ಚನ್ನರಾಯಪಟ್ಟಣ: ಕಾಂಗ್ರೆಸ್ ಪಕ್ಷ ಎ.ಮಂಜು ಅವರನ್ನು ಹಾಸನ ಜಿಲ್ಲೆಯ ಉಸ್ತವಾರಿಯಾಗಿ ನಾಲ್ಕೂವರೆ ವರ್ಷ ಅಧಿಕಾರ ನೀಡಿತ್ತು. ಅಂದು ಜಿಲ್ಲೆಯ ಅಭಿವೃದ್ಧಿ ಮಾಡಲು ಆಗದವರು ಸಂಸದರಾಗಿ ಏನು ಮಾಡುತ್ತಾರೆ ಎಂದು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಬಿಜೆಪಿ ಅಭ್ಯರ್ಥಿ ವಿರುದ್ಧ ವಾಗ್ಧಾಳಿ ನಡೆಸಿದರು.
ಲಾಭಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ: ತಾಲೂಕಿನ ಕಸಬಾ ಹೋಬಳಿ ಶ್ರೀನಿವಾಸಪುರ ಗ್ರಾಮದಲ್ಲಿ ಮತಯಾಚನೆ ವೇಳೆ ನೆರೆದಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಬೆಲೆ ಕೊಡದೇ ತನ್ನ ವೈಯಕ್ತಿಕ ಲಾಭಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ. ಅಲ್ಲಿ ಅಧಿಕಾರ ಅನುಭವಿಸಿದ ಮೇಲೆ ಅವರ ಮುಂದಿನ ನಡೆ ಜೆಡಿಎಸ್ ಪಕ್ಷಕ್ಕೆ ಆದರೂ ಅಶ್ಚರ್ಯ ಪಡುವುದು ಬೇಡ ಎಂದು ಟೀಕಿಸಿದರು.
ನೈತಿಕತೆಯಿಲ್ಲ: ನೈತಿಕತೆ ಇಲ್ಲದವರು ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ. ಹಣ ಮಾಡಲಿಕ್ಕಾಗಿ ಚುನಾವಣಾ ಕಣದಲ್ಲಿದ್ದಾರೆ. ಅವರಿಗೆ ಸಿದ್ಧಾಂತಕ್ಕಿಂತ ತಮಗೆ ಆಗುವ ಲಾಭವನ್ನು ಲೆಕ್ಕಾಚಾರ ಮಾಡುತ್ತಿದ್ದಾರೆ. ಕುಟುಂಬ ರಾಜಕಾರಣದ ಟೀಕೆಯನ್ನು ಮುಂದಿಟ್ಟು ಕೊಂಡು ಜನರ ಬಳಿಗೆ ಬರುತ್ತಿದ್ದಾರೆ. ಆದರೆ ಜಿಲ್ಲೆಯ ಅಭಿವೃದ್ಧಿಗೆ ನನ್ನ ತಂದೆ ರೇವಣ್ಣ ಸುಮಾರು 10 ಸಾವಿರ ಕೋಟಿ ರೂ. ಅನುದಾನ ತಂದು ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸುತ್ತಿದ್ದಾರೆ ಎಂದು ಹೇಳಿದರು.
ಚುನಾವಣೆ ವೇಳೆ ಪಾದಪೂಜೆ ಮಾಡುವ ಬದಲಾಗಿ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ ಪಕ್ಷದವರನ್ನು ನಿಮ್ಮ ಪಾದದಿಂದ ಒದೆಯುವ ಬದಲಾಗಿ ಜಿಲ್ಲೆಯಲ್ಲಿ ಪಾದಯಾತ್ರೆ ಮಾಡಿದರೆ ಇಂದು ನಿಮಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ನಿಮ್ಮಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರು ಮೂಲೆ ಗುಂಪಾದರು. ಕಾರ್ಯಕರ್ತರು ಬೀದಿಪಾಲಾದರು ಎಂದು ಎ.ಮಂಜು ವಿರುದ್ಧ ಕಿಡಿಕಾರಿದರು.
ಉದ್ಯೋಗ ಸೃಷ್ಟಿ: ಕೆಪಿಟಿಸಿಎಲ್ ಹಾಗೂ ಹಾಲು ಒಕ್ಕೂಟದಲ್ಲಿ ಸುಮಾರು ಒಂದು ಲಕ್ಷ ಉಧ್ದೋಗ ಸೃಷ್ಟಿಮಾಡಿ ಜಿಲ್ಲೆಯ ಯುವಕರಿಗೆ ಉದ್ಯೋಗ ನೀಡಲು ತಂದೆ ರೇವಣ್ಣ ತಾಯಿ ಭವಾನಿ ಆಲೋಚನೆ ಮಾಡಿದ್ದಾರೆ. ಮೋದಿ ಉದ್ಯೋಗ ನೀಡುವುದಾಗಿ ಸುಳ್ಳು ಹೇಳಿದ್ದಾರೆ ಆದರೆ ದೇವೇಗೌಡ ಕುಟುಂಬದವರು ಸುಳ್ಳು ಭರವಸೆ ನೀಡುವುದಿಲ್ಲ,
ಯುವಕರಿಗಾಗಿ ಶ್ರಮಿಸುತ್ತೇವೆ. ನಾನು ಲೋಕಸಭಾ ಸದಸ್ಯನಾದರೆ ಅಧಿಕಾರದಲ್ಲಿ ಇರುವವರೆಗೆ ಮೈತ್ರಿಧರ್ಮವನ್ನು ಪಾಲನೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮೈತ್ರಿ ಧರ್ಮ ಪಾಲಿಸಿ: ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರಜ್ವಲ್ ಜೆಡಿಎಸ್ ಅಭ್ಯರ್ಥಿ ಎಂದು ಭಾವಿಸದೇ ತಮ್ಮ ಪಕ್ಷದ ಅಭ್ಯರ್ಥಿ ಎಂದು ಮತದಾನ ಮಾಡಬೇಕು. ಕಾಂಗ್ರೆಸ್ ಜೆಡಿಎಸ್ ಬೇರೆ ಬೇರೆ ಮನೆಯ ವರಲ್ಲ ಒಂದೇ ಮನೆಯಲ್ಲಿ ಇದ್ದುಕೊಂಡು ಚುನಾವಣೆ ನಡೆಸುತ್ತಿ ದ್ದೇವೆ ಎನ್ನುವುದನ್ನು ಮರೆಯಬಾರದು ಎಂದು ಮನವಿ ಮಾಡಿದರು.
ಸಕ್ಕರೆ ಕಾರ್ಖಾನೆ ಆರಂಭ: ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಚಾಮುಂಡೇಶ್ವರಿ ಶುಗರ್ವ ತಿಯಿಂದ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಿ ಆ.30 ರೊಳಗೆ ಪ್ರಯೋಗಿಕವಾಗಿ ಕಬ್ಬು ಅರೆಯಲಾಗುವುದು. ಕೆಲವರು ಸಹಕಾರಿ ಸಕ್ಕರೆ ಕಾರ್ಖಾನೆ ಬಾಗಿಲು ಮುಚ್ಚಿದ್ದಾರೆ ಎನ್ನುವ ಮಾತಿಗೆ ಕಿವಿ ಕೊಡುವುದು ಬೇಡ ಎಂದು ರೈತರಿಗೆ ಪ್ರಜ್ವಲ್ ದೈರ್ಯ ತುಂಬಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್.ಪುಟ್ಟಸ್ವಾಮಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ಮಂಜೇಗೌಡ, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಕೆ.ಎಲ್.ಸುರೇಶ್, ಶ್ರೀಕಂಠಪ್ಪ, ಎ.ಇ.ಚಂದ್ರಶೇಖರ್, ಕೃಷ್ಣೇಗೌಡ, ಲೋಕೇಶ್, ದೇವರಾಜು, ಸಿ.ಎನ್.ಶಶಿಧರ್ ಮುಂತಾದವರು ಉಪಸ್ಥಿತರಿದ್ದರು.