ದೋಟಿಹಾಳ: ಗೋತಗಿ ಗ್ರಾಮದಲ್ಲಿ ಶನಿವಾರ (ಅ.15) “ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮವಿದ್ದು, ಡಿಸಿ ಸುಂದರೇಶ ಬಾಬು ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಅವರು ನಮ್ಮ ಗ್ರಾಮಕ್ಕೆ ಆಗಮಿಸಿ ಇಲ್ಲಿಯ ಜ್ವಲಂತ ಸಮಸ್ಯೆಗೆ ಮುಕ್ತಿ ನೀಡುತ್ತಾರೆ ಎನ್ನುವ ಆಶಾಭಾವ ಗ್ರಾಮಸ್ಥರಲ್ಲಿ ಮೂಡಿದೆ.
ದೋಟಿಹಾಳ ಗ್ರಾಮದ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ ನನೆಗುದಿಗೆ ಬಿದ್ದು ನಾಲ್ಕು ವರ್ಷ ಕಳೆದರೂ ಇದಕ್ಕೆ ಇನ್ನೂ ಮುಕ್ತಿ ಸಿಗುತ್ತಿಲ್ಲ. ಹೀಗಾಗಿ ಪಕ್ಕದ ಗೋತಗಿ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಈ ಮಾರ್ಗವಾಗಿಯೇ ಆಗಮಿಸುವುದರಿಂದ ಇಲ್ಲಿಯ ಸಮಸ್ಯೆಗೆ ಪರಿಹಾರ ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.
ಈ ರಸ್ತೆ ಅಗಲೀಕರಣದ ಬಗ್ಗೆ 2019 ಮಾರ್ಚ್‌ನಲ್ಲಿ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಅಂದಿನ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ರಸ್ತೆ ಅಗಲೀಕರಣದ ಬಗ್ಗೆ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಪತ್ರ ನೀಡಿದ್ದರು. ಆದರೆ ಇಲ್ಲಿವರೆಗೂ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿಲ್ಲ. ಹೀಗಾಗಿ ಸದ್ಯ ಗೋತಗಿ ಗ್ರಾಮಕ್ಕೆ ಆಗಮಿಸುವ ಜಿಲ್ಲಾಧಿ ಕಾರಿಗಳು ದೋಟಿಹಾಳ ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿಯ ಜ್ವಲಂತ ಸಮಸ್ಯೆಗೆ ಪರಿಹಾರ ನೀಡಬೇಕೆನ್ನುವುದು ಗ್ರಾಮಸ್ಥರ ಒತ್ತಾಸೆ.
ರಸ್ತೆ ಅಗಲೀಕರಣ ಆಗದ್ದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಇದಕ್ಕೊಂದು ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಜಿಲ್ಲಾಧಿಕಾರಿಗಳು ದೋಟಿಹಾಳ ಮಾರ್ಗವಾಗಿ ಗೋತಗಿ ಗ್ರಾಮಕ್ಕೆ ಹೋಗಬೇಕು. ಆಗ ಮಾತ್ರ ಇಲ್ಲಿಯ ರಸ್ತೆ ಸಮಸ್ಯೆ ಅವರಿಗೆ ತಿಳಿಯುತ್ತಿದೆ ಹಾಗೂ ಇದಕ್ಕೊಂದು ಪರಿಹಾರ ಸಿಗುತ್ತದೆ.
-ರಾಜೇಸಾಬ ಯಲಬುರ್ಗಿ., ದೋಟಿಹಾಳ ಹೋಬಳಿ ಹೋರಾಟ ಸಮಿತಿ ಅಧ್ಯಕ್ಷ
ಜಿಲ್ಲಾಧಿಕಾರಿಗಳು ಯಾವ ಮಾರ್ಗವಾಗಿ ಗೋತಗಿ ಗ್ರಾಮದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ ಎಂಬುದು ನಮಗೆ ಗೊತ್ತಿಲ್ಲ. ಅಲ್ಲಿಯ ಸಮಸ್ಯೆಗಳು ಏನೇ ಇದ್ದರೂ ಗ್ರಾಮಸ್ಥರು ಕಾರ್ಯಕ್ರಮಕ್ಕೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ತಿಳಿಸಬಹುದು. –
ಗುರುರಾಜ ಛಲವಾದಿ, ತಹಶೀಲ್ದಾರ್, ಕುಷ್ಟಗಿ
-ಮಲ್ಲಿಕಾರ್ಜುನ ಮೆದಿಕೇರಿ