುವ ನಿರೀಕ್ಷೆಯಲ್ಲಿ ಜನರಿದ್ದಾರೆ.
ಮಳಲೂರು ಏತ ನೀರಾವರಿ ಯೋಜನೆ ಅನೇಕ ವರ್ಷಗಳಿಂದ ನೆನಗುದಿಗೆ ಬಿದ್ದಿದೆ. ಮಸಗಲಿ ಮೀಸಲು ಅರಣ್ಯ ಒತ್ತುವರಿದಾರರ ತೆರವಿಗೆ ಜಿಲ್ಲಾಡಳಿತ ಮುಂದಾಗಿದೆ. ಸಂತ್ರಸ್ತರು ಆತಂಕದಲ್ಲಿದ್ದು ಸಂತ್ರಸ್ತ ಕುಟುಂಬದ ರಕ್ಷಣೆಗೆ ಸರ್ಕಾರ ಮುಂದಾಗಲಿದೆಯೇ ಎಂದು ಎದುರು ನೋಡುತ್ತಿದ್ದಾರೆ.
ಜಿಲ್ಲೆಯ ಜನತೆ ನಿವೇಶನ ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರಿ ಭೂಮಿ ಕೊರತೆಯಿಂದ ನಿವೇಶನ ರಹಿತರಿಗೆ ನಿವೇಶನ ನೀಡಲು ಸಾಧ್ಯವಾಗುತ್ತಿಲ್ಲ. ಒಂದೇ ಮನೆಯಲ್ಲಿ ಒಂದೆರಡು ಕುಟುಂಬ ಜೀವನ ಸಾಗಿಸುತ್ತಿವೆ. ಬಡವರಿಗೆ ನಿವೇಶನ ನೀಡಲು ಖಾಸಗಿ ಭೂಮಿ ಖರೀದಿಗೆ ಅಥವಾ ಸರ್ಕಾರಿ ಭೂಮಿ ಗುರುತಿಸಲು ಕಂದಾಯ ಅಧಿಕಾರಿಗಳಿಗೆ ಸೂಚಿಸುವರೆಂಬ ನಂಬಿಕೆ ಜನರದ್ದಾಗಿದೆ. ಒಟ್ಟಾರೆ ಜ್ವಲಂತ ಸಮಸ್ಯೆಗಳಿಂದ ಜಿಲ್ಲೆ ಬಳಲುತ್ತಿದ್ದು, ಮುಖ್ಯಮಂತ್ರಿಗಳು ಈ ಸಮಸ್ಯೆಗಳಿಗೆ ಪರಿಹಾರ ದೊರೆಕಿಸುವರೋ ಕಾದುನೋಡಬೇಕಿದೆ.