ಡಿಜಿಟಲ್ ಕಂಟೆಂಟ್ ಗಳ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರಕಾರ ಜಾರಿ ಮಾಡಿರುವ ನಿಯಮಗಳನ್ನು ಟ್ವಿಟರ್, ಫೇಸ್ ಬುಕ್, ಇನ್ ಸ್ಟಾಗ್ರಾಂ ಸೇರಿದಂತೆ ಬಹುತೇಕ ಸಾಮಾಜಿಕ ಜಾಲತಾಣಗಳು ಇನ್ನೂ ಅನುಸರಿಸಿಲ್ಲ. ಮಂಗಳವಾರದಿಂದಲೇ ಈ ನಿಯಮಗಳು ಜಾರಿಗೆ ಬರಲಿದ್ದು, ನಿಯಮ ಪಾಲಿಸದ ತಾಣಗಳನ್ನು ಸರಕಾರ ಬ್ಲಾಕ್ ಮಾಡುವ ಸಾಧ್ಯತೆ ಅಧಿಕವಾಗಿದೆ.
Advertisement
ನಿಯಮ ಪಾಲನೆ ಅಧಿಕಾರಿಗಳ ನೇಮಕ, ಭಾರತದಲ್ಲಿರುವ ಆ ಅಧಿಕಾರಿಗಳ ಹೆಸರು ಮತ್ತು ಸಂಪರ್ಕ ಸಂಖ್ಯೆ ಸಲ್ಲಿಕೆ, ದೂರುಗಳು ಬಂದರೆ ಕೂಡಲೇ ಪರಿಹರಿಸುವುದು, ಆಕ್ಷೇಪಾರ್ಹ ಕಂಟೆಂಟ್ ಗಳ ಮೇಲೆ ನಿಗಾ ಇಡುವುದು ಮತ್ತು ಅವುಗಳನ್ನು ತೆಗೆದುಹಾಕುವುದು ಸೇರಿದಂತೆ ಕೆಲವೊಂದು ನಿಯಮಗಳನ್ನು ಪಾಲಿಸುವಂತೆ ಕಳೆದ ಫೆ.25ರಂದು ಸರಕಾರ ಸೂಚಿಸಿತ್ತು. ಜತೆಗೆ ಇದನ್ನು ಪೂರ್ಣಗೊಳಿಸಲು 3 ತಿಂಗಳ ಗಡುವು ನೀಡಿತ್ತು. ಮೇ 25ರಂದು ಈ ಗಡುವು ಮುಗಿದಿದ್ದು, ಜಾಲತಾಣಗಳಿಗೆ ನಿಷೇಧದ ಭೀತಿ ಶುರುವಾಗಿದೆ.
ಹೊಸದಿಲ್ಲಿ: ಕಾಂಗ್ರೆಸ್ ನದ್ದು ಎನ್ನಲಾದ ಟೂಲ್‌ಕಿಟ್ ಅನ್ನು “ತಿರುಚಿದ ಅಂಶಗಳುಳ್ಳ ವಿಷಯ’ ಎಂದು ಉಲ್ಲೇಖೀಸಿದ್ದ ಟ್ವಿಟರ್‌ಗೆ ದಿಲ್ಲಿ ಪೊಲೀಸರ ವಿಶೇಷ ಘಟಕ ಸೋಮವಾರ ನೋಟಿಸ್ ಜಾರಿ ಮಾಡಿದೆ. ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ಟೂಲ್‌ಕಿಟ್ ಕುರಿತು ಮಾಡಿದ್ದ ಟ್ವೀಟ್ ಅನ್ನು ಟ್ವಿಟರ್ ಇತ್ತೀಚೆಗೆ “ತಿರುಚಿದ ಅಂಶಗಳುಳ್ಳ ವಿಷಯ’ ಎಂದು ಘೋಷಿಸದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ನೇತೃತ್ವದ ಸರಕಾರವನ್ನು ದೂಷಿಸಲೆಂದು ಕಾಂಗ್ರೆಸ್ ಈ ಟೂಲ್ ಕಿಟ್ ಸಿದ್ಧಪಡಿಸಿತ್ತು ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಇದನ್ನು ನಕಲಿ ಟೂಲ್‌ಕಿಟ್ ಎಂದು ಕರೆದಿದ್ದ ಕಾಂಗ್ರೆಸ್ ಎಫ್ಐಆರ್ ಕೂಡ ದಾಖಲಿಸಿತ್ತು. ಪ್ರಕರಣ ತನಿಖೆ ಹಂತದಲ್ಲಿರುವಾಗ ನೀವು ಮಧ್ಯಪ್ರವೇಶಿಸಬೇಡಿ ಎಂದು ಟ್ವಿಟರ್‌ಗೆ ಕೇಂದ್ರ ಸರಕಾರ ಖಡಕ್ ಸೂಚನೆಯನ್ನೂ ನೀಡಿತ್ತು. ಸೋಮವಾರ ಪೊಲೀಸರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಟ್ವಿಟರ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದಾರೆ.
Related Articles
Advertisement