ಗದಗ: ಈ ಬಾರಿಯ ಲೋಕಸಭೆ ಚುನಾವಣೆ ರೋಣ ಮತಕ್ಷೇತ್ರದ ಮಟ್ಟಿಗೆ ಬಿಜೆಪಿಯ ಹಾಲಿ ಶಾಸಕ ಕಳಕಪ್ಪ ಬಂಡಿ ಹಾಗೂ ಕಾಂಗ್ರೆಸ್‌ನ ಮಾಜಿ ಶಾಸಕರಾದ ಜಿ.ಎಸ್. ಪಾಟೀಲ, ಶ್ರೀಶೈಲಪ್ಪ ಬಿದರೂರ ಅವರಿಗೆ ಪ್ರತಿಷ್ಠೆಯ ಕಣ. ಕೊನೆಗಳಿಗೆಯಲ್ಲಿ ಬಿದರೂರ ಸಾಹುಕಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ ಯಾರಿಗೆ ನಷ್ಟ-ಯಾರಿಗೆ ಲಾಭ ಎಂಬುವುದರೊಂದಿಗೆ ಪಕ್ಷಗಳ ಮುನ್ನಡೆ-ಹಿನ್ನಡೆ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ಕಳೆದ ಏ. 23ರಂದು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮತದಾನ ಪೂರ್ಣಗೊಂಡಿದ್ದರಿಂದ ಕದನ ಕಲಿಗಳು ರಿಲ್ಯಾಕ್ಸ್ ಮೂಡ್‌ಗೆ ಮರಳಿದ್ದರೆ, ರೋಣ ಕ್ಷೇತ್ರದ ಮತದಾರರು ಹಾಗೂ ರಾಜಕೀಯ ನಾಯಕರು ಅಭ್ಯರ್ಥಿಗಳು ಗಳಿಸಬಹುದಾದ ಮತಗಣಿತದಲ್ಲಿ ಕಾರ್ಯಪ್ರವರ್ತರಾಗಿದ್ದಾರೆ.
ರೋಣ ಕ್ಷೇತ್ರ ವ್ಯಾಪ್ತಿಯ ವಿವಿಧ ಬೂತ್ ಮಟ್ಟದಲ್ಲಿ ಆಗಿರುವ ಮತದಾನವನ್ನು ಮುಂದಿಟ್ಟುಕೊಂಡು ಆಯಾ ಪಕ್ಷಗಳ ನಾಯಕರು ತಮಗೆ ಎಲ್ಲಿ ಪ್ಲಸ್? ಎಲ್ಲಿ ಮೈನಸ್ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಗ್ರಾಮೀಣ ಪ್ರದೇಶದ ಕಟ್ಟೆಗಳು, ಚಹ ಅಂಗಡಿಗಳು, ಕಟಿಂಗ್ ಶಾಪ್, ಹೋಟೆಲ್ ಹಾಗೂ ಅಂಗಡಿ ಮುಂಗಟ್ಟು, ಬಸ್ ನಿಲ್ದಾಣಗಳಲ್ಲೂ ಮೇ 23 ರಂದು ಪ್ರಕಟಗೊಳ್ಳುವ ಚುನಾವಣಾ ಫಲಿತಾಂಶ ಹೀಗಿರಬಹುದು ಎಂಬ ಲೆಕ್ಕಾಚಾರಗಳು ಬಿರುಸಾಗಿವೆ.
2014ರ ಲೋಕಸಭೆ ಚುಣಾವಣೆ ಸಂದರ್ಭದಲ್ಲಿ ರೋಣ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಬಿಜೆಪಿ ಅಭ್ಯರ್ಥಿಗೆ 11 ಸಾವಿರ ಮತಗಳ ಮುನ್ನಡೆಯಾಗಿತ್ತು. ಅದಕ್ಕೂ ಮುನ್ನ ನಡೆದ 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಿ.ಎಸ್. ಪಾಟೀಲ 18 ಸಾವಿರ ಮತಗಳ ಲೀಡ್‌ನಿಂದ ಜಯಭೇರಿ ಬಾರಿಸಿದ್ದರು. ಆನಂತರ 2018ರ ವಿಧಾನಸಭೆ ಚುನಾವಣೆಯಲ್ಲಿ 7,500 ಮತಗಳ ಅಂತರದಿಂದ ಬಿಜೆಪಿಯ ಕಳಕಪ್ಪ ಬಂಡಿ ವಿಜಯಮಾಲೆ ಧರಿಸಿದ್ದರು. ಹಿಂದಿನ ಚುನಾವಣಾ ಮತಗಳಿಕೆ ಪ್ರಮಾಣವನ್ನು ಅವಲೋಕಿಸಿದರೆ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾವು-ಏಣಿ ಆಟವಾಡಿದಂತಿವೆ.
ಆದರೆ, ಈ ಬಾರಿ ಲೋಕಸಭಾ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಅವರು ಬಿಜೆಪಿ ಬಿಗ್ ಶಾಕ್ ನೀಡಿದ್ದರು. ಮೂಲತಃ ರೋಣದ ಸೂಡಿ ಗ್ರಾಮದವರಾದ ಬಿದರೂರ, ಶತಾಯಗತಾಯ ಡಿ.ಆರ್. ಪಾಟೀಲ ಅವರನ್ನು ಗೆಲ್ಲಿಸಿ, ತಮ್ಮನ್ನು ಅಪಮಾನಕರ ರೀತಿಯಲ್ಲಿ ನಡೆಸಿಕೊಂಡ ಬಿಜೆಪಿ ನಾಯಕರಿಗೆ ಪಾಠ ಕಲಿಸುವುದಾಗಿ ತೊಡೆ ತಟ್ಟಿದ್ದರು.
ಈ ಬೆಳವಣಿಗೆಯಿಂದ ತಮಗೆ ಲಾಭವಾಗಲಿದೆ ಎಂದು ಕಾಂಗ್ರೆಸ್ ನಾಯಕರು ಬೀಗಿದರು. ಬಿದರೂರ ಪಕ್ಷದ ಹಿರಿಯ ನಾಯಕರು ಅಷ್ಟೇ. ಅವರಿದ್ದಾಗ ಬಿಜೆಪಿಗೆ ಲಾಭವಾಗಿಲ್ಲ. ಪಕ್ಷ ತೊರೆದಿದ್ದರಿಂದ ನಷ್ಟವಿಲ್ಲವೆಂದು ಬಿಜೆಪಿಗರು ಒಳಗೊಳಗೇ ಸಮಾಧಾನಪಟ್ಟಿದ್ದಾರೆ.
ಮಾಜಿ ಶಾಸಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿರುವ ಜಿ.ಎಸ್. ಪಾಟೀಲ, ಹಾಲಿ ಶಾಸಕ ಕಳಕಪ್ಪ ಬಂಡಿ ಅವರಿಗೆ ತಮ್ಮ ಕ್ಷೇತ್ರದಲ್ಲಿ ಪಕ್ಷಕ್ಕೆ ಮತಗಳ ಮುನ್ನಡೆ ನೀಡುವ ಒತ್ತಡಕ್ಕೆ ಸಿಲುಕಿದ್ದಾರೆ. ಹೀಗಾಗಿ ಉಭಯ ಪಕ್ಷಗಳ ಮೂವರು ನಾಯಕರಿಗೆ ಈ ಬಾರಿ ರೋಣ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿ ತಮ್ಮ ಪ್ರಾಬಲ್ಯ ಪ್ರದರ್ಶಿಸುವ ಅನಿವಾರ್ಯತೆ ಎದುರಾಗಿದೆ ಎಂಬುವುದು ಸಾರ್ವಜನಿಕರ ವಿಶ್ಲೇಷಣೆ.
ಯಾವ ಪಕ್ಷಕ್ಕೆ ಎಲ್ಲಿ ‘ಋಣ’?: ಹಾಲಿ ಶಾಸಕ ಕಳಕಪ್ಪ ಬಂಡಿ ಅವರ ತವರೂರಾದ ಗಜೇಂದ್ರಗಡ ಜನರು ಹಿಂದಿನಿಂದಲೂ ಬಿಜೆಪಿಗೆ ಜೈಕಾರ ಹಾಕಿದರೆ, ರೋಣ ಪಟ್ಟಣ ಕಾಂಗ್ರೆಸ್ ಪರವಾಗಿದೆ. ಸೂಡಿ ಜಿ.ಪಂ. ಬಿಜೆಪಿ ಪ್ರಭಾವ ಹೆಚ್ಚಿದ್ದರೆ, ಅಬ್ಬಿಗೇರಿ, ನಿಡಗುಂದ ಜಿ.ಪಂ. ಕ್ಷೇತ್ರದ ಹಳ್ಳಿಗಲ್ಲಿ ಉಭಯ ಪಕ್ಷಗಳು ಭಾಗಶಃ ಹಿಡಿತ ಹೊಂದಿದೆ. ಅಲ್ಪಸಂಖ್ಯಾತರು, ಕುರುಬರು ಹೆಚ್ಚಿನ ಸಂಖ್ಯೆಯಲ್ಲಿರುವ ಹಳ್ಳಿಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಲಿದೆ ಎಂಬ ಲೆಕ್ಕಾಚಾರ ನಡೆದಿದೆ. ಅದರಂತೆ ಮುಂಡರಗಿ ಭಾಗದಲ್ಲೂ ಪಕ್ಷಗಳ ಬೆಂಬಲಿಗರ ಆಧಾರದ ಮೇಲೆ ಬಿಜೆಪಿ ಕಾಂಗ್ರೆಸ್ ಮುನ್ನಡೆ-ಹಿನ್ನಡೆ ಚರ್ಚೆ ನಡೆಯುತ್ತಿದ್ದು, ಮೇ 23ರಂದು ಪ್ರಕಟಗೊಳ್ಳುವ ಫಲಿತಾಂಶವೇ ಅದಕ್ಕೆ ಉತ್ತರ.
•ವೀರೇಂದ್ರ ನಾಗಲದಿನ್ನಿ