ನವದೆಹಲಿ : ಎಲ್ ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯ ಕುರಿತು ಕಾಂಗ್ರೆಸ್ ಬುಧವಾರ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ಗೃಹಬಳಕೆದಾರರಿಗೆ 500 ರೂ. ಅಡಿಯಲ್ಲಿ ಸಿಲಿಂಡರ್‌ಗಳನ್ನು ಒದಗಿಸುವ ಮೂಲಕ ಲೂಟಿಯನ್ನು ಕೊನೆಗೊಳಿಸುವುದಾಗಿ ಹೇಳಿದೆ.
ಅಡುಗೆ ಅನಿಲ ಎಲ್ ಪಿಜಿ ಬೆಲೆಯಲ್ಲಿ ಬುಧವಾರ ಪ್ರತಿ ಸಿಲಿಂಡರ್‌ಗೆ 50 ರೂ.ಗಳಷ್ಟು ಹೆಚ್ಚಿಸಲಾಗಿದೆ. ಸುಮಾರು ಎಂಟು ತಿಂಗಳಲ್ಲಿ ದರಗಳಲ್ಲಿ ಮೊದಲ ಹೆಚ್ಚಳ ಇದಾಗಿದ್ದು, ಮೂರು ಈಶಾನ್ಯ ರಾಜ್ಯಗಳಲ್ಲಿ ಮತದಾನ ಮುಗಿದ ಕೆಲವೇ ದಿನಗಳಲ್ಲಿ ಘೋಷಿಸಲಾಗಿದ್ದು ಪ್ರತಿಪಕ್ಷಗಳು ಕಟುವಾಗಿ ಟೀಕಿಸುತ್ತಿವೆ.
ದೆಹಲಿಯಲ್ಲಿ, ಸರಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 1,053 ರಿಂದ 1,103 ರೂ. ಆಗಿದೆ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಅಧಿಕ ಹಣದುಬ್ಬರವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ನ ಬೆಲೆಯನ್ನು 50 ರೂ. ಮತ್ತು ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು 350 ರೂ.ಗಳಷ್ಟು ಹೆಚ್ಚಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ಹೊರ ಹಾಕಿದರು.
ಪಕ್ಷದ ವಕ್ತಾರ ಗೌರವ್ ವಲ್ಲಭ್ ಮಾತನಾಡಿ, ಎಲ್‌ಪಿಜಿ ಬೆಲೆ ಏರಿಕೆಯ ರೂಪದಲ್ಲಿ ಪ್ರಧಾನಿ ಮೋದಿ ಜನರಿಗೆ ಹೋಳಿ ಉಡುಗೊರೆ ನೀಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರಾಜಸ್ಥಾನದಲ್ಲಿ ತನ್ನ ಸರಕಾರ ನೀಡುವ ಮಾದರಿಯಲ್ಲಿ 500 ರೂ. ಅಡಿಯಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿ, ”2014 ರಿಂದ, ಸರಕಾರವು ಸಿಲಿಂಡರ್‌ಗಳ ಬೆಲೆಯನ್ನು ಶೇಕಡಾ 275 ರಷ್ಟು ಹೆಚ್ಚಿಸಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಸಿಲಿಂಡರ್ 400 ರೂಪಾಯಿ ಇತ್ತು, ರಾಜಸ್ಥಾನದ ಕಾಂಗ್ರೆಸ್ ಸರ್ಕಾರ 500 ರೂಪಾಯಿಗೆ ಸಿಲಿಂಡರ್ ನೀಡುತ್ತಿದೆ, ಪ್ರಧಾನಿ ಹೇಳಬೇಕು, ಹಾಗಾದರೆ ನಿಮ್ಮ ಸರಕಾರ ಏಕೆ ಈ ರೀತಿ ಸಾರ್ವಜನಿಕರನ್ನು ಲೂಟಿ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಬೆಲೆ ಏರಿಕೆಯ ಕುರಿತು ಸರಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗೆ 1,103 ರೂ. ಉಜ್ವಲೇತರ ಬಳಕೆದಾರರಿಗೆ ಸರಕಾರವು ಯಾವುದೇ ಸಬ್ಸಿಡಿಯನ್ನು ಪಾವತಿಸುವುದಿಲ್ಲ ಮತ್ತು ಇದು ಅಡುಗೆ ಅನಿಲ ಮರುಪೂರಣಗಳನ್ನು ಖರೀದಿಸಲು ಪಾವತಿಸಬೇಕಾದ ದರವಾಗಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಎಲ್‌ಪಿಜಿ ಸಂಪರ್ಕ ಪಡೆದ 9.58 ಕೋಟಿ ಬಡವರಿಗೆ ಪ್ರತಿ ಸಿಲಿಂಡರ್ ಸಬ್ಸಿಡಿಗೆ 200 ರೂ.ಗಳನ್ನು ಸರಕಾರ ಪಾವತಿಸುತ್ತದೆ. ಅವುಗಳ ಪರಿಣಾಮಕಾರಿ ಬೆಲೆ ಪ್ರತಿ ಸಿಲಿಂಡರ್‌ಗೆ 903 ರೂ.ಆಗಿದೆ.