Advertisement

ದೇವರಿಚ್ಛಿಸಿದ್ರೆ ನಾಳೆಯೇ ರಾಜಕೀಯಕ್ಕೆ ಸೇರುವೆ: ರಜನಿ

03:45 AM May 16, 2017 | |

ಚೆನ್ನೈ: ತಮಿಳು ಸೂಪರ್‌ಸ್ಟಾರ್‌, ನಟ ರಜನಿಕಾಂತ್‌ ರಾಜಕೀಯ ಸೇರುತ್ತಾರಾ? ಈ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ ಯಾವುದೇ ಸಂದರ್ಭದಲ್ಲಿ ರಜನಿ ರಾಜಕೀಯ ಸೇರಬಹುದು ಎಂಬ ಗುಮಾನಿ ಹಿಂದೆಂದಿಗಿಂತಲೂ ಈಗ ಬಲವಾಗಿದೆ.

Advertisement

ಇದಕ್ಕೆ ಕಾರಣ ಅವರ ಹೇಳಿಕೆ. “ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಆದರೆ, ದೇವರು ಇಚ್ಛಿಸಿದ್ದೇ ಆದಲ್ಲಿ, ನಾಳೆಯೇ ರಾಜಕೀಯ ಪ್ರವೇಶಿಸುತ್ತೇನೆ’ ಎಂದು ಹೇಳುವ ಮೂಲಕ ರಜನಿಕಾಂತ್‌ ಅಚ್ಚರಿ ಮೂಡಿಸಿದ್ದಾರೆ.

8 ವರ್ಷಗಳ ಬಳಿಕ ಸೋಮವಾರ ಚೆನ್ನೈನಲ್ಲಿ ನಡೆದ “ಮೀಟ್‌ ಆ್ಯಂಡ್‌ ಗ್ರೀಟ್‌’ ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ರಜನಿ ಈ ಮಾತುಗಳನ್ನು ಹೇಳಿದ್ದಾರೆ. ಚೆನ್ನೈನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 700ಕ್ಕೂ ಹೆಚ್ಚು ಮಂದಿ ಸೇರಿದ್ದರು.

“ಬದುಕಲ್ಲಿ ನಾವೇನು ಮಾಡಬೇಕು ಎಂಬುದನ್ನು ದೇವರು ನಿರ್ಧರಿಸುತ್ತಾನೆ. ಸದ್ಯಕ್ಕೆ ನಾನು ನಟನಾಗಬೇಕು ಎಂದು ಅವನು ಬಯಸಿದ್ದಾನೆ. ಅದರಂತೆ ನಾನು ನನ್ನ ಕರ್ತವ್ಯವನ್ನು ಪೂರೈಸುತ್ತಿದ್ದೇನೆ. ಒಂದು ವೇಳೆ ನಾಳೆ ದೇವರು ನಾನು ರಾಜಕೀಯಕ್ಕೆ ಸೇರ್ಪಡೆಯಾಗಬೇಕು ಎಂದು ಇಚ್ಛಿಸಿದರೆ, ನಾಳೆಯೇ ರಾಜಕೀಯಕ್ಕೆ ಸೇರಬಹುದು’ ಎಂದಿದ್ದಾರೆ.
ಅಷ್ಟೇ ಅಲ್ಲದೇ, “ಒಂದು ವೇಳೆ ನಾನು ರಾಜಕೀಯ ಪ್ರವೇಶಿಸಿದ್ದೇ ಆದಲ್ಲಿ, ಸತ್ಯವಂತನಾಗಿರುತ್ತೇನೆ ಮತ್ತು ಹಣದ ಹಿಂದೆ ಬಿದ್ದವರೊಂದಿಗೆ ಸೇರುವುದಿಲ್ಲ’ ಎಂದೂ ಸ್ಪಷ್ಟಪಡಿಸಿದ್ದಾರೆ.

ರಾಜಕೀಯ ಬೆಂಬಲಿಸಿ ತಪ್ಪು ಮಾಡಿದ್ದೆ…
ಜೊತೆಗೆ 1996ರಲ್ಲಿ ತಾವು ಚುನಾವಣೆ ವೇಳೆ ಡಿಎಂಕೆಯನ್ನು ಬೆಂಬಲಿಸಿ, ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿರುದ್ಧ ಪ್ರಚಾರ ನಡೆಸಿದ್ದನ್ನೂ ಮಾತಿನಲ್ಲಿ ಪ್ರಸ್ತಾಪಿಸಿದರು. “ಅಂದು ನಾನು ರಾಜಕೀಯ ಬೆಂಬಲಿಸಿ ತಪ್ಪು ಮಾಡಿದ್ದೆ. ಅದು ರಾಜಕೀಯದಲ್ಲಿ ನಡೆದ ಆ್ಯಕ್ಸಿಡೆಂಟ್‌. ಆ ಬಳಿಕ ನನ್ನ ಹೆಸರನ್ನು ರಾಜಕಾರಣಿಗಳು ಹಲವು ಬಾರಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಆದರೆ ನಾನೀಗ ಸ್ಪಷ್ಟಪಡಿಸಬೇಕಿದೆ. ಯಾವ ಪಕ್ಷವನ್ನೂ ನಾನು ಸೇರಲ್ಲ’ ಎಂದೂ ಹೇಳಿದ್ದಾರೆ.

Advertisement

ಅಂದು ಜಯಲಲಿತಾ ವಿರುದ್ಧ ಪ್ರಚಾರದಲ್ಲಿ ರಜನಿ “ಒಂದು ವೇಳೆ ಜಯಲಲಿತಾ ಮತ್ತೆ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ, ತಮಿಳುನಾಡನ್ನು ರಕ್ಷಿಸಲು ದೇವರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದ್ದರು. ಆ ಚುನಾವಣೆಯಲ್ಲಿ ಜಯಲಲಿತಾ ಅವರ ಪಕ್ಷಕ್ಕೆ ಸೋಲಾಗಿತ್ತು. ಇತ್ತೀಚೆಗೆ, “ಅವರು ಬಿಜೆಪಿ ಸೇರಲಿದ್ದಾರೆ. ಕೇಂದ್ರ ಸಚಿವ ಗಡ್ಕರಿ ಅವರು ರಜನಿ ಜತೆ ಮಾತುಕತೆ ನಡೆಸುತ್ತಿದ್ದಾರೆ’ ಎಂದೂ ಸುದ್ದಿಯಾಗಿತ್ತು.

ಮೀಟ್‌ ಆ್ಯಂಡ್‌ ಗ್ರೀಟ್‌ ಕಾರ್ಯಕ್ರಮ 4 ದಿನ ನಡೆಯಲಿದ್ದು, ವ್ಯಾಪಕ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಅಲ್ಲದೇ ರಜನಿ ಜೊತೆಗೆ ಸೆಲ್ಫಿ ತೆಗೆಯಲು ಕಾಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next